ಸಾರಾಂಶ
ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ವಾಯುಮಾಲಿನ್ಯ ತಡೆಗಟ್ಟಬಹುದಾಗಿದೆ. ವಾಹನಗಳನ್ನು ರಸ್ತೆಗೆ ಇಳಿಸುವ ಮುನ್ನಾ ಸ್ವ-ತಪಾಸಣೆ ಮಾಡಿಕೊಡಿಸಿಕೊಳ್ಳಬೇಕು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್‌ದಾಸ್ ತಿಳಿಸಿದರು.
ತಿಪಟೂರು: ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ವಾಯುಮಾಲಿನ್ಯ ತಡೆಗಟ್ಟಬಹುದಾಗಿದೆ. ವಾಹನಗಳನ್ನು ರಸ್ತೆಗೆ ಇಳಿಸುವ ಮುನ್ನಾ ಸ್ವ-ತಪಾಸಣೆ ಮಾಡಿಕೊಡಿಸಿಕೊಳ್ಳಬೇಕು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್‌ದಾಸ್ ತಿಳಿಸಿದರು.
ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಇದರಿಂದ ಸಂಚಾರ ದಟ್ಟಣೆಯು ಹೆಚ್ಚಳವಾಗುತ್ತಿದೆ. ವಾಹನಗಳ ಕೆಟ್ಟ ಹೊಗೆಯಿಂದ ಉಂಟಾಗುವ ಕಾರ್ಬನ್ ಮಾನೋನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ನಂತರ ವಿಷಪೂರಿತ ಅನಿಲಗಳಾಗಿದ್ದು, ಜನರ ಆರೋಗ್ಯಕ್ಕೆ ಮಾರಕ. ವಾಹನ ಸೈಲೆನ್ಸರ್ ಸ್ವಚ್ಚವಾಗಿಡಬೇಕು. ವಾಹನ ಸವಾರರು ಆರು ತಿಂಗಳಿಗೊಮ್ಮೆಯಾದರೂ ವಾಹನ ತಪಾಸಣೆ ಮಾಡಿಸಿಕೊಂಡರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು. ವಾಹನ ನಿರೀಕ್ಷಕ ಬಿ.ಎಸ್.ನಂದೀಶ್ ಮಾತನಾಡಿ, ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳದಿದ್ದರೆ ಸರ್ಕಾರದಿಂದ ನಿರ್ಧರಿಸಿರುವ ದಂಡವನ್ನು ವಿಧಿಸಲಾಗುವುದು. ಆದ್ದರಿಂದ ನಿಮ್ಮ ವಾಹನಗಳ ಮಾಲಿನ್ಯ ತಪಾಸಣೆ ಮಾಡುವುದು ಕಡ್ಡಾಯವಾಗಿರುತ್ತದೆ ಎಂದರು. ಅಧೀಕ್ಷಕ ಎಚ್.ಎಸ್.ಚೇತನ್ ಮಾತನಾಡಿದರು. ಅಧಿಕಾರಿಗಳಾದ ಬಿ.ಕೆ. ಗುರುರಾಜ್, ಎಸ್. ಅಶೋಕ್‌ಕುಮಾರ್ ಸೇರಿದಂತೆ ಕಚೇರಿಯ ಸಿಬ್ಬಂದಿಗಳು, ವಾಹನ ಸವಾರರು, ಸಾರ್ವಜನಿಕರು ಭಾಗವಹಿಸಿದ್ದರು.