ರಾಜ್ಯಾದ್ಯಂತ 400 ಪಶು ವೈದ್ಯರ ನೇಮಕ

| Published : Jul 14 2024, 01:38 AM IST

ಸಾರಾಂಶ

ಕಂದಾಗಾಲ ಕಾಡಂಚಿನ ಗ್ರಾಮವಾಗಿದ್ದು, ಜಾನುವಾರುಗಳಿಗೆ ಚಿಕಿತ್ಸೆ ಪಡೆಯಲು ರೈತರು ಯಡಿಯಾಲದ ಕೇಂದ್ರವನ್ನು ಅವಲಂಬಿಸಬೇಕಾಗಿತ್ತು,

ಕನ್ನಡಪ್ರಭ ವಾರ್ತೆ ನಂಜನಗೂಡು

ರಾಜ್ಯಾದ್ಯಂತ 400 ಪಶು ವೈದ್ಯರ ನೇಮಕಾತಿಯ ಜೊತೆಗೆ 200 ಪಶು ಚಿಕಿತ್ಸಾ ಕೇಂದ್ರಗಳಿಗೆ ಕಟ್ಟಡಗಳನ್ನು ಮಂಜೂರು ಮಾಡಿಕೊಟ್ಟಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 12 ಹೊಸ ಪಶು ಚಿಕಿತ್ಸಾ ಕಟ್ಟಡಗಳು ಮಂಜೂರಾಗಿವೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ಹೇಳಿದರು.

ತಾಲೂಕಿನ ಕಂದೆಗಾಲ ಗ್ರಾಮದಲ್ಲಿ ಶನಿವಾರ ನೂತನ ಪಶುಚಿಕಿತ್ಸಾ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ದರ್ಶನ್ ಧ್ರುವನಾರಾಯಣ ಅವರು ತಾಲೂಕಿಗೆ ಮೂರು ಪಶುಚಿಕಿತ್ಸಾ ಆಸ್ಪತ್ರೆ ತೆರೆಯಲು ಬೇಡಿಕೆ ಸಲ್ಲಿಸಿದ್ದರು, ಕಂದಾಗಾಲ ಕಾಡಂಚಿನ ಗ್ರಾಮವಾಗಿದ್ದು, ಜಾನುವಾರುಗಳಿಗೆ ಚಿಕಿತ್ಸೆ ಪಡೆಯಲು ರೈತರು ಯಡಿಯಾಲದ ಕೇಂದ್ರವನ್ನು ಅವಲಂಬಿಸಬೇಕಾಗಿತ್ತು, ಈ ಭಾಗದಲ್ಲಿ 2,100ಕ್ಕೂ ಹೆಚ್ಚು ಜಾನುವಾರುಗಳಿದ್ದು, ಗ್ರಾಮಕ್ಕೆ ಪಶು ಚಿಕಿತ್ಸಾ ಕೇಂದ್ರದ ಅಗತ್ಯತೆ ಬಗ್ಗೆ ಇಲಾಖೆಗೆ ಮನವರಿಕೆಯಾಗಿತ್ತು, ರೈತರ ಅನುಕೂಲ ಕಲ್ಪಿಸಿ ಪಶು ಚಟುವಟಿಕೆ ಉತ್ತೇಜಿಸುವ ಸಲುವಾಗಿ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿ, ಔಷಧಿಗಳ ಸಹಿತವಾಗಿ ನೂತನವಾಗಿ ಪಶು ಚಿಕಿತ್ಸಾ ಆಸ್ಪತ್ರೆ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಚಿಕಿತ್ಸಾ ಕೇಂದ್ರಕ್ಕೆ ಸುಸಜ್ಜಿತ ಹೊಸ ಕಟ್ಟಡವನ್ನು ಮಂಜೂರು ಮಾಡಲಾಗುವುದು, ಅಲ್ಲದೆ ನಂಜನಗೂಡು ತಾಲೂಕಿನಲ್ಲಿ ಈ ವರ್ಷ ಮತ್ತೊಂದು ಪಶು ಚಿಕಿತ್ಸಾ ಆಸ್ಪತ್ರೆ ತೆರೆಯಲಾಗುವುದು ಎಂದು ಶಾಸಕ ದರ್ಶನ್ ರವರಿಗೆ ಭರವಸೆ ನೀಡಿದ್ದೇನೆ ಎಂದು ಹೇಳಿದರು.

ಪಶುಸಂಗೋಪನಾ ಇಲಾಖೆ ಬರಗಾಲ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮುಂಜಾಗ್ರತೆ ವಹಿಸಿ, ರಾಜ್ಯಾದ್ಯಂತ 40 ಕೋಟಿ ರು. ವೆಚ್ಚದಲ್ಲಿ ರೈತರಿಗೆ ಮೇವಿನ ಬಿತ್ತನೆ ಬೀಜಗಳನ್ನು ವಿತರಣೆ ಮಾಡಿದೆ, ಜಿಲ್ಲೆಯಲ್ಲಿ ಸುಮಾರು 87 ಸಾವಿರ ರೈತರಿಗೆ 1.9 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ಗಳನ್ನು ವಿತರಿಸಲಾಗಿತ್ತು, ಹೀಗಾಗಿ ಬರಗಾಲದ ಪರಿಸ್ಥಿತಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಿದೆ. ರಾಜ್ಯದಲ್ಲಿ ಪಶುವೃದ್ಯರ ಕೊರತೆ ನೀಗಿಸಲು 400 ಪಶುವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ ಜಾನುವಾರುಗಳ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಸೇವೆ ಆರಂಭಿಸಲಾಗಿದ್ದು, 1965ಕ್ಕೆ ಕರೆ ಮಾಡಿದರೆ ವೈದ್ಯರು ಮನೆ ಬಾಗಿಲಿಗೆ ಸಿಬ್ಬಂದಿಯೊಂದಿಗೆ ದೌಡಾಯಿಸಿ ಪಶುಗಳಿಗೆ ಚಿಕಿತ್ಸೆ ನೀಡಲಿದ್ದಾರೆ, ರೈತರು ಈ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರಲ್ಲದೆ, ತಾಲೂಕಿಗೆ ಮೂರು ಪಶು ವೈದ್ಯಕೀಯ ಕೇಂದ್ರಗಳ ಅಗತ್ಯವಿದೆ, ಸಚಿವರಿಗೆ ಮನವಿ ಮಾಡಿದ್ದೇನೆ, ಹಂತ-ಹಂತವಾಗಿ ಕೇಂದ್ರಗಳನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಶ್ರೀಕಂಠನಾಯಕ, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ಗ್ರಾಪಂ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಅಭಿನಂದನ್ ಪಟೇಲ್, ಗೋವಿಂದರಾಜು, ಹಾಡ್ಯ ಜಯರಾಮು, ಶಿವಕುಮಾರ್, ದೊರೆಸ್ವಾಮಿ ನಾಯಕ, ಸಂಘರಾಜು, ಪಶುಸಂಗೋಪನೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ. ನಾಗರಾಜ್, ತಾಲೂಕು ಉಪ ನಿರ್ದೇಶಕ ಮಲ್ಲಿಕಾರ್ಜುನ್, ಪಶುವೈದ್ಯಾಧಿಕಾರಿಗಳಾದ ಶರಣಬಸಪ್ಪ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಇದ್ದರು.