ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರತಿಬಂಧ ಅಧಿನಿಯಮ ಪಾಲಿಸಿ

| Published : Oct 30 2024, 12:48 AM IST

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರತಿಬಂಧ ಅಧಿನಿಯಮ ಪಾಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ ಜಾರಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989, ಹಾಗೂ ಪರಿಷ್ಕೃತ ಅಧಿನಿಯಮ 2015, ನಿಯಮಗಳು 1995 ಮತ್ತು 2016ರ ಪರಿಷ್ಕೃತ ನಿಯಮಗಳ ಪಾಲನೆ ಮತ್ತು ದಲಿತ ದೌರ್ಜನ್ಯ ಕಾಯ್ದೆಗಳ ಬಗ್ಗೆ ಅರಿವು ಪ್ರತಿಯೊಬ್ಬರೂ ಅರಿತುಕೊಳ್ಳುವುದು ಒಳ್ಳೆಯದು ಎಂದು ತಹಸೀಲ್ದಾರ್ ಸಂತೋಷ್ ಕುಮಾರ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ ಜಾರಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989, ಹಾಗೂ ಪರಿಷ್ಕೃತ ಅಧಿನಿಯಮ 2015, ನಿಯಮಗಳು 1995 ಮತ್ತು 2016ರ ಪರಿಷ್ಕೃತ ನಿಯಮಗಳ ಪಾಲನೆ ಮತ್ತು ದಲಿತ ದೌರ್ಜನ್ಯ ಕಾಯ್ದೆಗಳ ಬಗ್ಗೆ ಅರಿವು ಪ್ರತಿಯೊಬ್ಬರೂ ಅರಿತುಕೊಳ್ಳುವುದು ಒಳ್ಳೆಯದು ಎಂದು ತಹಸೀಲ್ದಾರ್ ಸಂತೋಷ್ ಕುಮಾರ್ ಸಲಹೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ,ತಾಲೂಕು ಕಚೇರಿ ಮುಂಭಾಗ ಮಂಗಳವಾರ ಆಯೋಜಿಸಿದ್ದ ಅಸ್ಪೃಶ್ಯತೆ ನಿವಾರಣಾ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಸಂವಿಧಾನವು ನಮ್ಮ ದೇಶದ ನಾಗರಿಕರಿಗೆ ಎಲ್ಲಾ ರೀತಿಯ ಕಾನೂನುಗಳನ್ನು ಜಾರಿಗೊಳಿಸಿದೆ, ದೇಶದ ಪ್ರಜೆಗಳಾಗಿ ನಾವೆಲ್ಲರೂ ದೇಶದ ಸಂವಿಧಾನವನ್ನು ಅಧ್ಯಯನ ಮಾಡಿ ದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ಜಾಗರೂಕರಾಗಿರಬೇಕಿದೆ, ಎಲ್ಲಾ ಪ್ರಜೆಗಳಿಗೂ ತಮ್ಮದೇಯಾದ ಹಕ್ಕು ಮತ್ತು ಕರ್ತವ್ಯಗಳಿವೆ, ಆ ಪರಿಮಿತಿಯಲ್ಲಿ ಪ್ರತಿಯೊಬ್ಬರೂ ಜೀವಿಸಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಂದು ಧರ್ಮ ಮತ್ತು ಸಮುದಾಯಗಳು ದಲಿತ ದೌರ್ಜನ್ಯ ಕಾಯ್ದೆಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ದಲಿತ ದೌರ್ಜನ್ಯ ಪ್ರಕರಣಗಳು ಕ್ಷೀಣಿಸುತ್ತವೆ. ಒಂದು ವೇಳೆ ಗಂಭೀರ ಸ್ವರೂಪದ ದೌರ್ಜನ್ಯಗಳು ಘಟಿಸಿದರೆ ತಕ್ಷಣವೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಆಸ್ತಿ ಮತ್ತು ಪ್ರಾಣಹಾನಿ ಬಗ್ಗೆ ಪರಿಶೀಲಿಸಿ ರಕ್ಷಣೆ ಮತ್ತು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಂತ್ರಸ್ತರಿಗೆ ಮತ್ತು ಅವರ ಕುಟುಂಬದವರಿಗೆ 7 ದಿನಗಳೊಳಗೆ ಪರಿಹಾರ ಧನವನ್ನು