ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯಾದ್ಯಂತ ಸೆ.27ರಿಂದ ಮನೆ ಮನೆ ಬಾಗಿಲಿಗೆ ಗಣತಿದಾರರು ಜಾತಿಗಣತಿಗೆ ಆಗಮಿಸುವ ಹಿನ್ನೆಲೆಯಲ್ಲಿ ಕುರುಬ ಸಮುದಾಯದ ಜಾಗೃತಿಗಾಗಿ ಹಾಲುಮತ ಮಹಾಸಭಾದಿಂದ ಜಿಲ್ಲಾದ್ಯಂತ ಪ್ರತಿ ಗ್ರಾಮ, ನಗರ, ಪಟ್ಟಣ ಪ್ರದೇಶದಲ್ಲಿ ನಮ್ಮ ಗಣತಿ ನಮ್ಮ ಹಕ್ಕು ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಮಹಾಸಭಾ ರಾಜ್ಯ ಸಂಚಾಲಕ ರಾಜು ಮೌರ್ಯ ತಿಳಿಸಿದರು.ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹಾಲುಮತ ಮಹಾಸಭಾ ರಾಜ್ಯಾದ್ಯಂತ ನಮ್ಮ ಗಣತಿ ನಮ್ಮ ಹಕ್ಕು ಜಾಗೃತಿ ಅಭಿಯಾನ ಆರಂಭಿಸಿದ್ದು, ದಾವಣಗೆರೆ ಜಿಲ್ಲಾದ್ಯಂತ ನಗರ, ಗ್ರಾಮೀಣ ಪ್ರದೇಶ, ಎಲ್ಲಾ ತಾಲೂಕಿನಲ್ಲೂ ಕುರುಬ ಸಮುದಾಯದವರು ನಿರ್ಲಕ್ಷ್ಯ ಮಾಡದೇ, ಶೇ.100ಕ್ಕೆ 100ರಷ್ಟು ಜಾತಿಗಣತಿಯನ್ನು ಯಶಸ್ವಿಗೊಳಿಸಬೇಕು ಎಂದರು.
ಸರ್ಕಾರ ಜಾತಿಯ ಸಂಖ್ಯೆಯನ್ನು ನಿಗದಿಪಡಿಸಿದ ನಂತರ ಕರಪತ್ರಗಳು, ವಾಟ್ಸಪ್, ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾಗಳ ಮೂಲಕ ಸಮಾಜ ಬಾಂಧವರಿಗೆ ತಿಳಿಸಲಾಗುವುದು. ಜಾತಿಗಣತಿದಾರರು ಮನೆ ಬಾಗಿಲಿಗೆ ಬಂದಾಗ 2 ಎ ವರ್ಗದಲ್ಲಿರುವ ಕುರುಬ ಸಮಾಜ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಕುರುಬ ಅಂತಲೇ ಬರೆಸಬೇಕು ಎಂದರು.ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಯಲ್ಲಿರುವ ಗೊಂಡ, ಜೇನು ಕುರುಬ, ಬೆಟ್ಟ ಕುರುಬ, ಕಾಡು ಕುರುಬ, ಕುರುಮನ್ಸ್, ಕಾಟ್ಟು ನಾಯಕನ್ ಹಾಗೂ ಕೊಡಗು ಜಿಲ್ಲೆಯಲ್ಲಿರುವ ಕುರುಬರು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಬರೆಸಬೇಕು. ಯಾವುದೇ ಕಾರಣಕ್ಕೂ ಗಣತಿದಾರರು ಮನೆ ಬಾಗಿಲಿಗೆ ಬಂದಾಗ ಗೊಂದಲಕ್ಕೆ ಒಳಗಾಗದೇ ಪ್ರತಿಯೊಬ್ಬರಿಗೂ ಮಾಹಿತಿ ತಿಳಿದುಕೊಂಡು, ಸೂಕ್ತವಾಗಿ, ಸಮರ್ಪಕವಾಗಿ ಜಾತಿ ಬರೆಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ 2015ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಕೈಗೊಂಡಿತ್ತು. 10 ವರ್ಷ ಕಾಲ ಸಮಯ ವ್ಯರ್ಥ ಮಾಡಿ, ಸಚಿವ ಸಂಪುಟದಲ್ಲಿ ಮಂಡಿಸಿತ್ತು. ಜಾತಿಗಳ ಸಂಖ್ಯೆಗಳು, ಶಿಫಾರಸ್ಸುಗಳ ಪಿಡಿಎಪ್ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ ಬಗ್ಗೆ ಪರ-ವಿರೋಧ ಚರ್ಚೆ ನಂತರ ಮತ್ತೆ ಹೊಸದಾಗಿ ಸಮೀಕ್ಷೆ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅರ್ಥಾತ್ ಜಾತಿಗಣತಿ ಸಮೀಕ್ಷೆ ಪ್ರಕ್ರಿಯೆಗೆ ಮುಂದಾಗಿದೆ ಎಂದು ಹೇಳಿದರು.ಮಹಾಸಭಾ ಜಿಲ್ಲಾಧ್ಯಕ್ಷ ಸಿ.ವೀರಣ್ಣ, ಕಾರ್ಯಾಧ್ಯಕ್ಷ ಚಂದ್ರು ದೀಟೂರು, ಉಪಾಧ್ಯಕ್ಷ ಜಿ.ಷಣ್ಮುಖಪ್ಪ, ಕಾರ್ಯದರ್ಶಿ ಎಸ್.ಎಂ.ಸಿದ್ದಲಿಂಗಪ್ಪ, ಜಿಲ್ಲಾ ಸಂಚಾಲಕ ಕೆ.ಜಿ.ಡಿ. ಬಸವರಾಜ, ಸಲ್ಲಳ್ಳಿ ಹನುಮಂತಪ್ಪ, ಬಿ.ಜಿ.ಘನರಾಜ ಇತರರು ಇದ್ದರು.
10 ವರ್ಷದ ಹಿಂದೆ ನಡೆಸಿದ್ದ ಗಣತಿಯಲ್ಲಿ ಪೆನ್ಸಿಲ್‌ನಿಂದ ಬರೆಯುತ್ತಿದ್ದರು, ನಮ್ಮ ಮನೆಗೆ ಬಂದೇ ಇಲ್ಲವೆಂಬ ಆರೋಪವಿತ್ತು. ಗಣತಿದಾರರು ಫಾರಂ ಭರ್ತಿ ಮಾಡುವಾಗ ಸ್ವಯಂಸೇವಕರು ಎಚ್ಚರಿಕೆಯಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಪೆನ್ಸಿಲ್ ಬಳಸದಂತೆ, ಡಿಜಿಟಲ್ ಟ್ಯಾಬ್ ಮೂಲಕ ದಾಖಲು ಮಾಡುವುದಾದರೆ ಮನೆಯ ಮುಖ್ಯಸ್ಥರು ಹೇಳುವ ಮಾಹಿತಿ ಯಥಾವತ್ ಆಗಿ ಎಂಟ್ರಿ ಮಾಡಿಸುವ ಕರ್ತವ್ಯ ಪ್ರತಿಯೊಬ್ಬರದ್ದಾಗಿರುತ್ತದೆ.ರಾಜು ಮೌರ್ಯ, ರಾಜ್ಯ ಸಂಚಾಲಕ, ಹಾಲುಮತ ಮಹಾಸಭಾ.