ಮೊದಲ ಪ್ರಧಾನಿಯಾದ ಜವಾಹರ ಲಾಲ್ ನೆಹರೂ ಅವರು ಆಧುನಿಕ ಶಿಲ್ಪಿ : ಸಿಎಂ ಸಿದ್ದರಾಮಯ್ಯ

| Published : Nov 15 2024, 01:33 AM IST / Updated: Nov 15 2024, 10:28 AM IST

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯಬಂದ ನಂತರ ಮೊದಲ ಪ್ರಧಾನಿಯಾದ ಜವಾಹರಲಾಲ್ ನೆಹರೂ ಅವರು ಆಧುನಿಕ ಭಾರತ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದರು. ಅವರು ಕೈಗೊಂಡ ಕ್ರಮಗಳಿಂದಾಗಿ ಅವರನ್ನು ಆಧುನಿಕ ಭಾರತದ ಶಿಲ್ಪಿಯಾದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಬೆಂಗಳೂರು : ದೇಶಕ್ಕೆ ಸ್ವಾತಂತ್ರ್ಯಬಂದ ನಂತರ ಮೊದಲ ಪ್ರಧಾನಿಯಾದ ಜವಾಹರಲಾಲ್ ನೆಹರೂ ಅವರು ಆಧುನಿಕ ಭಾರತ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದರು. ಅವರು ಕೈಗೊಂಡ ಕ್ರಮಗಳಿಂದಾಗಿ ಅವರನ್ನು ಆಧುನಿಕ ಭಾರತದ ಶಿಲ್ಪಿಯಾದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಾಕಷ್ಟು ಸಮಸ್ಯೆಗಳಿದ್ದವು. ಅವುಗಳಿಗೆಲ್ಲ ಪರಿಹಾರ ನೀಡುವ ನಿಟ್ಟಿನಲ್ಲಿ ನೆಹರು ಅವರು ಕೆಲಸ ಮಾಡಿದರು. ಮಿಶ್ರ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಮಾಡಿದರು. 17 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಬೃಹತ್‌ ಕೈಗಾರಿಕೆಗಳು, ಆಣೆಕಟ್ಟುಗಳ ನಿರ್ಮಾಣ, ನೀರಾವರಿ ಯೋಜನೆಗಳ ಅನುಷ್ಠಾನದ ಮೂಲಕ ದೇಶದೆಲ್ಲೆಡೆ ಉದ್ಯೋಗ ಸೃಷ್ಟಿಸಿದರು. ಅವರು ಆಧುನಿಕ ಭಾರತ ನಿರ್ಮಾಣದ ಶಿಲ್ಪಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ ಎಂದರು.

ವಿಜ್ಞಾನ ಮತ್ತು ವೈಚಾರಿಕತೆಯಲ್ಲಿ ನಂಬಿಕೆ ಇಟ್ಟಿದ್ದ ನೆಹರು ಅವರು ದೇಶವನ್ನು ಆ ದಿಕ್ಕಿನಲ್ಲಿ ಕೊಂಡೊಯ್ದರು. ಅಂತಹ ಮಹಾನ್‌ ನಾಯಕ ಜವಾಹರಲಾಲ್‌ ನೆಹರು ಅವರನ್ನು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಿಂದ ಮೂಲೆ ಗುಂಪು ಮಾಡಲಾಗುತ್ತಿದೆ. ಅವರು ಮಾಡಿದ್ದ ಕೆಲಸಗಳನ್ನೆಲ್ಲ ತೆಗೆದು ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ನೆಹರು ಅವರು ನಿಸ್ವಾರ್ಥಿಯಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದರು. ಎಲ್ಲ ವರ್ಗದವರ ಅಭಿವೃದ್ಧಿ, ಉದ್ಯೋಗ ಸಿಗುವಂತಾಗಲು ಸಾಕಷ್ಟು ಕೆಲಸ ಮಾಡಿದರು.

