ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಮ್ಮ ದೇಶದ ಸುರಕ್ಷತೆಗಾಗಿ ಗಡಿಕಾಯುತ್ತಿರುವ ನಮ್ಮ ಸೈನಿಕರಿಗೆ ಧೈರ್ಯ ತುಂಬಿ, ಅವರಿಗೆ ಒಳ್ಳೆಯ ಆರೋಗ್ಯ ಹಾಗೂ ಪ್ರಾಣಹಾನಿ ಆಗದಿರಲಿ ಎಂದು ನಗರದ ರೈಲ್ವೆ ನಿಲ್ದಾಣದ ಎದುರು ಇರುವ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನೂರಾರು ಜನ ಮಾಜಿ ಸೈನಿಕರು ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಸೇರಿ ಶನಿವಾರ ಪೂಜೆ ಸಲ್ಲಿಸಿ ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿದರು.ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಎ.ಎಸ್. ಪ್ರದೀಪ್ ಸಾಗರ್ ಮಾಧ್ಯಮದೊಂದಿಗೆ ಮಾತನಾಡಿ, ಭಾರತ ದೇಶದ ಗಡಿ ಭಾಗದಲ್ಲಿ ನಮ್ಮನ್ನು ಕಾಯುತ್ತಿರುವ ಸೈನಿಕರಿಗೆ ಹಾಗೂ ಕುಟುಂಬಕ್ಕೂ ಧೈರ್ಯ ತುಂಬುವ ಉದ್ದೇಶದಲ್ಲಿ ವಿಶೇಷ ಪೂಜೆ ಆಯೋಜನೆ ಮಾಡಲಾಗಿದೆ. ಪ್ರತಿ ಸೈನಿಕರಿಗೆ ನಾಗರಿಕರು ಗೌರವ ಕೊಡಬೇಕು. ಜೊತೆಗೆ ಸೈನಿಕರ ಶ್ರೇಯಸ್ಸಿಗಾಗಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಬೇಕಾಗಿ ಕೇಳುತ್ತೇನೆ ಎಂದರು.
ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪಾದಕರು ನಡೆಸಿದ ಅಮಾಯಕ ಭಾರತೀಯರ ಹತ್ಯೆಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು "ಆಪರೇಷನ್ ಸಿಂದೂರ " ಎಂಬ ಹೆಸರಿನಲ್ಲಿ ಭಯೋತ್ಪಾದನೆಯ ಹುಟ್ಟಡಗಿಸುವ ಕಾರ್ಯಾಚರಣೆ ಕೈಗೊಂಡಿದೆ. ಉಗ್ರರ ಸುಮಾರು ಒಂಬತ್ತು ಅಡಗುತಾಣಗಳನ್ನು ಧ್ವಂಸಗೊಳಿಸಿದ್ದಾರೆ. ನಮ್ಮ ಸೇನೆಯ ಈ ಕೆಚ್ಚೆದೆಯ ಸೈನಿಕರ ಯಶೋಗಾಥೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲು ಹಾಗೂ ಯುದ್ಧದ ಕಾರ್ಮೋಡ ಆವರಿಸಿರುವ ಈ ಸಂದರ್ಭದಲ್ಲಿ ನಮ್ಮ ದೇಶದ ಸೈನಿಕರಿಗೆ ನೈತಿಕ ಬೆಂಬಲವಾಗಿ ಹಾಗೂ ಈ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.ನಾವು ಸೈನಿಕ ವೃತ್ತಿಯಿಂದ ನಿವೃತ್ತರಾಗಿರಬಹುದು. ಆದರೆ ತುರ್ತು ಪರಿಸ್ಥಿತಿ ಬಂದು ಮತ್ತೆ ಯುದ್ಧಕ್ಕೆ ಕಾರ್ಯಪ್ರವೃತ್ತರಾಗಲು ಕರೆಕೊಟ್ಟರೇ ದೇಶಕ್ಕಾಗಿ ನಾವೆಲ್ಲಾ ಸಿದ್ಧರಿದ್ದೇವೆ. ಇನ್ನು ತುರ್ತು ಪರಿಸ್ಥಿತಿ ವೇಳೆ ದೇಶದ ಒಳಗಿರುವ ಜನರ ಸುರಕ್ಷತೆಗಾಗಿ ಕಾಲೇಜು ವಿದ್ಯಾರ್ಥಿಗಳೂ ಸಿದ್ಧರಾಗಲು ಹಾಗೂ ರಕ್ಷಣೆಗೆ ಏನು ಮಾಡಬಹುದು ಬಗ್ಗೆ ತರಬೇತಿ ನೀಡಲು ಜಿಲ್ಲಾಧಿಕಾರಿಗಳ ಬಳಿ ಹೋಗಿ ತಿಳಿಸಲಾಗವುದು ಅವರು ಒಪ್ಪಿಗೆ ಕೊಟ್ಟರೇ ಕಾರ್ಯಕ್ರಮ ರೂಪಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.
ಮಾಜಿ ಸೈನಿಕರ ಬೈಕ್ ರ್‍ಯಾಲಿಯು ಬಿ.ಎಂ. ರಸ್ತೆಯಲ್ಲಿರುವ ರೈಲ್ವೇ ನಿಲ್ದಾಣದ ಎದುರು ಕೆ.ಎಸ್.ಆರ್.ಟಿ.ಸಿ. ಶ್ರೀ ಆಂಜನೇಯ ಸ್ವಾಮಿ ದೇವಾಸ್ಥಾನದಿಂದ ಆರಂಭಗೊಂಡು ಶಂಕರಿಮಠ ರಸ್ತೆಯಿಂದ ಮಹಾತ್ಮ ಗಾಂಧಿ ರಸ್ತೆಯ ಮೂಲಕ ತನ್ವಿತ್ರಿಷಾ ಕಲ್ಯಾಣ ಮಂಟಪ ಸರ್ಕಲ್‌ನಿಂದ ಸುಬೇದಾರ್ ನಾಗೇಶ್ ವೃತ್ತ, ಸಹ್ಯಾದ್ರಿ ವೃತ್ತ, ಮಹಾವೀರ ವೃತ್ತ ಮಾರ್ಗವಾಗಿ ಹೇಮಾವತಿ ಪ್ರತಿಮೆ ಎನ್ .ಆರ್ ಸರ್ಕಲ್, ಮೂಲಕ ಬಿ.ಎಮ್ ರಸ್ತೆಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ವಾರ್ ಮೆಮೋರಿಯಲ್ ಹಾಲ್, ಕುವೆಂಪುನಗರದಲ್ಲಿ ಅಂತ್ಯಗೊಳಿಸಿದರು.ಇದೇ ವೇಳೆ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿಯ ತಾಲೂಕು ಅಧ್ಯಕ್ಷ ಕರೀಗೌಡ, ಉಪಾಧ್ಯಕ್ಷ ರಮೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಯೋಗರಾಜು, ಕಾಳೇಗೌಡ, ಮಾಜಿ ಜಿಲ್ಲಾಧ್ಯಕ್ಷ ನಾಗರಾಜು, ಗಂಗಾಧರ್, ಖಜಾಂಚಿ ತಿಮ್ಮೇಗೌಡ, ಬಿ. ಸೋಮೇಶ್, ವೆಂಕಟೇಶ್, ಹಿಂದುಪರ ಸಂಘಟನೆಯ ಲೋಕೇಶ್, ರಕ್ಷಿತ್ ಭಾರಧ್ವಜ್, ಲಯನ್ ಕಿರಣ್ ಇತರರು ಉಪಸ್ಥಿತರಿದ್ದರು.