ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ‘ಕುಮಾರ’ ಸಂಭವ

| Published : Mar 24 2024, 01:33 AM IST

ಸಾರಾಂಶ

ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ವಿಶ್ರಾಂತಿಯಲ್ಲಿರುವ ಎಚ್.ಡಿ.ಕುಮಾರಸ್ವಾಮಿ ದೇಹಾರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವುದರೊಂದಿಗೆ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವುದಕ್ಕೆ ರೆಡಿಯಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ವಶವಾಗಿದೆ. ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಖಾಡ ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, ಜೆಡಿಎಸ್ ವರಿಷ್ಠರಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ವಿಶ್ರಾಂತಿಯಲ್ಲಿರುವ ಎಚ್.ಡಿ.ಕುಮಾರಸ್ವಾಮಿ ದೇಹಾರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವುದರೊಂದಿಗೆ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವುದಕ್ಕೆ ರೆಡಿಯಾಗುತ್ತಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಆರಂಭದಿಂದಲೂ ಉತ್ಸಾಹ ತೋರಿದ್ದರು. ಮತ್ತೊಂದೆಡೆ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ತಮಗೇ ಸಿಗಲಿದ್ದು ತಾವೇ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿ ಸಂಸದೆ ಸುಮಲತಾ ಇದ್ದರು. ಈ ನಡುವೆ ಮಾ.೧೫ರಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಬಂದ ಸಮಯದಲ್ಲಿ ಪಕ್ಷದ ಮಾಜಿ ಶಾಸಕರು ಹಾಗೂ ಕಾರ್ಯಕರ್ತರೆಲ್ಲರೂ ಒಕ್ಕೊರಲಿನಿಂದ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗಬೇಕು ಎಂದು ಪಟ್ಟು ಹಿಡಿದಿದ್ದರು.

ಈ ಸಮಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು, ಕಾರ್ಯಕರ್ತರ ಆಸೆಯನ್ನು ನಿರಾಸೆ ಮಾಡುವುದಿಲ್ಲ. ನಿಮ್ಮ ಭಾವನೆಗಳಿಗೆ ನಾವು ಸ್ಪಂದಿಸುತ್ತೇವೆ. ನಿಮ್ಮ ಆಸೆ ಏನಿದೆಯೋ ಅದನ್ನು ನೇರವೇರಿಸುವ ಮಾತುಗಳನ್ನಾಡಿ ಹೋಗಿದ್ದರು. ಎರಡು ದಿನಗಳ ಹಿಂದೆ ಎಚ್.ಡಿ.ಕುಮಾರಸ್ವಾಮಿಯವರೇ ಜೆಡಿಎಸ್ ಅಭ್ಯರ್ಥಿ ಎಂದು ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅವರು ಖಚಿತವಾಗಿ ಹೇಳಿದ್ದರು. ಇದೀಗ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ಬಂದಿರುವ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗುವುದು ಬಹುತೇಕ ನಿಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.

ಎಚ್‌ಡಿಕೆ ಸ್ಪರ್ಧಿಸಿದರಷ್ಟೇ ಗೆಲವು:

ಪ್ರಸ್ತುತ ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಯಾರೇ ಸ್ಪರ್ಧಿಸಿದರೂ ಪಕ್ಷದ ಗೆಲುವು ಕಷ್ಟ ಎನ್ನುವುದು ಮುಖಂಡರು, ಕಾರ್ಯಕರ್ತರ ಮನಸ್ಸಿನಲ್ಲಿದೆ. ಅದಕ್ಕಾಗಿ ದೇವೇಗೌಡರ ಕುಟುಂಬದವರೇ ಸ್ಪರ್ಧಿಸಬೇಕೆಂಬ ಒತ್ತಡವನ್ನು ಕಳೆದ ಹಲವು ತಿಂಗಳಿನಿಂದ ಹೇರುತ್ತಲೇ ಬಂದಿದ್ದರು. ದೇವೇಗೌಡರು ಮತ್ತು ನಿಖಿಲ್‌ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆಗೆ ಆಸಕ್ತಿ, ಒಲವು ತೋರಿರಲಿಲ್ಲ. ಆದರೆ, ಕುಮಾರಸ್ವಾಮಿ ಅವರು ಮಾತ್ರ ಮಂಡ್ಯದಿಂದ ಸ್ಪರ್ಧಿಸುವ ವಿಚಾರವಾಗಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡದೆ ಮೌನವಾಗಿಯೇ ಜಿಲ್ಲೆಯೊಳಗಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಲೇ ಬಂದಿದ್ದರು.

