ಸುಂಟಿಕೊಪ್ಪ: ಮುಂಗಾರು ಮಳೆಗೆ ಜನಜೀವನ ಅಸ್ತವ್ಯಸ್ತ

| Published : May 27 2025, 01:16 AM IST

ಸಾರಾಂಶ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮುಂಗಾರು ಮಳೆ ಬೇಗನೇ ಕೊಡಗಿಗೆ ಕಾಲಿಟ್ಟಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮೇ ಅಂತ್ಯದ ದಿನಗಳಲ್ಲಿ ಕೊಡಗಿನ ಜನತೆ ಬಿಸಿಲಿನ ತಾಪಮಾನಕ್ಕೆ ಒಗ್ಗಿಕೊಂಡಿರುತ್ತಾರೆ. ಆದರೆ ಈ ಭಾರಿ ಅರಬ್ಬಿ ಸಮುದ್ರದ ವಾಯುಭಾರ ಕುಸಿತದಿಂದ ಮುಂಗಾರು ಮಳೆ ಬೇಗನೆ ಕೊಡಗಿಗೆ ಕಾಲಿಟ್ಟಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಾದಾಪುರ ಐಗೂರು ಹೊಳೆ ತುಂಬಿ ಹರಿಯುತ್ತಿದ್ದು ಎಲ್ಲೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಾದಾಪುರದ ಸುಂಟಿಕೊಪ್ಪ ವೃತ್ತದ ಬಳಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಲಾಗಿದ್ದ ತಂಗುದಾಣಕ್ಕೆ ಭಾರಿ ಮಳೆ ಗಾಳಿ ಹಿನ್ನೆಲೆಯಲ್ಲಿ ಬೃಹತ್‌ಗಾತ್ರದ ಮರ ಕುಸಿದು ಬಿದ್ದ ಪರಿಣಾಮ ತಂಗುದಾಣ ನೆಲಸಮಗೊಂಡಿದೆ. ಮರ ಕುಸಿದು ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ರಂಬೆಗಳು ಅಪ್ಪಳಿಸಿದ್ದು ಕಂಬಗಳು ಹಾನಿಗೊಂಡಿದೆ. ಕುಂಬೂರು ಸೇರಿದ ಈ ಮರ ರಾಜ್ಯ ಹೆದ್ದಾರಿ ಬದಿಯಲ್ಲಿದ್ದು ಭಾರಿ ಗಾಳಿ ಮಳೆಯಿಂದ ಬುಡಸಮೇತ ಕುಸಿದು ಬಿದಿದ್ದು, ಈ ಸಂಬಂಧ ಮರವನ್ನು ತೆರವುಗೊಳಿಸಲು ಮಾದಾಪುರ ಗ್ರಾ.ಪಂ.ಸದಸ್ಯ ಕೆ.ಎ.ಲತೀಫ್, ಚೆಸ್ಕಾಂ ಇಲಾಖೆಯ ಸಿಬ್ಬಂದಿ ಹಾಗೂ ಕುಂಬೂರು ತೋಟದ ಕಾರ್ಮಿಕರು ಬಿದ್ದ ಮರದ ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಮೇ 25 ರ ರೋಹಿಣಿ ನಕ್ಷತ್ರದ ಕುಂಭದ್ರೋಣ ಮಳೆ ನಾಡಿನಾದ್ಯಂತ ಸುರಿಯುತ್ತಿದ್ದು ಕಾಫಿ ಬೆಳೆಗಾರರು ಮೊದಲ ಮಳೆಗೆ ತೋಟದ ಗಿಡಗಳಿಗೆ ನೀಡಬೇಕಾದ ರಸಗೊಬ್ಬರ ಸೇರಿದಂತೆ ಇನ್ನಿತರರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದ್ದು ತೋಟದಲ್ಲಿ ಸತತವಾಗಿ ಸುರಿಯುತ್ತಿರುವ ಅಕಾಲಿಕ ಮಳೆ ಗಾಳಿಯಿಂದಾಗಿ ತೋಟದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಸುಂಟಿಕೊಪ್ಪ ಜಂಕ್ಷನ್ ಬಳಿ ಬಿದ್ದ ಮರ ತೆರವುಗೊಳಿಸುವ ಸಂದರ್ಭದಲ್ಲಿ ಚೆಸ್ಕಾಂ ಕಚೇರಿಯ ಕುಶಾಲನಗರ ವಿಭಾಗದ ಸಹಾಯಕ ಅಭಿಯಂತರರಾದ ಮಂಜುನಾಥ, ಕಿರಿಯ ಅಭಿಯಂತರರು, ತೋಟದ ಸಹಾಯಕ ವ್ಯವಸ್ಥಾಪಕ ರವೀಂದ್ರ ಇದ್ದರು.