24 ರಿಂದ ‘ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ

| Published : Nov 12 2025, 03:00 AM IST

ಸಾರಾಂಶ

ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಆಡಳಿತಾಧಿಕಾರಿ ಜೀವನ್‌ ಅಧ್ಯಕ್ಷತೆಯಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನಾ ಕಾರ್ಯಕ್ರಮ ಬಗ್ಗೆ ಮಾಹಿತಿ ಪಡೆಯಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಆಡಳಿತಾಧಿಕಾರಿ ಜೀವನ್ ಅವರ ಅಧ್ಯಕ್ಷತೆಯಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನಾ ಕಾರ್ಯಕ್ರಮ ಬಗ್ಗೆ ಮಾಹಿತಿ ಪಡೆಯಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಆನಂದ್. ಎನ್ ಅವರು ಮಾತನಾಡಿ ಸಾರ್ವಜನಿಕರಲ್ಲಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಕುಷ್ಠರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ ಎಂದು ತಿಳಿಸಿದರು.ನ.-24 ರಿಂದ ಡಿ. 9 ರವರೆಗೆ 14 ದಿನಗಳ ಕಾಲ “ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ” ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯಿಂದ ಮನೆ ಮನೆಗೆ ಭೇಟಿ ನೀಡಿ ಚರ್ಮ ಮತ್ತು ನರಗಳ ತಪಾಸಣೆ ನಡೆಸಲಾಗುತ್ತದೆ, ಕುಷ್ಠರೋಗ ದೃಢಪಟ್ಟ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು. ಸಕಾಲಕ್ಕೆ ಚಿಕಿತ್ಸೆ ಪಡೆಯುವುದರಿಂದ ಅಂಗವೈಕಲ್ಯತೆ ತಡೆಗಟ್ಟಬಹುದು. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಹೆಚ್ಚು ಕುಷ್ಠರೋಗ ಪ್ರಕರಣ ಎಲ್ಲಿ ಪತ್ತೆಯಾಗಿದೆಯೋ ಆ 13 ಪ್ರಾಥಮಿಕ ಆರೋಗ್ಯ ಕೇಂದ್ರದ 18 ಗ್ರಾಮಗಳಲ್ಲಿ ಒಟ್ಟು 17,399 ಮನೆಗಳಿದ್ದು ಒಟ್ಟು 109 ತಂಡಗಳನ್ನು ರಚಿಸಿದ್ದು, ಪ್ರತಿಯೊಂದು ತಂಡದಲ್ಲಿ ಒಬ್ಬ ಆಶಾ ಕಾರ್ಯಕರ್ತೆ ಮತ್ತು ಪುರುಷ ಸ್ವಯಂ ಸೇವಕರು ಇರುತ್ತಾರೆ. ಪ್ರತಿ 10 ತಂಡಗಳಿಗೆ ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಒಟ್ಟು 14 ಮೇಲ್ವಿಚಾರಕರು ಇರುತ್ತಾರೆ ಎಂದು ವಿವರಿಸಿದರು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಕೊಡಗು ಜಿಲ್ಲೆ, ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಹಾಗೂ ವಿವಿಧ ಇಲಾಖೆಯ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಇಲ್ಲದಿರುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಹಕರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳ ಸಹಕಾರ ಕೋರಿದರು. ಜಾಥಾ ಮೂಲಕ ಪ್ರಚಾರ ಪಡಿಸಲು ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಅವರ ಸಹಕಾರ ಕೋರಲಾಯಿತು. ಕೊಡಗು ಜಿಲ್ಲೆಯನ್ನು 2030 ರೊಳಗೆ ಕುಷ್ಠರೋಗ ಮುಕ್ತ ಜಿಲ್ಲೆಯ್ನನಾಗಿಸಲು ವಿವಿಧ ಇಲಾಖೆಗಳ ಸಹಕಾರ ಕೋರಲಾಯಿತು. ಸಭೆಯಲ್ಲಿ ಎಲ್ಲಾ ಇಲಾಖೆಯು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಹಾಯಕ ಆಡಳಿತಾಧಿಕಾರಿ ಜೀವನ್ ಅವರು ತಿಳಿಸಿದರು.