ಸಾರಾಂಶ
ಜಿಲ್ಲೆಯಲ್ಲಿ ಆಯ್ಕೆಯಾಗಿರುವ ೮೯೦ ವಿಶೇಷಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಫೆ. ೧೫ ರಂದು ನಡೆಯಲಿದ್ದು, ಇದಕ್ಕಾಗಿ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳುವಂತೆ ಎಡಿಸಿ ಗೀತಾ ಹುಡೇದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ೮೯೦ ವಿಶೇಷಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಫೆ. ೧೫ ರಂದು ನಡೆಯಲಿದ್ದು, ಇದಕ್ಕಾಗಿ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳುವಂತೆ ಎಡಿಸಿ ಗೀತಾ ಹುಡೇದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿಶೇಷಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸುವ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಲಿಂಕೊ ಈಗಾಗಲೇ ಶಿಬಿರ ಆಯೋಜಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಾಧನ ಸಲಕರಣೆಗಳನ್ನು ಸಿದ್ಧಪಡಿಸಿದೆ. ಈ ಸಲಕರಣೆಗಳ ವಿತರಣೆ ಕಾರ್ಯಕ್ರಮ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಸಲಾಗುತ್ತದೆ. ಜಿಲ್ಲೆಯ ವಿವಿಧ ಭಾಗಗಳಿಂದ ಫಲಾನುಭವಿಗಳು ಬಂದು ಸಲಕರಣೆ ಪಡೆಯಲು ಪೂರಕವಾಗಿರುವ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಎಡಿಸಿ ತಿಳಿಸಿದರು.ಜಿಲ್ಲಾ ಕೇಂದ್ರದಲ್ಲಿ ಸಾಧನ ಸಲಕರಣೆ ಪಡೆಯಲು ಅನುಕೂಲವಾಗುವಂತೆ ಫಲಾನುಭವಿಗಳಿಗೆ ಅವರ ಗ್ರಾಮಗಳಿಂದ ವಾಹನಗಳ ಮೂಲಕ ಕರೆತರಬೇಕು. ಫಲಾನುಭವಿಗಳ ಪಟ್ಟಿಯನ್ನು ಪಡೆದು ಆಶಾ ಕಾರ್ಯಕರ್ತೆಯರ ಸಹಕಾರ ಪಡೆದು ಫಲಾನುಭವಿಗಳನ್ನು ಜವಾಬ್ದಾರಿಯುತವಾಗಿ ಕರೆತರಬೇಕು. ಕಾರ್ಯಕ್ರಮ ಮುಗಿದ ಬಳಿಕ ವಾಹನದಲ್ಲಿ ಕಳುಹಿಸಿಕೊಡುವ ವ್ಯವಸ್ಥೆಯು ಆಗಬೇಕೆಂದು ಸೂಚಿಸಿದರು. ನಗರದಲ್ಲಿ ಆಯೋಜನೆಯಾಗುವ ವಿತರಣಾ ಕಾರ್ಯಕ್ರಮದಲ್ಲಿ ಹೆಚ್ಚು ವೈದ್ಯರ ತಂಡ, ಇನ್ನಿತರ ಸಿಬ್ಬಂದಿಯನ್ನು ನಿಯೋಜಿಸಿ ನೆರವಾಗಬೇಕಿದೆ. ವಿಶೇಷಚೇತನರ ಇಲಾಖೆ ವತಿಯಿಂದ ನಿಯೋಜನೆಯಾಗಿರುವ ವಿವಿದ್ದೋದ್ದೇಶ ಕಾರ್ಯಕರ್ತರು ಆಯಾ ಭಾಗದ ಈಗಾಗಲೇ ಸಲಕರಣೆ ಪಡೆಯಲು ಆಯ್ಕೆಗೊಂಡಿರುವ ಫಲಾನುಭವಿಗಳಿಗೆ ಮಾಹಿತಿ ನೀಡಿ ಕಾರ್ಯಕ್ರಮದ ಪ್ರಯೋಜನೆ ತಲುಪಲು ಅಗತ್ಯ ಕ್ರಮವಹಿಸಬೇಕು ಎಂದರು.ನಗರಸಭೆ, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಹ ಕಾರ್ಯಕ್ರಮದ ಆಯೋಜನೆಗೆ ನಿಗದಿಪಡಿಸಿರುವ ಜವಾಬ್ದಾರಿಗಳನ್ನು ಚಾಚು ತಪ್ಪದೇ ನಿರ್ವಹಿಸಬೇಕು. ವಿಶೇಷಚೇತನರ ನೆರವಿಗೆ ಜಿಲ್ಲೆಯಲ್ಲಿ ಏರ್ಪಡಿಸಿರುವ ಈ ಮಹತ್ವದ ಕಾರ್ಯಕ್ರಮ ಯಶಸ್ಸುಗೊಳಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು. ಜಿಪಂ ಸಹಾಯಕ ಕಾರ್ಯದರ್ಶಿಯ ಶ್ರೀಕಂಠರಾಜೇಅರಸ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.