ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ವಿರೋಧ ಪಕ್ಷಗಳು ಪಂಚ ಗ್ಯಾರಂಟಿ ಬಗ್ಗೆ ಅಪಪ್ರಚಾರ, ಲೇವಡಿ ಮಾಡಿದರೂ ಪಂಚ ಗ್ಯಾರಂಟಿ ಯಶಸ್ವಿಯಾಗಿ 3 ವರ್ಷ ಮುಗಿಸಿದೆ ಎಂದು ಕೆಡಿಪಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ವಿ. ಸಾಜು ತಿಳಿಸಿದರು.ಸೋಮವಾರ ಸಿಂಸೆ ಬೋವಿ ಕಾಲೋನಿ ಅಂಗನವಾಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆ 3 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆ, ಗಿಡ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗ್ಯಾರಂಟಿ ಯೋಜನೆಯನ್ನು ಸರ್ಕಾರ ಮುಂದುವರಿಸಲಿದೆ. ಯಾರೂ ಅಪಪ್ರಚಾರ ನಂಬಬಾರದು. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಭಾವನೆ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ದೇಶದ ಬೇರೆ ರಾಜ್ಯಗಳು ಸಹ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ₹2 ಸಾವಿರ ಪಡೆದ ಮಹಿಳೆಯರು ಆರೋಗ್ಯ, ಶಿಕ್ಷಣಕ್ಕಾಗಿ ಬಳಸುತ್ತಿದ್ದಾರೆ. ಕೆಲವರು ಗೃಹಲಕ್ಷ್ಮಿ ಹಣ ಬಳಸಿ ಜೀವನಕ್ಕೆ ಬೇಕಾದ ಅಂಗಡಿ ತೆರೆದಿದ್ದಾರೆ. ಕೃಷಿಗೆ ನೀರಾವರಿ ಮಾಡಲು ಬೋರ್ ವೆಲ್ ಕೊರೆಸಿದ್ದಾರೆ ಎಂದರು.ಸಿಡಿಪಿಓ ಇಲಾಖೆ ಮೇಲ್ವೀಚಾರಕಿ ಸಾವಿತ್ರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 16,129 ಫಲಾನುಭವಿಗಳು ನೋಂದಾಯಿಸಿದ್ದರು. ಇವರಲ್ಲಿ ಏ. ತಿಂಗಳಲ್ಲಿ 9,882 ಫಲಾನುಭವಿಗಳಿಗೆ ₹1 ಕೋಟಿ, 97 ಲಕ್ಷ, 64 ಸಾವಿರ ಬಂದಿದೆ. ಶೇ. 50 ರಷ್ಟು ಫಲಾನುಭವಿಗಳಿಗೆ ಹಣ ಬಂದಿದೆ. ಫೆಬ್ರವರಿವರೆಗೆ ಎಲ್ಲಾ ಫಲಾನುಭವಿಗಳಿಗೆ ಹಣ ಬಂದಿದೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಗೃಹಲಕ್ಷ್ಮಿ ಯೋಜನೆ ದಾಖಲಾತಿ ಪರಿಶೀಲನೆಗೆ ಮುಂದಿನ ದಿನಗಳಲ್ಲಿ ಮನೆ, ಮನೆಗೆ ಬರಲಿದ್ದು ಫಲಾನುಭವಿಗಳು ಮಾಹಿತಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜುಬೇದ ಮಾತನಾಡಿ ಮಹಿಳಾ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ₹2 ಸಾವಿರ ನೀಡಿದೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಮುಂದಿನ 2 ವರ್ಷ ಸಹ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ₹2 ಸಾವಿರ ನೀಡುತ್ತೇವೆ. ಕಳೆದ 3 ವರ್ಷದಲ್ಲಿ ₹72 ಸಾವಿರ ನೀಡಿದ್ದೇವೆ. ಮುಂದಿನ ಅವಧಿಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಇಂದಿರಾ ನಗರ ರಘು ಹಾಗೂ ನಿತ್ಯಾನಂದ ಉದ್ಘಾಟಿಸಿದರು. ಗುಬ್ಬಿಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗರತ್ನ ಅಧ್ಯಕ್ಷತೆ ವಹಿಸಿದ್ದರು. ಗುಬ್ಬಿಗಾ ಗ್ರಾಪಂ ಮಾಜಿ ಸದಸ್ಯ ವಸಂತಕುಮಾರ್,ವೆಲ್ ಫೇರ್ ಸೊಸೈಟಿ ಮಹಿಳಾ ಸಾಂತ್ವನ ಕೇಂದ್ರದ ನಿರ್ದೇಶಕಿ ಸಿನಿ, ಸಿಡಿಪಿಓ ಇಲಾಖೆ ರಮ್ಯ ಇದ್ದರು. ರಮ ಕಾರ್ಯಕ್ರಮ ನಿರೂಪಿಸಿದರು. ರತ್ನಮ್ಮ ವಂದಿಸಿದರು. ನಂತರ ಅಂಗನವಾಡಿ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.