ಸಾರಾಂಶ
ಲಿಂಗದಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಅಡಕೆ, ಕಾಳು ಮೆಣಸು ಕೀಟ ರೋಗಗಳ ನಿರ್ವಹಣೆ ತರಬೇತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತೋಟಗಳ ಮಣ್ಣು ಹಾಗೂ ನೀರಿನ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡಿದರೆ ಅನೇಕ ರೋಗಗಳು ಬಾರದಂತೆ ತಡೆಗಟ್ಟಬಹುದು ಎಂದು ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಶೆಟ್ಟಿಕೊಪ್ಪದ ಹಿರಿಯ ಪ್ರಗತಿಪರ ಕೃಷಿಕ ಬಿ.ಕೆ.ಜಾನಕೀ ರಾಂ ಸಲಹೆ ನೀಡಿದರು.
ಮಂಗಳವಾರ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ಆಲಂದೂರಿನ ಶಾಲಾ ಆವರಣದಲ್ಲಿ ಲಿಂಗದಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದವರು ರೈತರಿಗೆ ಆಯೋಜನೆ ಮಾಡಿದ್ದ ಅಡಕೆ ಹಾಗೂ ಕಾಳು ಮೆಣಸು ಕೀಟ, ರೋಗಗಳ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರೈತರು ತಮ್ಮ ಭೂಮಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ತೋಟ, ಗದ್ದೆಗಳಲ್ಲಿ ಹಸಿರೆಲೆ ಗೊಬ್ಬರದ ಗಿಡಗಳನ್ನು ಬೆಳೆದರೆ ಮಣ್ಣಿಗೆ ಫಲವತ್ತತೆ ಆಗಲಿದೆ ಎಂದರು.ಲಿಂಗದಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಉಷಾ ಮಾತನಾಡಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ದಿಂದ ನೀಡುವ ತರಬೇತಿಗಳಿಂದ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ. ತರಬೇತಿ ಪಡೆದ ರೈತರು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೃಷಿಕ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ಮಾತನಾಡಿ, ರೈತರು ಮಣ್ಣು ಪರೀಕ್ಷೆ ಮಾಡಿಸಿ ಕೊಂಡು ಅಗತ್ಯ ಇರುವ ಗೊಬ್ಬರ ನೀಡಬೇಕು. ರೋಗ ಮತ್ತು ಕೀಟಗಳ ಹತೋಟಿಗೆ ಸರಿಯಾದ ಮಾಹಿತಿ ಪಡೆದುಕೊಂಡು ಔಷಧಿ ಸಿಂಪಡಣೆ ಮಾಡಬೇಕು. ಇಲ್ಲದಿದ್ದರೆ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿ ಬೆಳೆ ಕುಂಠಿತಗೊಂಡು ಫಸಲು ಹಾಳಾಗಲಿದೆ ಎಂದರು.ಕಡೂರು ತಾಲೂಕಿನ ಪ್ರಗತಿಪರ ಕೃಷಿಕ ನಟರಾಜ್ ತರಬೇತಿ ನೀಡಿ, ರೈತರು ಅಡಕೆ ಬೆಳೆ ಮಾತ್ರ ನಂಬಿಕೊಳ್ಳದೆ ಮಿಶ್ರ ಬೆಳೆ ಬೆಳೆಯಬೇಕು. ಒಂದು ಬೆಳೆ ಬೆಳೆದಾಗ ಅದಕ್ಕೆ ಹೊಂದುವಂತಹ ಮತ್ತೊಂದು ಬೆಳೆ ಬೆಳೆಯಬೇಕು. ಬೆಳೆಗಳಿಗೆ ಅಗತ್ಯ ಇರುವಷ್ಟೇ ನೀರು, ಗೊಬ್ಬರ ನೀಡಬೇಕು. ಪ್ರತಿ ಜಮೀನಿನಲ್ಲಿ ಬಸಿಕಾಲುವೆ ಅಗತ್ಯ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ರೈತರು ಗುಣಮಟ್ಟದ ಬೀಜ ಗಳನ್ನು ಆಯ್ಕೆ ಮಾಡಿದರೆ ಬೆಳೆಗಳಲ್ಲಿ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದರು.ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರೋಹಿತ್ ಮಾತನಾಡಿ, ಕೀಟಗಳ ಬೆಳೆಗಳ ನಿರ್ವಹಣೆ, ಮಣ್ಣಿನ ಆರೋಗ್ಯ ನಿರ್ವಹಣೆ, ಅಡಕೆ, ಕಾಳು ಮೆಣಸುಗಳ ಕೀಟ, ರೋಗ ಬಾಧೆ ನಿರ್ಹಹಣೆ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು.
ವೇದಿಕೆಯಲ್ಲಿ ತಾಲೂಕು ಕೃಷಿಕ ಸಮಾಜದ ಕಾರ್ಯದರ್ಶಿ ನವೀನ್, ಖಜಾಂಚಿ ಚೇತನ್, ನಿರ್ದೇಶಕ ತೀರ್ಥೇಶ್, ನೇತಾಜಿ ಯುವಕ ಸಂಘದ ಅಧ್ಯಕ್ಷ ಎನ್.ಎಸ್.ಅಜಂತ ಇದ್ದರು. ಸ್ಥಳೀಯ ಮುಖಂಡ ಗಾಂಧಿ ಗ್ರಾಮದ ನಾಗರಾಜು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ತರಬೇತಿಯಲ್ಲಿ ಸ್ಥಳೀಯ ರೈತರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.