ಗಾಂಧೀಜಿ ಚಿತಾಭಸ್ಮ ಸ್ಮಾರಕಕ್ಕೆ ಶೀಘ್ರ ಹೊಸಕಳೆ

| Published : Oct 07 2025, 01:02 AM IST

ಗಾಂಧೀಜಿ ಚಿತಾಭಸ್ಮ ಸ್ಮಾರಕಕ್ಕೆ ಶೀಘ್ರ ಹೊಸಕಳೆ
Share this Article
  • FB
  • TW
  • Linkdin
  • Email

ಸಾರಾಂಶ

ರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರ ಮುಂದಾಳುತ್ವದಲ್ಲಿ, ಸ್ಮಾರಕದ ಮೇಲೆ ಶಾಶ್ವತವಾಗಿ ಜ್ಯೋತಿ ಉರಿಯುವ ವ್ಯವಸ್ಥೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.ದೆಹಲಿಯ ರಾಜ್‌ಘಾಟ್‌ನಲ್ಲಿ ಗಾಂಧೀಜಿ ಸ್ಮಾರಕದ ಮೇಲೆ ನಿತ್ಯ ಜ್ಯೋತಿ ಉರಿಯುವ ಮಾದರಿಯನ್ನು ಅನುಸರಿಸಿ, ಅರಸೀಕೆರೆಯ ಗಾಂಧೀಜಿ ಸ್ಮಾರಕದಲ್ಲೂ ಅದೇ ರೀತಿಯ ವ್ಯವಸ್ಥೆ ಕಲ್ಪಿಸಲು ಶಾಸಕರು ತಹಸೀಲ್ದಾರರು ಹಾಗೂ ಬ್ಲಾಕ್‌ ಆಫೀಸರ್‌ರಿಗೆ ನಿರ್ದೇಶನ ನೀಡಿದ್ದಾರೆ. ಜ್ಯೋತಿ ನಿರಂತರವಾಗಿ ಉರಿಯಲು ಅಗತ್ಯವಿರುವ ತೈಲವನ್ನು ತಾವು ಸ್ವತಃ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಹೊರವಲಯದ ಕಸ್ತೂರಿಬಾ ಆಶ್ರಮದಲ್ಲಿರುವ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಸ್ಮಾರಕವು ಇದೀಗ ಹೊಸ ಕಳೆಯನ್ನು ಪಡೆಯಲಿದೆ.

ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರ ಮುಂದಾಳುತ್ವದಲ್ಲಿ, ಸ್ಮಾರಕದ ಮೇಲೆ ಶಾಶ್ವತವಾಗಿ ಜ್ಯೋತಿ ಉರಿಯುವ ವ್ಯವಸ್ಥೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.ದೆಹಲಿಯ ರಾಜ್‌ಘಾಟ್‌ನಲ್ಲಿ ಗಾಂಧೀಜಿ ಸ್ಮಾರಕದ ಮೇಲೆ ನಿತ್ಯ ಜ್ಯೋತಿ ಉರಿಯುವ ಮಾದರಿಯನ್ನು ಅನುಸರಿಸಿ, ಅರಸೀಕೆರೆಯ ಗಾಂಧೀಜಿ ಸ್ಮಾರಕದಲ್ಲೂ ಅದೇ ರೀತಿಯ ವ್ಯವಸ್ಥೆ ಕಲ್ಪಿಸಲು ಶಾಸಕರು ತಹಸೀಲ್ದಾರರು ಹಾಗೂ ಬ್ಲಾಕ್‌ ಆಫೀಸರ್‌ರಿಗೆ ನಿರ್ದೇಶನ ನೀಡಿದ್ದಾರೆ. ಜ್ಯೋತಿ ನಿರಂತರವಾಗಿ ಉರಿಯಲು ಅಗತ್ಯವಿರುವ ತೈಲವನ್ನು ತಾವು ಸ್ವತಃ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.ಈ ನಿರ್ಧಾರವು ಮಹಾತ್ಮ ಗಾಂಧೀಜಿಯವರ ಜಯಂತಿ ಆಚರಣೆಯ ಸಂದರ್ಭದಲ್ಲಿ ಪ್ರಕಟವಾಗಿದ್ದು, ಸ್ಥಳೀಯ ನಾಗರಿಕರಲ್ಲಿ ಸಂತೋಷವನ್ನು ಮೂಡಿಸಿದೆ.ಗಾಂಧೀಜಿಯವರ ಅನುಯಾಯಿ ಶ್ರೀಮತಿ ಯಶೋದರಮ್ಮ ದಾಸಪ್ಪ ಅವರ ಪ್ರೇರಣೆಯಿಂದ ಸ್ಥಾಪನೆಯಾದ ಈ ಆಶ್ರಮದಲ್ಲಿ ಒಮ್ಮೆ ಮಹಿಳಾ ಸಬಲೀಕರಣ ಚಟುವಟಿಕೆಗಳು, ಚರಕ ಮತ್ತು ಹೊಲಿಗೆ ತರಬೇತಿಗಳು ಸಕ್ರಿಯವಾಗಿದ್ದವು. ಆದರೆ, ಅನುದಾನ ಸಿಗದ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಆಶ್ರಮದ ಚಟುವಟಿಕೆಗಳು ಕುಂಠಿತಗೊಂಡಿದ್ದವು. ಈ ಹಿನ್ನೆಲೆ, ಶಾಸಕರು ತಮ್ಮ ವೈಯಕ್ತಿಕ ಆಸಕ್ತಿ ತೋರಿಸಿ ಸ್ಮಾರಕದ ಪುನರುಜ್ಜೀವನದತ್ತ ಹೆಜ್ಜೆ ಇಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆದು ಅನುದಾನ ಮಂಜೂರು ಮಾಡಿಸಿಕೊಂಡಿದ್ದು, ಆಶ್ರಮದಲ್ಲಿ ಸಭಾಂಗಣ ನಿರ್ಮಾಣವೂ ನಡೆದಿದೆ.ಈ ಪ್ರದೇಶವನ್ನು ರಾಷ್ಟ್ರೀಯ ಸ್ಮಾರಕ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಶಾಸಕರು ಆಸಕ್ತಿ ತೋರಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಮುಂದಿನ ಹಂತದ ಯೋಜನೆಗಳು ರೂಪುಗೊಳ್ಳುವ ನಿರೀಕ್ಷೆಯಿದೆ.