ಕೆಪಿಎಸ್ ಪಿಯು ಕಾಲೇಜಿನಲ್ಲಿ ನಡೆದ ಪ್ರತಿಭಾ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈಗಾಗಲೇ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ, ವಿಜ್ಞಾನ ವಿಭಾಗದಲ್ಲಿ ಹಂಸಿತಾ ಮೌಡ್ಗಲ್ಯಾ ನಾಲ್ಕು ಕೋರ್‌ ವಿಷಯಗಳಲ್ಲಿ ಶೇಕಡಾ 100 ಫಲಿತಾಂಶ ಪಡೆದು ಒಟ್ಟು 593 (98.83%) ಅಂಕಗಳೊಂದಿಗೆ ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆನಗರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡುವತ್ತ ಕ್ರಮ ಕೈಗೊಳ್ಳಲಾಗುತ್ತಿದೆ. ನರ್ಸಿಂಗ್ ಕಾಲೇಜು ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣಾವಕಾಶಗಳನ್ನು ಕಲ್ಪಿಸುವ ದಿಶೆಯಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.ನಗರದ ಕೆಪಿಎಸ್ ಪಿಯು ಕಾಲೇಜಿನಲ್ಲಿ ನಡೆದ ಪ್ರತಿಭಾ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈಗಾಗಲೇ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ, ವಿಜ್ಞಾನ ವಿಭಾಗದಲ್ಲಿ ಹಂಸಿತಾ ಮೌಡ್ಗಲ್ಯಾ ನಾಲ್ಕು ಕೋರ್‌ ವಿಷಯಗಳಲ್ಲಿ ಶೇಕಡಾ 100 ಫಲಿತಾಂಶ ಪಡೆದು ಒಟ್ಟು 593 (98.83%) ಅಂಕಗಳೊಂದಿಗೆ ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು. ಇತರೆ ವಿದ್ಯಾರ್ಥಿಗಳೂ ಉತ್ತಮ ಅಂಕಗಳನ್ನು ಗಳಿಸಿ ಕಾಲೇಜು ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಇಂತಹ ಪ್ರತಿಭಾವಂತರನ್ನು ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಗೌರವಿಸುವುದರ ಜೊತೆಗೆ ರಾಜ್ಯಮಟ್ಟದಲ್ಲಿಯೂ ಗುರುತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇಂಗ್ಲಿಷ್ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದ ಅವರು, ವಸತಿ ಶಾಲೆಗಳ ಸ್ಥಾಪನೆ, ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿ ಕುರಿತು ವಿವರಿಸಿದರು. ಆಧುನಿಕ ವಿಜ್ಞಾನದಲ್ಲಿ ನಾವು ಮುಂದುವರಿದರೂ, ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಪಾಲಿಸುವುದು ಅಗತ್ಯ. ಧಾರ್ಮಿಕ ಮೌಲ್ಯಗಳಿಂದ ಮಾತ್ರ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಸಾಧ್ಯವೆಂದು ಅಭಿಪ್ರಾಯಪಟ್ಟರು. ಉದ್ಯೋಗೋನ್ಮುಖ ಶಿಕ್ಷಣದ ಅಗತ್ಯವನ್ನೂ ತಿಳಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಸಾಧನೆ ಕುರಿತು ಮಾಹಿತಿ ನೀಡಿದ ಉಪನ್ಯಾಸಕರು, ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಡಿಸ್ಟಿಂಕ್ಷನ್ ಫಲಿತಾಂಶ ನೀಡುತ್ತಿರುವ ಕೆಪಿಎಸ್ ಪಿಯು ಕಾಲೇಜು ಈ ಬಾರಿ 303 ವಿದ್ಯಾರ್ಥಿಗಳ ಪೈಕಿ 236 ಮಂದಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿರುವುದಾಗಿ ತಿಳಿಸಿದರು. ಹಲವು ವಿದ್ಯಾರ್ಥಿಗಳು 98% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, ಕಾಲೇಜಿನ ಶೈಕ್ಷಣಿಕ ಮಟ್ಟವನ್ನು ಮತ್ತಷ್ಟು ಎತ್ತಿ ತೋರಿಸಿದೆ.ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ವಿಶ್ವನಾಥ್, ಸಂಧ್ಯಾ ವಿಶ್ವನಾಥ್, ಕಾಲೇಜಿನ ಪ್ರಾಂಶುಪಾಲ ಶಿವಪ್ರಸಾದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.