ನಾಲ್ಕು ತಿಂಗಳ ಹಿಂದೆ ಅಂಗಾಂಶ ಕೃಷಿ ಬಾಳೆ ಗಿಡಗಳನ್ನು ನೆಟ್ಟು ಬೇಸಾಯ ಮಾಡಿದ್ದೆ. ಕೊಟ್ಟಿಗೆ ಗೊಬ್ಬರ, ಔಷಧ ಮತ್ತು ರಾಸಾಯನಿಕ ಗೊಬ್ಬರ ಸೇರಿದಂತೆ ಪ್ರತಿ ಗಿಡಕ್ಕೆ ನಾಲ್ಕುನೂರು ಖರ್ಚು ಮಾಡಿ, ಗಿಡಗಳನ್ನು ಮಕ್ಕಳಂತೆ ಸಾಕಿ ಸಲುಹಿದ್ದೆನು.

ಹಲಗೂರು: ಮಂಗಗಳ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ಬಾಳೆ ಗಿಡಗಳು ಹಾನಿಗೀಡಾದ ಘಟನೆ ಸಮೀಪದ ಹುಲ್ಲಾಗಾಲ ಗ್ರಾಮದಲ್ಲಿ ಬುಧವಾರ ನಡೆದಿದೆ. ರೈತ ಎಚ್.ಆರ್.ಶಿವಮಾದೇಗೌಡರು ಗ್ರಾಮದ ಸನಿಹವಿರುವ ತಮ್ಮ 1 ಎಕರೆ ಜಮೀನಿನಲ್ಲಿ ಬಾಳೆ ಗಿಡಗಳನ್ನು ನೆಟ್ಟು, ಬೇಸಾಯ ಮಾಡಿದ್ದರು. ಬುಧವಾರ ಸಮೀಪದ ದಡಮಹಳ್ಳಿ ಗುಡ್ಡೆ ಕಡೆಯಿಂದ ಬಂದ ಹತ್ತಾರು ಮಂಗಗಳು ಬಾಳೆ ಗಿಡಗಳನ್ನು ಕಿತ್ತು ಒಳಗಿನ ತಿರುಳನ್ನು ತಿಂದು ಹಾಕಿವೆ. ನಾಲ್ಕು ತಿಂಗಳ ಹಿಂದೆ ಅಂಗಾಂಶ ಕೃಷಿ ಬಾಳೆ ಗಿಡಗಳನ್ನು ನೆಟ್ಟು ಬೇಸಾಯ ಮಾಡಿದ್ದೆ. ಕೊಟ್ಟಿಗೆ ಗೊಬ್ಬರ, ಔಷಧ ಮತ್ತು ರಾಸಾಯನಿಕ ಗೊಬ್ಬರ ಸೇರಿದಂತೆ ಪ್ರತಿ ಗಿಡಕ್ಕೆ ₹400 ಖರ್ಚು ಮಾಡಿ, ಗಿಡಗಳನ್ನು ಮಕ್ಕಳಂತೆ ಸಾಕಿ ಸಲುಹಿದ್ದೆನು. ಆದರೆ, ಮಂಗಗಳ ದಾಳಿಯಿಂದ ಸಮೃದ್ಧವಾಗಿ ಬೆಳೆದಿದ್ದ ಸುಮಾರು 45 ಕ್ಕೂ ಹೆಚ್ಚು ಗಿಡಗಳು ಹಾನಿಯಾಗಿವೆ. ಸುಮಾರು ₹20 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ವಾರಕ್ಕೆ ಎರಡು ದಿನಗಳಲ್ಲಿ ಮಂಗಗಳ ಹಿಂಡು ಫಸಲುಗಳ ಮೇಲೆ ದಾಳಿ ಮಾಡುತ್ತಿವೆ. ಜಮೀನು ಬಳಿ ಒಬ್ಬರೇ ಇದ್ದರೆ, ನಮ್ಮ ಮೈ ಮೇಲೆ ಎರಗುತ್ತಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಂಗಗಳ ದಾಳಿ ನಿಯಂತ್ರಣ ಮಾಡಲು ಕ್ರಮ ವಹಿಸಿ ರೈತರ ನೆರವಿಗೆ ನಿಲ್ಲಬೇಕು ಎಂದು ರೈತ ಸುಧನ್ವ ಆಗ್ರಹಿಸಿದರು.