ನೀಡಲಾಗುವುದು, ಸಂತ್ರಸ್ತರ ಮತ್ತು ಸಾಕ್ಷಿದಾರರ ಹಕ್ಕುಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ. ದೌರ್ಜನ್ಯ ನಡೆದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದೂರು ದಾಖಲಿಸಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ, ದೌರ್ಜನ್ಯ ನಡೆದ ಸ್ಥಳಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿಯನ್ನು ಕಾಪಾಡಲಾಗುವುದು, ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗೆ ಕಿರುಕುಳ ಮತ್ತು ಬೆದರಿಕೆ ಹಾಕುವುದರಿಂದ ರಕ್ಷಣೆ ನೀಡಲಾಗುತ್ತದೆ, ಒಟ್ಟಾರೆ ದೇಶದ ಕಾನೂನುಗಳನ್ನು ಅರಿತು ಜೀವಿಸುವುದು ಒಳಿತು, ಗ್ರಾಮೀಣ ಪ್ರದೇಶದಲ್ಲಿ ದಲಿತ ದೌರ್ಜನ್ಯ ಪ್ರಕರಣಗಳ ಬಗ್ಗೆ ಅರಿವು ಮೂಡಿಸಬೇಕು, ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶಿವಮೂರ್ತಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ದೇಶದ ಕಾನೂನು ತೀರ ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ಈ ರೀತಿಯ ದೌರ್ಜನ್ಯ ಪ್ರಕರಣಗಳು ಹೆಚ್ಚು ಘಟಿಸದಂತೆ ಸಾರ್ವಜನಿಕರು ಎಚ್ಚರಿಕೆಯನ್ನು ವಹಿಸಬೇಕು. ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲೆಡೆ ಅರಿವು ಮೂಡಿಸುವ ಉದ್ದೇಶದಿಂದ ನಗರದ ತಾಲ್ಲೂಕು ಕಚೇರಿ ಮುಂಭಾಗ ಹಾಗೂ ಬಸವೇಶ್ವರವೃತ್ತ, ಅಂಬೇಡ್ಕರ್ ವೃತ್ತ, ಹಾಸನ ರಸ್ತೆಯ ಗ್ರಂಥಾಲಯ ಸಮೀಪ ಸೇರಿದಂತೆ ತಾಲ್ಲೂಕಿನ ಮುದುಡಿ, ಗಂಡಸಿ, ಗಂಡಸಿ ಹ್ಯಾಂಡ್ ಪೋಸ್ಟ್, ಬಾಗೇಶಪುರ, ಹಾರನಹಳ್ಳಿ ಕರಗುಂದ, ಗೇರುಮರ ವೃತ್ತ, ಉಂಡಿಗನಾಳು, ಕಣಕಟ್ಟೆ ಬಂದೂರು,, ಜಾವಗಲ್, ಹಿರಿಯೂರು, ಬಾಣಾವರ, ಕಲ್ಲುಸಾದರಹಳ್ಳಿ, ಕಿತ್ತನಕೆರೆ, ಮಾಡಾಳು, ದೊಡ್ಡ ಮೇಟಿಕುರ್ಕೆ, ಜೆ ಸಿ ಪುರ, ಅಗ್ಗುಂದ ಸೇರಿದಂತೆ ಒಟ್ಟು 20 ಗ್ರಾಮಗಳಲ್ಲಿ ಅದರಲ್ಲೂ ವಿಶೇಷವಾಗಿ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ಸಂಭವಿಸಿರುವ ಗ್ರಾಮಗಳಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯ ಅರಿವು ಮೂಡಿಸುವ ಬೀದಿ ನಾಟಕವನ್ನು ಆಯೋಜಿಸಲಾಗುತ್ತಿದೆ, ಜಾತಿ ನಿರ್ಬಂಧ ಇಲ್ಲದೆ ಎಲ್ಲರೂ ಈ ಕಾನೂನಿನ ಅರಿವು ಮೂಡಿಸಿಕೊಳ್ಳಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ಶಿವಪ್ರಸಾದ್, ಶಿವಶಂಕರ್‌ ಸಿದ್ದರಹಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸತೀಶ್, ಬೀದಿ ನಾಟಕ ನಡೆಸಿಕೊಡುವ ಕಲಾವಿದರ ತಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು.