ಜಿಹಾದಿ, ಉಗ್ರರ ತುಷ್ಟೀಕರಣ ಸಲ್ಲದು

| Published : Apr 23 2024, 12:47 AM IST

ಸಾರಾಂಶ

ಸ್ವಪಕ್ಷದ ಕಾರ್ಪೊರೇಟರ್‌ ಮಗಳ ಕೊಲೆ ಪ್ರಕರಣಕ್ಕೆ ಸರಿಯಾಗಿ ಸರ್ಕಾರ ಸ್ಪಂದಿಸುತ್ತಿಲ್ಲ. ಕೊಲೆಗೆ ವೈಯಕ್ತಿಕ ಕಾರಣವೆಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಯಲ್ಲಿಯೇ ಈ ಸರ್ಕಾರ ಮಗ್ನವಾಗಿದೆ ಎಂದು ಟೀಕಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ - ಬನಹಟ್ಟಿ

ಲವ್ ಜಿಹಾದ್ ಮೂಲಕ ಹಿಂದೂಗಳ ನಿರ್ನಾಮದ ಕನಸು ಹೊತ್ತವರು, ದೇಶದ್ರೋಹಿಗಳು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಡಿಸುವಲ್ಲಿ ಮುಂದಾಗಿರುವ ಕಾಂಗ್ರೆಸ್‌, ಅನಗತ್ಯವಾಗಿ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ. ಇದರಿಂದ ರಾಜ್ಯವು ಉಗ್ರರಿಗೆ ನೆಚ್ಚಿನ ತಾಣವಾಗಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹರಿಹಾಯ್ದರು.

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ವಿರೋಧಿಸಿ ಬನಹಟ್ಟಿಯಲ್ಲಿ ಬಿಜೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳಿಂದ ನಡೆದ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಪಕ್ಷದ ಕಾರ್ಪೊರೇಟರ್‌ ಮಗಳ ಕೊಲೆ ಪ್ರಕರಣಕ್ಕೆ ಸರಿಯಾಗಿ ಸರ್ಕಾರ ಸ್ಪಂದಿಸುತ್ತಿಲ್ಲ. ಕೊಲೆಗೆ ವೈಯಕ್ತಿಕ ಕಾರಣವೆಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಯಲ್ಲಿಯೇ ಈ ಸರ್ಕಾರ ಮಗ್ನವಾಗಿದೆ ಎಂದು ಟೀಕಿಸಿದರು.

ನೇಹಾ ಕೊಲೆ ಪ್ರಕರಣವಷ್ಟೇ ಅಲ್ಲದೆ ಬೀದರ್‌ನಿಂದ ರಾಮನಗರವರೆಗೆ ಇಡೀ ರಾಜ್ಯಾದ್ಯಂತ ಲವ್ ಜಿಹಾದ್ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್‌ನ ಬೆಂಬಲವೇ ಕಾರಣ. ಕೊಲೆ ಪ್ರಕರಣದಲ್ಲಿರುವ ಫಯಾಜ್‌ಗೆ ತಕ್ಷಣವೇ ಗಲ್ಲು ಶಿಕ್ಷೆಯಾಗಬೇಕು. ಇಲ್ಲವೇ ಎನ್‌ಕೌಂಟರ್ ಮಾಡಿದ್ದಲ್ಲಿ ಕೊಲೆಯಾದ ಸ್ನೇಹಾ ಆತ್ಮಕ್ಕೆ ಶಾಂತಿ ದೊರಕುವುದು. ಪ್ರಕರಣಕ್ಕೆ ಹಾಗೂ ಕೊಲೆ ಆರೋಪಿ ಕುಟುಂಬಕ್ಕೆ ಅನ್ಯಾಯವೆಸಗುವ ಕುತಂತ್ರದಲ್ಲಿರುವ ಕಾಂಗ್ರೆಸ್ ಮತ ಬ್ಯಾಂಕ್ ಸಲುವಾಗಿ ಫಯಾಜ್ ರಕ್ಷಣೆಯಲ್ಲಿದ್ದಾರೆ. ಇದಕ್ಕೆ ಸಿಎಂ ಹಾಗೂ ಗೃಹ ಸಚಿವರೇ ಬೇಕಾಬಿಟ್ಟಿಯಾಗಿ ಮಾತನಾಡುತ್ತ ಪ್ರಕರಣದ ಹಾದಿ ತಪ್ಪಿಸುತ್ತ ಮುಂದಾಗಿರುವುದು ನಾಚಿಕೆಗೇಡಿತನದ ಪರಮಾವಧಿ. ದೇಶಕ್ಕಿಂತ ಮತಗಳಿಗೆ ಮನ್ನಣೆ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ ಎಲ್ಲ ಅವಾಂತರಗಳಿಗೆ ನೇರ ಹೊಣೆಯಾಗಿದೆ. ಇದನ್ನು ರಾಜ್ಯದ ಜನತೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನಗರದ ಭಗತ್‌ಸಿಂಗ್ ವೃತ್ತದಿಂದ ಗಾಂಧಿ ವೃತ್ತ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಸ್ ನಿಲ್ದಾಣ ಹತ್ತಿರದ ಚನ್ನಮ್ಮ ವೃತ್ತದ ಬಳಿ ಮಾನವ ಸರಪಳಿ ನಡೆಸಲಾಯಿತು.

ಮಾತಿನ ಚಕಮಕಿ:ಪ್ರತಿಭಟನೆ ವೇಳೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವ ಸಂದರ್ಭದಲ್ಲಿ ಸಿಪಿಐ ಸಂಜಯ ಬಳಗಾರ ಇದಕ್ಕೆ ವಿರೋಧಿಸುತ್ತಿದ್ದಂತೆ ಪ್ರತಿಭಟನಾಕಾರರೊಂದಿಗೆ ಪೊಲೀಸರ ಮಾತಿನ ಚಕಮಕಿ ನಡೆಯಿತು. ಕೊನೆಗೂ ಜಮಖಂಡಿ - ಕುಡಚಿ ರಾಜ್ಯ ಹೆದ್ದಾರಿ ಮಧ್ಯ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.

ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಶಿವಾನಂದ ಗಾಯಕವಾಡ, ಸಿದ್ಧನಗೌಡ ಪಾಟೀಲ, ಶಿವಾನಂದ ಕಾಗಿ, ಶ್ರೀಶೈಲ ಯಾದವಾಡ, ದುಂಡಪ್ಪ ಮಾಚಕನೂರ, ಶಿವಾನಂದ ಗುಂಡಿ, ಈಶ್ವರ ಯಳಸಂಗ, ಸವಿತಾ ಹೊಸೂರ, ಸುವರ್ಣಾ ಕೊಪ್ಪದ, ಪವಿತ್ರಾ ತುಕ್ಕಣ್ಣವರ, ಗೌರಿ ಮಿಳ್ಳಿ, ಮಂಜುಳಾ ಬೀಳಗಿ, ಬಸವರಾಜ ಅಮ್ಮಣಗಿಮಠ, ಸಿದ್ದು ಅಮ್ಮಣಗಿ, ಭುಜಬಲಿ ವೆಂಕಟಾಪುರ ಸೇರಿದಂತೆ ಅನೇಕರಿದ್ದರು.