ಮಂಗಳೂರು ಬೀಚ್‌ಗಳಲ್ಲಿ ‘ನೈಟ್‌ ಲೈಫ್‌’ ಶೀಘ್ರ ಜಾರಿ ನಿರೀಕ್ಷೆ

| Published : Dec 27 2024, 12:45 AM IST

ಮಂಗಳೂರು ಬೀಚ್‌ಗಳಲ್ಲಿ ‘ನೈಟ್‌ ಲೈಫ್‌’ ಶೀಘ್ರ ಜಾರಿ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಬೀಚ್‌ಗಳು ಶೀಘ್ರದಲ್ಲೇ ರಾತ್ರಿ ಸಮಯದಲ್ಲೂ ಪ್ರವಾಸಿಗರಿಗೆ ಮುಕ್ತವಾಗುವ ನಿರೀಕ್ಷೆಯಿದೆ. ಇದಕ್ಕೆ ಪೂರ್ವಭಾವಿಯಾಗಿ ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಬೀದಿ ದೀಪಗಳು, ಕಣ್ಗಾವಲು, ಲೈಫ್ ಗಾರ್ಡ್‌ಗಳಂತಹ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ಧತೆಗಳನ್ನು ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಬೀಚ್‌ಗಳು ಶೀಘ್ರದಲ್ಲೇ ರಾತ್ರಿ ಸಮಯದಲ್ಲೂ ಪ್ರವಾಸಿಗರಿಗೆ ಮುಕ್ತವಾಗುವ ನಿರೀಕ್ಷೆಯಿದೆ. ಇದಕ್ಕೆ ಪೂರ್ವಭಾವಿಯಾಗಿ ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಬೀದಿ ದೀಪಗಳು, ಕಣ್ಗಾವಲು, ಲೈಫ್ ಗಾರ್ಡ್‌ಗಳಂತಹ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ಧತೆಗಳನ್ನು ಆರಂಭಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ., ಮೊದಲಿಗೆ ಪಣಂಬೂರು ಬೀಚ್‌ನ್ನು ರಾತ್ರಿ 1 ಗಂಟೆವರೆಗೆ ಪ್ರವಾಸಿಗರಿಗೆ ತೆರೆಯಲು ಯೋಜಿಸಲಾಗಿದೆ. ನಂತರದ ದಿನಗಳಲ್ಲಿ ತಣ್ಣೀರುಬಾವಿ ಬೀಚ್, ತಣ್ಣೀರುಬಾವಿ ಬ್ಲೂಫ್ಲ್ಯಾಗ್‌ ಬೀಚ್‌ಗಳಲ್ಲೂ ಈ ಕ್ರಮ ಅನುಸರಿಸಲಾಗುವುದು. ಇಷ್ಟೊತ್ತಿಗಾಗಲೇ ಈ ಯೋಜನೆ ಜಾರಿಗೊಳಿಸಲು ಉದ್ದೇಶಿಸಿದ್ದೆವು, ಕೆಲ ಕಾರಣಗಳಿಂದ ವಿಳಂಬವಾಗಿದೆ ಎಂದು ಹೇಳಿದರು.

ಕಣ್ಗಾವಲು, ಬೆಳಕು, ಲೈಫ್ ಗಾರ್ಡ್‌ಗಳಂತಹ ಎಲ್ಲ ಅಗತ್ಯ ಭದ್ರತಾ ವ್ಯವಸ್ಥೆಗಳು ಜಾರಿಯಾದ ನಂತರ ಒಂದು ಅಥವಾ ಎರಡು ವಾರಗಳಲ್ಲಿ ಪ್ರವಾಸಿಗರಿಗೆ ತೆರೆಯಲು ಉದ್ದೇಶಿಸಲಾಗಿದೆ ಎಂದರು.

ಬಾರ್‌, ಪಬ್‌ ಸದ್ಯಕ್ಕಿಲ್ಲ:

ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌ ಮಾತನಾಡಿ, ಎಲ್ಲ ಮೂಲ ವ್ಯವಸ್ಥೆಗಳೊಂದಿಗೆ ಕಡಲ ತೀರಗಳನ್ನು ಸುರಕ್ಷಿತಗೊಳಿಸಿದ ಮೇಲೆ ರಾತ್ರಿಯಲ್ಲಿ ಪ್ರವಾಸಿಗರಿಗೆ ಪ್ರವೇಶ ನೀಡಲು ನಮಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು. ಆದರೆ, ಪಬ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮಧ್ಯರಾತ್ರಿ 1 ಗಂಟೆಯವರೆಗೆ ತೆರೆದಿಡುವ ನಿಯಮವು ಸದ್ಯಕ್ಕೆ ಬೆಂಗಳೂರು ಹೊರತುಪಡಿಸಿ ಇತರ ನಗರಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು..............

‘ಕನ್ನಡಪ್ರಭ’ ವರದಿ ಫಲಶ್ರುತಿಬೀಚ್‌ಗಳನ್ನು ರಾತ್ರಿ ವೇಳೆಯಲ್ಲೂ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಕೇಳಿಬಂದಿತ್ತು. ಕೆಲವು ತಿಂಗಳ ಹಿಂದೆ ರಾಜ್ಯ ಸರ್ಕಾರವು ಬೆಂಗಳೂರು ಮತ್ತು ರಾಜ್ಯದ ಇತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಸಂಸ್ಥೆಗಳನ್ನು 1 ಗಂಟೆಯವರೆಗೆ ತೆರೆದಿಡಲು ಅನುಮತಿ ನೀಡಿದ ನಂತರ ಬೀಚ್‌ಗಳನ್ನೂ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಎಂಬ ಒತ್ತಡ ಹೆಚ್ಚಿತ್ತು. ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದ ಮಧ್ಯಸ್ಥಗಾರರು ವಿವಿಧ ವೇದಿಕೆಗಳಲ್ಲಿ ಈ ವಿಚಾರಗಳನ್ನು ಮುಂದಿಟ್ಟಿದ್ದರು. ಈ ಎಲ್ಲ ವಿಚಾರಗಳ ಕುರಿತು ‘ಕನ್ನಡಪ್ರಭ’ ಅ.28ರಂದೇ ‘ನೈಟ್‌ ಲೈಫ್‌ ಆದೇಶವಾದರೂ ಜಾರಿ ಮಾಡಲು ಬಿಡುತ್ತಿಲ್ಲ!’ ಎಂಬ ವಿಶೇಷ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು.