ವ್ಯವಸ್ಥಾಪಕಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕೆಸ್ಸಾರ್ಟಿಸಿ ನೌಕರರ ಧರಣಿ

| Published : Jul 07 2025, 11:48 PM IST

ವ್ಯವಸ್ಥಾಪಕಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕೆಸ್ಸಾರ್ಟಿಸಿ ನೌಕರರ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ತಿಂಗಳು ಕೂಡ ವ್ಯವಸ್ಥಾಪಕಿಯ ವರ್ತನೆ ಬಗ್ಗೆ ಮಾಹಿತಿ ತಿಳಿದು ಕರೆದು ಬುದ್ದಿವಾದ ಹೇಳಿ, ನೌಕರರು ಕಷ್ಟದ ಸಂದರ್ಭದಲ್ಲಿ ರಜೆ ಕೇಳಿದಾಗ ಕೊಡಬೇಕು. ನಿಮ್ಮ ವರ್ತನೆ ಸರಿ ಮಾಡಿಕೊಳ್ಳಬೇಕು ಎಂದು ಹೇಳಿ ಕಳಿಸಿದ್ದೆ. ಆದರೆ ಇಂದು ಇಂತಹ ಪರಿಸ್ಥಿತಿಯಲ್ಲಿ ಬಂದು ಮಾತನಾಡಲು ತಮಗೆ ಬೇಸರವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ಡಿಪೋ ವ್ಯವಸ್ಥಾಪಕಿಯ ಕಿರುಕುಳಕ್ಕೆ ಬೇಸತ್ತು ಚಾಲಕ ಕಂ, ನಿರ್ವಾಹಕರಾದ ಹರೀಶ್‌ ಎಂಬುವವರು ಬಸ್‌ ನಿಲ್ದಾಣದಲ್ಲಿಯೇ ವಿಷ ಸೇವಿಸಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬೇಲೂರಿನ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಈ ಘಟನೆಯನ್ನು ಖಂಡಿಸಿ ಚಾಲಕ ಹಾಗೂ ನಿರ್ವಾಹಕರು ಡಿಪೋದಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕೆ ತಾಲೂಕು ಕರವೇ ಸಂಘಟನೆಯ ಕಾರ್ಯಕರ್ತರು ಬೆಂಬಲ ಸೂಚಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಕಂಡು ಚಿಕ್ಕಮಗಳೂರು ಕೆಎಸ್ಆರ್ಟಿಸಿ ಡೀಸಿ ಬೇಲೂರು ಬಸ್ ಡಿಪೋಗೆ ಆಗಮಿಸಿ, ದುರ್ಘಟನೆಗೆ ಕಾರಣವಾಗಿರುವ ಡಿಪೋ ವ್ಯವಸ್ಥಾಪಕಿಯನ್ನು ರಜೆಯ ಮೇಲೆ ಕಳಿಸಿ ನಂತರ ಅಮಾನತ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕರವೇ ನಾರಾಯಣಗೌಡ ಬಣದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಬೇಲೂರು ಡಿಪೋಗೆ ಇಂತಹ ಭ್ರಷ್ಟ ಹಾಗೂ ಉಡಾಫೆ ಅಧಿಕಾರಿ ಬೇಡ. ಸಾರಿಗೆ ಸಂಸ್ಥೆಯ ನೌಕರರು ನಮ್ಮ ಅಣ್ಣ ತಮ್ಮಂದಿರಿದ್ದ ಹಾಗೆ. ಅವರಿಗೆ ನೋವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ವ್ಯವಸ್ಥಾಪಕಿಯನ್ನು ಯಾವುದೇ ಕಾರಣಕ್ಕೂ ಡಿಪೋ ಒಳಗೆ ಕಾಲಿಡಲು ಬಿಡುವುದಿಲ್ಲ. ನೀವು ಕ್ರಮ ಕೈಗೊಳ್ಳದಿದ್ದರೆ ಇಲ್ಲೇ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಬಗ್ಗೆ ಚಿಕ್ಕಮಗಳೂರು ವಿಭಾಗದ ಡೀಸಿ ಮಾತನಾಡಿ, ಕಳೆದ ತಿಂಗಳು ಕೂಡ ವ್ಯವಸ್ಥಾಪಕಿಯ ವರ್ತನೆ ಬಗ್ಗೆ ಮಾಹಿತಿ ತಿಳಿದು ಕರೆದು ಬುದ್ದಿವಾದ ಹೇಳಿ, ನೌಕರರು ಕಷ್ಟದ ಸಂದರ್ಭದಲ್ಲಿ ರಜೆ ಕೇಳಿದಾಗ ಕೊಡಬೇಕು. ನಿಮ್ಮ ವರ್ತನೆ ಸರಿ ಮಾಡಿಕೊಳ್ಳಬೇಕು ಎಂದು ಹೇಳಿ ಕಳಿಸಿದ್ದೆ. ಆದರೆ ಇಂದು ಇಂತಹ ಪರಿಸ್ಥಿತಿಯಲ್ಲಿ ಬಂದು ಮಾತನಾಡಲು ತಮಗೆ ಬೇಸರವಾಗುತ್ತಿದೆ. ಚಾಲಕ ವಿಷ ಸೇವನೆ ಮಾಡಲು ಕಾರಣರಾದ ವ್ಯವಸ್ಥಾಪಕಿಯನ್ನು ರಜೆ ನೀಡಿ ಕಳಿಸಲಾಗಿದೆ. ಕೂಡಲೇ ಅವರನ್ನು ಅಮಾನತು ಮಾಡಲು ತಮಗೆ ಅಧಿಕಾರವಿಲ್ಲ. ಆದರೆ ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡುವುದಾಗಿ ಸ್ಪಷ್ಟಪಡಿಸಿದರು.

---------------------------------------------------------------