ಬಿಜೆಪಿಯ ಅಪಪ್ರಚಾರ ತಡೆಯಬೇಕು: ಇತಿಹಾಸವನ್ನು ಮರೆಯುವವರನ್ನು ಭವಿಷ್ಯದಲ್ಲಿ ಸ್ಮರಿಸಲಾಗದು. ಬಿಜೆಪಿ ಅವರು ಅದೇ ಹಾದಿಯಲ್ಲಿದ್ದಾರೆ. ಯಾವುದೇ ವಿಚಾರದ ಬಗ್ಗೆ ವೇಗವಾಗಿ ಅಪಪ್ರಚಾರ ಮಾಡುತ್ತಾರೆ. ಅದನ್ನು ವಿರುದ್ಧವಾಗಿ ನಾವು ಸತ್ಯವನ್ನು, ಮಾಡಿದ ಕೆಲಸದ ಬಗ್ಗೆ ವೇಗವಾಗಿ ಪ್ರಚಾರ ಮಾಡಬೇಕಿದೆ. ನಮ್ಮ ಕಾರ್ಯಕರ್ತರು ಒಟ್ಟಾಗಿ ಬಿಜೆಪಿಯ ಅಪಪ್ರಚಾರ ತಡೆಯಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ನೆಹರು: ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ನೆಹರು ಅವರು ದೇಶ ನಿರ್ಮಾಣಕ್ಕಾಗಿ ಭದ್ರ ಬುನಾದಿ ಹಾಕಿದ್ದರು. ಅದಕ್ಕೆ ಬೆಂಗಳೂರಿನಲ್ಲಿ ಅಭಿವೃದ್ಧಿಯಾಗಿರುವ ಹಲವು ಸಾರ್ವಜನಿಕ ಸಂಸ್ಥೆಗಳೇ ಸಾಕ್ಷಿಯಾಗಿದೆ. ಎಚ್‌ಎಎಲ್‌, ಬಿಇಎಲ್‌, ಬಿಎಚ್‌ಇಎಲ್‌, ಇಸ್ರೋ ಹೀಗೆ ಹಲವು ಸಂಸ್ಥೆಗಳನ್ನು ಸ್ಥಾಪಿಸಿ ತಮ್ಮ ದೂರದೃಷ್ಟಿತ್ವವನ್ನು ಪ್ರದರ್ಶಿಸಿದ್ದರು. ಅಲ್ಲದೆ, ಮಾನವ ಸಂಪನ್ಮೂಲಗಳ ಅಭಿವೃದ್ದಿ, ಗುಣಮಟ್ಟದ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದ್ದರು. ಅವರು ಹಾಕಿಕೊಟ್ಟ ಅಡಿಪಾಯದಿಂದ ದೇಶ ಅಭಿವೃದ್ಧಿ ಪಥದತ್ತ ಸಾಗಿದೆ ಎಂದು ತಿಳಿಸಿದರು. ಸಚಿವರಾದ ಡಾ. ಜಿ.ಪರಮೇಶ್ವರ್‌, ಕೆ.ಜೆ.ಜಾರ್ಜ್‌, ಕೆ.ಎಚ್‌. ಮುನಿಯಪ್ಪ, ಜಮೀರ್‌ ಅಹಮದ್‌ಖಾನ್, ಎನ್‌.ಎಸ್‌. ಬೋಸರಾಜು ಹಾಜರಿದ್ದರು.

ಭಾಷಣದ ವೇಳೆ ಗೋವಿಂದರಾಜು ಚೀಟಿ ಪ್ರಹಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ನೆಹರು ಅವರು ನೀಡಿದ ಕೊಡುಗೆಗಳಿರುವ ಚೀಟಿಯನ್ನು ಸಿದ್ದರಾಮಯ್ಯ ಅವರಿಗೆ ನೀಡಿದರು. ಅದನ್ನು ಓದುವ ವೇಳೆ ಐಐಟಿ ಮತ್ತು ಐಟಿಐ ಬಗ್ಗೆ ಸಿದ್ದರಾಮಯ್ಯ ಅವರಲ್ಲಿ ಗೊಂದಲ ಮೂಡಿತು. ಆಗ ಮುಖ್ಯಮಂತ್ರಿ ಬಳಿ ಬಂದ ಗೋವಿಂದರಾಜು, ನಾನೇ ಬರೆದಿದ್ದು, ಅದು ಐಐಟಿ ಎಂದು ಸ್ಪಷ್ಟಪಡಿಸಲು ಮುಂದಾದರು. ಅದಕ್ಕೆ ಸಿಟ್ಟಾದ ಸಿದ್ದರಾಮಯ್ಯ, ‘ಏಯ್‌ ಸುಮ್ನಿರಬೇಕು. ಈ ರೀತಿ ಚೀಟಿ ಎಲ್ಲ ಕೊಡಬೇಡಿ. ನನಗೆ ಏನು ಗೊತ್ತಿದೆಯೋ ಅದನ್ನು ಮಾತನಾಡುತ್ತೇನೆ. ಗೊತ್ತಿಲ್ಲದಿರುವುದನ್ನೆಲ್ಲ ಹೇಳಲಾಗದು’ ಎಂದು ಹೇಳುತ್ತಾ ಗೋವಿಂದರಾಜು ನೀಡಿದ್ದ ಚೀಟಿಯನ್ನು ಹರಿದು ಎಸೆದರು.