ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ‘ನಮ್ಮ ಶಾಲೆ, ನಮ್ಮ ಕೊಡುಗೆ’ ಕಾರ್ಯಕ್ರಮ: ಶಾಸಕ ನರೇಂದ್ರಸ್ವಾಮಿ

| Published : Sep 11 2024, 01:04 AM IST

ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ‘ನಮ್ಮ ಶಾಲೆ, ನಮ್ಮ ಕೊಡುಗೆ’ ಕಾರ್ಯಕ್ರಮ: ಶಾಸಕ ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸುತ್ತಿದೆ. ಶಿಕ್ಷಣ ಇಲಾಖೆ ಹೊಸ ಅಲೋಚನೆಯ ಯಶ್ವಸಿಗೆ ಎಲ್ಲರೂ ಮುಂದಾಗಬೇಕು. ಬೆಳಗಾವಿಯಲ್ಲಿ ನಡೆಯುವ ರಾಜ್ಯ ಮಟ್ಟದ ‘ನಮ್ಮ ಶಾಲೆ ನಮ್ಮ ಕೊಡುಗೆ’ ಕಾರ್ಯಕ್ರಮದಲ್ಲಿ ತಾಲೂಕಿನ ಇಬ್ಬರಿಗೆ ಅವಕಾಶ ಸಿಗಲಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಲು ಸರ್ಕಾರದಿಂದ ‘ನಮ್ಮ ಶಾಲೆ ನಮ್ಮ ಕೊಡುಗೆ’ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಪಟ್ಟಣದ ತಾಪಂ ಆವರಣದ ಶಾಸಕರ ಕಚೇರಿಯಲ್ಲಿ ‘ನಮ್ಮ ಶಾಲೆ ನಮ್ಮ ಕೊಡುಗೆ’ ಕಾರ್ಯಕ್ರಮದ ಪೂರ್ವಭಾವಿಯಾಗಿ ಶಿಕ್ಷಣಾಸ್ತಕರ ಹಾಗೂ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸುತ್ತಿದೆ. ಶಿಕ್ಷಣ ಇಲಾಖೆ ಹೊಸ ಅಲೋಚನೆಯ ಯಶ್ವಸಿಗೆ ಎಲ್ಲರೂ ಮುಂದಾಗಬೇಕು. ಬೆಳಗಾವಿಯಲ್ಲಿ ನಡೆಯುವ ರಾಜ್ಯ ಮಟ್ಟದ ‘ನಮ್ಮ ಶಾಲೆ ನಮ್ಮ ಕೊಡುಗೆ’ ಕಾರ್ಯಕ್ರಮದಲ್ಲಿ ತಾಲೂಕಿನ ಇಬ್ಬರಿಗೆ ಅವಕಾಶ ಸಿಗಲಿದೆ ಎಂದರು.

ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಹೀಗಾಗಿ ಮೌಲ್ಯವುಳ್ಳ ಶಿಕ್ಷಣಾಸಕ್ತರನ್ನು ಗುರುತಿಸುವ ಕೆಲಸವಾಗಬೇಕು. ಆಯಾಯ ಗ್ರಾಮಗಳಲ್ಲಿ ಉತ್ತಮ ಸ್ಥಿತಿಯಲ್ಲಿ ಇರುವ ದಾನಿಗಳ ನೆರವಿನ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗಣಿತ, ವಿಜ್ಞಾನ ವಿಷಯಗಳ ಬಗ್ಗೆ ಹೆಚ್ಚಿನ ಜ್ಞಾನ ತುಂಬುವ ಕಾರ್ಯ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಮುಂದಾಗಬೇಕು ಎಂದರು.

ನಾಲ್ಕೈದು ಶಾಲೆಗಳು ಒಗ್ಗೂಡಿ ನೆರವು ಪಡೆಯಬೇಕು. ಅಲ್ಲದೇ, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದು, ಅವರಿಂದ ಉತ್ತಮ ರೀತಿಯಲ್ಲಿ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದರು.

ಈಗಾಗಲೇ ಕೊಠಡಿಗಳ ಕೊರತೆ ನೀಗಿಸಲು 2.25 ಕೋಟಿ ರು. ವಿಶೇಷ ಅನುದಾನ ತಂದಿರುವೆ. 2.5 ಕೋಟಿ ರು. ನನ್ನ ಅನುದಾನವನ್ನು ಶಿಕ್ಷಣಕ್ಕಾಗಿಯೇ ಮೀಸಲಿಡಲಾಗಿದೆ. 50 ಲಕ್ಷ ರು.ಗಳನ್ನು ಟ್ಯಾಬ್‌ಗಳ ಖರೀದಿಗಾಗಿ ನೀಡಲಾಗಿದೆ. ಎಲ್ಲೆಡೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಎಂದರು.

ಮುಖ್ಯವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಒತ್ತು ನೀಡುವುದರಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಬಹುದು ಎಂದರು.

ಕಳೆದ ಒಂದೂವರೆ ವರ್ಷದಿಂದ ಹಾರ ತೂರಾಯಿ ಹಾಕುವ ಬದಲು ಶೈಕ್ಷಣಿಕ ಸಾಮಗ್ರಿಗಳನ್ನು ನೀಡುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಸಾಕಷ್ಟು ನೆರವು ಬಂದಿವೆ. ಮುಂದಿನ ದಿನಗಳಲ್ಲಿ ಗ್ರಾಪಂ ಸಹಯೋಗ ಹಾಗೂ ಪ್ರಮುಖ ಮುಖಂಡರ ಸಹಕಾರದಿಂದ ‘ಶಿಕ್ಷಣಕ್ಕಾಗಿ ನಾವು ನೀವು’ ಎಂಬ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸಲಾಗಿದೆ. ಗ್ರಾಮೀಣ ಮಟ್ಟದಲ್ಲಿಯೇ ನಗರ ಪ್ರದೇಶ ಹಾಗೂ ಖಾಸಗಿ ಶಾಲೆಗಿಂತ ಉತ್ತಮ ಶಿಕ್ಷಣ ನೀಡುವಂಥ ಪ್ರಯತ್ನ ನಡೆಸಲಾಗುವುದು ಎಂದರು.

ಬೆಳಗಾವಿಯಲ್ಲಿ ನಡೆಯುವ ರಾಜ್ಯ ಮಟ್ಟದ ‘ನಮ್ಮ ಶಾಲೆ ನಮ್ಮ ಕೊಡುಗೆ’ ಕಾರ್ಯಕ್ರಮಕ್ಕೆ ಶಿಕ್ಷಣಾಸ್ತಕರಾದ ಮಾರೇಹಳ್ಳಿ ಆದರ್ಶ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಟಿ.ಎಂ.ಪ್ರಕಾಶ್ ಮತ್ತು ಕಿರಗಸೂರು ಗ್ರಾಮದ ಮಹದೇವಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು.