ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಎಂಬ ಈ ಮೂರು ಸ್ಥಾನಗಳಿಗೆ ಡಿ.೪ ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆ ದಿನವಾಗಿದ್ದು, ನಾಲ್ವರು ನಾಮಪತ್ರ ಸಲ್ಲಿಸುವುದರೊಂದಿಗೆ ಒಟ್ಟು ಈವರೆಗೆ ೬ ಮಂದಿ ಚುನಾವಣಾ ಕಣ ಪ್ರವೇಶಿಸಿದ್ದಾರೆ.ಚುನಾವಣಾ ನಾಮಪತ್ರ ಸಲ್ಲಿಸಿದವರಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಅಜಯ್ ಕುಮಾರ್, ರಾಜ್ಯಪರಿಷತ್ ಸ್ಥಾನಕ್ಕೆ ಜಿಪಂ ಕುಡಿಯುವ ನೀರು ಸರಬರಾಜು ಇಲಾಖೆಯ ಎನ್.ಶ್ರೀನಿವಾಸರೆಡ್ಡಿ, ಆರೋಗ್ಯ ಇಲಾಖೆಯ ಪ್ರೇಮಾರಾಜು ಹಾಗೂ ಖಜಾಂಚಿ ಸ್ಥಾನಕ್ಕೆ ಶಿಕ್ಷಣ ಇಲಾಖೆಯ ವಿ.ಮುರಳಿ ಮೋಹನ್ ನಾಮಪತ್ರ ಸಲ್ಲಿಸಿದರು.
ಬಣದಲ್ಲಿ ಸಾಮಾಜಿಕ ನ್ಯಾಯ:ಚುನಾವಣೆಯಲ್ಲಿ ಹಾಲಿ ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು ಬಣದಿಂದ ಪರಿಶಿಷ್ಟ ಜಾತಿ ಮಹಿಳೆ ಪ್ರೇಮಾರಾಜು, ವಕ್ಕಲಿಗ ಸಮುದಾಯದಿಂದ ವೆಂಕಟಾಚಲಪತಿಗೌಡ, ಹಿಂದುಳಿದ ವರ್ಗದಿಂದ ಸ್ವತಃ ಅಧ್ಯಕ್ಷರೇ ಕಣದಲ್ಲಿದ್ದು, ತಲಾ ಒಂದೊಂದು ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲಾಗಿದೆ.
ಅಜಯ್ ಕುಮಾರ್ ಬಣದಲ್ಲಿ ಒಂದು ಪರಿಶಿಷ್ಟ ಜಾತಿಯಿಂದ ಅಜಯ್ ಕುಮಾರ್, ಹಿಂದುಳಿದ ವರ್ಗಗಳಿಂದ ವಿ.ಮುರಳಿ ಮೋಹನ್, ವಕ್ಕಲಿಗ ಸಮುದಾಯದಿಂದ ಎನ್.ಶ್ರೀನಿವಾಸರೆಡ್ಡಿ ಅವರಿಗೆ ಅವಕಾಶ ನೀಡಿ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನ ನಡೆಸಿದ್ದರೂ ಕಾರ್ಯಕಾರಿ ಸಮಿತಿಯಲ್ಲಿ ೧೧ ಮಹಿಳೆಯರಿದ್ದರೂ ಯಾರಿಗೂ ಆದ್ಯತೆ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.ಕಳೆದ ಸೋಮವಾರವೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಜಿ.ಸುರೇಶ್‌ಬಾಬು ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಖಜಾಂಚಿ ಸ್ಥಾನಕ್ಕೆ ಶಿಕ್ಷಕ ಗೆಳೆಯರ ಬಳಗದ ವೆಂಕಟಾಚಲಪತಿಗೌಡ ಅಂದೇ ನಾಮಪತ್ರ ಸಲ್ಲಿಸಿದ್ದು, ಇದೀಗ ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು ಮೂರು ಹುದ್ದೆಗಳಿಗೂ ನೇರ ಹಣಾಹಣಿ ಎದುರಾದಂತಾಗಿದೆ.
ನಾಮಪತ್ರಗಳ ಪರಿಶೀಲನೆ ನ.೨೮ರ ಗುರುವಾರ ನಡೆಯಲಿದ್ದು, ನಾಮಪತ್ರಗಳನ್ನು ವಾಪಸ್ಸು ಪಡೆಯಲು ನ.೨೯ ಕೊನೆದಿನವಾಗಿದೆ.ಜಿಲ್ಲೆಯ ಎಲ್ಲಾ ಐದು ತಾಲೂಕುಗಳ ಅಧ್ಯಕ್ಷರ ಐದು ಮತ ಹಾಗೂ ಜಿಲ್ಲಾ ಕೇಂದ್ರದ ಎಲ್ಲಾ ವೃಂದ ಇಲಾಖೆಗಳ ೬೬ ನಿರ್ದೇಶಕರು ಸೇರಿದಂತೆ ಒಟ್ಟು ೭೧ ಮತದಾರರು ಇಲ್ಲಿ ಮತದಾನದ ಅರ್ಹತೆ ಪಡೆದುಕೊಂಡಿದ್ದಾರೆ.
ರಾಜಕೀಯ ಹಸ್ತಕ್ಷೇಪದಿಂದ ಕೆಲ ನೌಕರರ ಬೇಸರ:ಈ ನಡುವೆ ಜಿಲ್ಲಾ ನೌಕರರ ಸಂಘದ ಚುನಾವಣೆಯಲ್ಲಿ ಮತದಾರರಾಗಿರುವ ನೌಕರರೇ ತಮ್ಮ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಈ ನಡುವೆ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಹೆಸರು ಹೇಳಿಕೊಳ್ಳಲು ಇಚ್ಛಿಸದ ಕೆಲವು ನೌಕರರು ನೋವು ತೋಡಿಕೊಂಡಿದ್ದು, ನೌಕರರ ಸಂಘದ ನಿರ್ದೇಶಕರಿಗೆ ಒತ್ತಡ ಹಾಕುತ್ತಿರುವುದಲ್ಲದೇ ರಾಜಕೀಯ ಪ್ರಭಾವ ಬೀರುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಕಣದಲ್ಲಿ ರಾಜಕೀಯ ಹಸ್ತಕ್ಷೇಪವಾಗಿರುವ ಕಾರಣ ಕಣ ರಂಗೇರಿದ್ದು, ಸುರೇಶ್‌ಬಾಬು ಬಣಕ್ಕೆ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಅವರ ಆಶೀರ್ವಾದ ಇದೆ ಎನ್ನಲಾಗಿದ್ದು, ವಿರೋಧಿ ಬಣಕ್ಕೆ ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರ ಕೃಪಾಶೀರ್ವಾದವಿದೆ ಎಂದೇ ಹೇಳಲಾಗುತ್ತಿದೆ.ಒಟ್ಟಾರೆ ಈ ಚುನಾವಣೆಯಲ್ಲಿ ರಹಸ್ಯ ಮತದಾನ ನಡೆಯುವುದರಿಂದ ಯಾರು ಯಾರಿಗೆ ಮತ ಹಾಕಿದರೂ ಎಂದು ಗೊತ್ತಾಗದ ಕಾರಣ ಕೆಲವು ಕಡೆಗಳಲ್ಲಿ ಆಣೆ, ಪ್ರಮಾಣಗಳ ಭರಾಟೆ ಜೋರಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.