ಜಾತ್ಯತೀತ ತತ್ವದ ನೆಲೆಗಟ್ಟಿನಲ್ಲಿ ಸುತ್ತೂರು ಕ್ಷೇತ್ರ ಮುನ್ನಡೆದಿದೆ

| Published : Dec 30 2024, 01:00 AM IST

ಜಾತ್ಯತೀತ ತತ್ವದ ನೆಲೆಗಟ್ಟಿನಲ್ಲಿ ಸುತ್ತೂರು ಕ್ಷೇತ್ರ ಮುನ್ನಡೆದಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಬಸವಾದಿ ಶರಣರ ಆಶಯದಂತೆ ಜಾತ್ಯತೀತ ತತ್ವದ ನೆಲೆಗಟ್ಟಿನಲ್ಲಿ ಸುತ್ತೂರು ಶ್ರೀಕ್ಷೇತ್ರ ಮುನ್ನಡೆಯುವ ಮೂಲಕ ನಾಡಿನ ಕಲ್ಯಾಣ ಕಾರ್ಯಕ್ರಮಗಳಿಗೆ ಮೇಲ್ಪಂಕ್ತಿ ಹಾಕೊಟ್ಟಿದೆ ಎಂದು ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ ಬಣ್ಣಿಸಿದರು. ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರ ಆಶಯದಂತೆ ಹಸಿದವರಿಗೆ ಅನ್ನ, ಅಕ್ಷರ, ಅರಿವೆ, ಅರಿವು ನೀಡುವ ಮೂಲಕ ಅಜ್ಞಾನದ ಕತ್ತಲು ಕಳೆದು ಸುಜ್ಞಾನದ ಬೀಜ ಬಿತ್ತುತ್ತಿರುವುದು ಪ್ರಶಂಸನೀಯ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಬಸವಾದಿ ಶರಣರ ಆಶಯದಂತೆ ಜಾತ್ಯತೀತ ತತ್ವದ ನೆಲೆಗಟ್ಟಿನಲ್ಲಿ ಸುತ್ತೂರು ಶ್ರೀಕ್ಷೇತ್ರ ಮುನ್ನಡೆಯುವ ಮೂಲಕ ನಾಡಿನ ಕಲ್ಯಾಣ ಕಾರ್ಯಕ್ರಮಗಳಿಗೆ ಮೇಲ್ಪಂಕ್ತಿ ಹಾಕೊಟ್ಟಿದೆ ಎಂದು ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ ಬಣ್ಣಿಸಿದರು.

ನಗರದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಸುತ್ತೂರು ಶ್ರೀಮಠದ ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಬೀಳ್ಕೊಟ್ಟು ಮಾತನಾಡಿದರು. ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರ ಆಶಯದಂತೆ ಹಸಿದವರಿಗೆ ಅನ್ನ, ಅಕ್ಷರ, ಅರಿವೆ, ಅರಿವು ನೀಡುವ ಮೂಲಕ ಅಜ್ಞಾನದ ಕತ್ತಲು ಕಳೆದು ಸುಜ್ಞಾನದ ಬೀಜ ಬಿತ್ತುತ್ತಿರುವುದು ಪ್ರಶಂಸನೀಯ. ಬಡ ಹಾಗೂ ಮಧ್ಯಮ ವರ್ಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶ್ರೀಮಠ ನೆಲೆ ಕಲ್ಪಿಸಿದ್ದು ನಾಡಿನ ಮನೆ ಮಾತಾಗಿದೆ. ಅಂತಹ ದೈವ ಭೂಮಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಜಾತ್ರಾ ಮಹೋತ್ಸವದ ರಥ ರಾಜ್ಯದ ಉದ್ದಗಲಕ್ಕೂ ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಜ. ೨೬ರಿಂದ ೩೧ರವರೆಗೆ ಸುತ್ತೂರಿನಲ್ಲಿ ಐದು ದಿನ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಕೃಷಿ, ಜ್ಞಾನ, ವಿಜ್ಞಾನ ಮೇಳ, ಕಲೆ, ಸಂಸ್ಕೃತಿ ಬಿಂಬಿಸುವ ಹತ್ತು ಹಲವು ಕಾರ್ಯಕ್ರಮಗಳು ಜರುಗಲಿದ್ದು ಉತ್ಸವದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಹೇಳಿದರು.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ್ಷ ಜಿವಿಟಿ ಬಸವರಾಜು ಮಾತನಾಡಿ, ಸುತ್ತೂರಿನಲ್ಲಿ ಹಮ್ಮಿಕೊಂಡಿರುವ ಐತಿಹಾಸಿಕ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ವೈವಿಧ್ಯಮಯ ಚಟುವಟಿಕೆಗಳು ನಡೆಯಲಿವೆ. ಸುತ್ತೂರು ಜಗದ್ಗುರುಗಳು ದೇಶ, ವಿದೇಶಗಳಲ್ಲಿ ಶಾಲಾ, ಕಾಲೇಜುಗಳನ್ನು ಸ್ಥಾಪಿಸಿದ್ದು ಇಂದಿಗೂ ತನ್ನದೇ ಕೊಡುಗೆ ನೀಡುತ್ತಿವೆ. ಇಂತಹ ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಜಗತ್ತಿನೆಲ್ಲೆಡೆ ಬದುಕು ಕಟ್ಟಿಕೊಂಡಿದ್ದಾರೆ ಎಂದು ಬಣ್ಣಿಸಿದರು. ನಂಜನಗೂಡು ಜೆಎಸ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಹೊನ್ನೇಗೌಡ, ಹೊಯ್ಸಳೇಶ್ವರ ಪದವಿ ಕಾಲೇಜು ಪ್ರಾಂಶುಪಾಲ ವಸಂತಕುಮಾರ್, ಸುತ್ತೂರು ಪಂಚಾಕ್ಷರಿ, ಸಮಾಜ ಸೇವಕ ರೈಲ್ವೆ ಮಹದೇವ್ ಮಾತನಾಡಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಪಂಚಾಕ್ಷರಿ, ಮುಖಂಡರಾದ ಕೆಂಕೆರಹಳ್ಳಿ ಶಿವನಂಜೇಗೌಡ, ಮುರುಂಡಿ ಶಿವಯ್ಯ,ಕೆ.ವಿ.ದಿವಾಕರ್‌, ಮಾದನಹಳ್ಳಿ ಚಂದ್ರು, ಕೆಂಕೆರೆಹಳ್ಳಿ ಪ್ರಕಾಶ್, ಮೋಹನ್ ಕುಮಾರ್, ಗಂಗಾಧರಸ್ವಾಮಿ, ಮಠದ ಬಸವರಾಜು, ಗುತ್ತಿಗೆದಾರ ಗೀಜಿಹಳ್ಳಿ ರವಿ, ಜ್ಞಾನಮೂರ್ತಿ, ಗೋವಿನಪುರ ಆನಂದ್, ವಿಶ್ವನಾಥ್, ಕೃಪಣ್ಣ, ಮುಖ್ಯೋಪಾಧ್ಯಾಯ ಅರುಣ್ ಕುಮಾರ್, ಹರಳಕಟ್ಟ ಶಂಕರಪ್ಪ, ರೋಟರಿ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಶ್ರೀಮಠದ ಭಕ್ತರು ಹಾಜರಿದ್ದರು. ಮಹಿಳಾ ತಂಡ ನಡೆಸಿಕೊಟ್ಟ ಭಜನಾ ಮೇಳ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.