ಪಕ್ಷಕ್ಕೆ ಸಿಗುವುದೇ ಹೊಸ ಚೈತನ್ಯ:

ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಮಂಡ್ಯ ಕ್ಷೇತ್ರ ನನ್ನದೇ ಎಂದು ಬೀಗುತ್ತಿದ್ದ ಸುಮಲತಾ ತಣ್ಣಗಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೀವೇ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಬೇಕೆಂಬ ಸಲಹೆ ನೀಡಿದ್ದಾರೆ. ಇವೆಲ್ಲಾ ಬೆಳವಣಿಗೆಗಳ ನಡುವೆ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯೊಳಗೆ ನೆಲಕಚ್ಚಿರುವ ಜೆಡಿಎಸ್‌ಗೆ ಹೊಸ ಚೈತನ್ಯ ನೀಡುವುದಕ್ಕೆ ಬರುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಒಂದು ಕ್ಷೇತ್ರದಲ್ಲಷ್ಟೇ ಅಸ್ತಿತ್ವ:

೨೦೧೮ರಲ್ಲಿ ಜಿಲ್ಲೆಯ ಏಳಕ್ಕೆ ಏಳು ಸ್ಥಾನಗಳಲ್ಲಿ ಗೆದ್ದು ಮಂಡ್ಯ ಜಿಲ್ಲೆಯನ್ನು ದಳಪತಿಗಳು ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದರು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋಲಿನೊಂದಿಗೆ ಜಿಲ್ಲೆಯೊಳಗೆ ಜೆಡಿಎಸ್ ಪತನ ಆರಂಭವಾಯಿತು. ಎರಡು ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲನುಭವಿಸಿದ್ದಲ್ಲದೆ, ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ೬ ಕ್ಷೇತ್ರಗಳನ್ನು ಕಳೆದುಕೊಂಡು ಕಂಗೆಟ್ಟಿತು. ೧ ಕ್ಷೇತ್ರದಲ್ಲಷ್ಟೇ ಅಸ್ತಿತ್ವ ಕಾಯ್ದುಕೊಂಡಿರುವ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಕುಮಾರಸ್ವಾಮಿ ಮಂಡ್ಯ ಅಭ್ಯರ್ಥಿಯಾದಲ್ಲಿ ಗೆಲುವಿನ ಆಶಾಕಿರಣ ಮೂಡಬಹುದೆಂಬ ಹೊಂಗನಿಸಿನೊಂದಿಗೆ ಜೆಡಿಎಸ್‌ನವರು ಕಾತರದಿಂದ ಎದುರುನೋಡುತ್ತಿದ್ದಾರೆ.

ಕೇಂದ್ರ ಮಂತ್ರಿಯಾಗುವ ಆಶಯ:

ಎಚ್.ಡಿ.ಕುಮಾರಸ್ವಾಮಿ ಅವರು ಸಾಮಾನ್ಯ ಸಂಸದರಾಗಿ ದೆಹಲಿಗೆ ಹೋಗುವುದಕ್ಕಷ್ಟೇ ಲೋಕಸಭೆ ಪ್ರವೇಶಿಸುತ್ತಿಲ್ಲ. ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಕೃಷಿ ಮಂತ್ರಿಯಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ಇದರ ಜೊತೆಗೆ ಮಂಡ್ಯದೊಳಗೆ ಕಳೆದುಹೋಗಿರುವ ಪಕ್ಷದ ಅಸ್ತಿತ್ವಕ್ಕೆ ಪುನಶ್ಚೇತನ ನೀಡುವುದು. ಪುತ್ರನ ಸೋಲಿನ ಸೇಡನ್ನು ತೀರಿಸಿಕೊಳ್ಳುವುದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಮರುಸ್ಥಾಪಿಸುವುದು ಎಚ್‌ಡಿಕೆ ಸ್ಪರ್ಧೆಯ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ.