ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಹಣವನ್ನು ದುರ್ಬಳಿಸಿಕೊಂಡು ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳದೆ ೨೫ ತಿಂಗಳಿಂದ ದಲಿತ ಅಭಿವೃದ್ಧಿಗೆ ಎಳ್ಳು ನೀರು ಬಿಟ್ಟಿದೆ ಎಂದು ಮಾಜಿ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದರು. ನಗರದ ಕೆ.ಎಸ್.ಆರ್,ಟಿ.ಸಿ. ಬಸ್ ನಿಲ್ದಾಣದ ವೃತ್ತದಲ್ಲಿ ಬಿಜೆಪಿ ಹಾಗೂ ಜೈ ಭೀಮ್ ಸಂಘಟನೆಯು ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತದ ವಿರುದ್ದ ಪ್ರತಿಭಟನೆಯ ಬಹಿರಂಗ ಸಭೆಯಲ್ಲಿ ಮಾತನಾಡಿ, ದಲಿತರಿಗೆ ಮೀಸಲಿಟ್ಟ ಹಣದಲ್ಲಿ ಒಟ್ಟು ೧೧,೧೪೪ ಸಾವಿರ ಕೋಟಿ ರು.ಗಳನ್ನು ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.ಇತ್ತೀಚೆಗೆ ₹೩೮೨ ಕೋಟಿ ಬಳಕೆ
ಕಳೆದ ೧೫ ದಿನಗಳ ಹಿಂದೆಯಷ್ಟೆ ೩೮೨ ಕೋಟಿ ರೂ ಕಬಳಿಸಲಾಗಿದೆ. ಗಂಗಕಲ್ಯಾಣ, ಆಶ್ರಯ, ರಸ್ತೆ ಅಭಿವೃದ್ದಿ, ನೀರಾವರಿ ಯೋಜನೆಗಳು, ಭೂ ಒಡೆತನ ಸೇರಿದಂತೆ ವಿವಿಧ ಯೋಜನೆಗಳು ಎಲ್ಲಿ ಹೋದವು, ಭಾಗ್ಯಗಳು ಎಲ್ಲಿ ಮರೆಯದವು ಎಂದು ಪ್ರಶ್ನಿಸಿದ ಅವರು ಕಾಂಗ್ರೇಸ್ ಶಾಸಕರುಗಳೇ ತಮ್ಮ ಕ್ಷೇತ್ರಗಳಿಗೆ ಯಾವೂದೇ ಅಭಿವೃದ್ದಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ ಎಂದು ಹೇಳಿದರು.ಮಾ.೭ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ಯಾವುದೇ ಕಾರಣಕ್ಕೂ ದಲಿತರ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ಬಳಕೆ ಮಾಡುವುದಿಲ್ಲ ಎಂದು ಘೋಷಿಸುವಂತಾಗಬೇಕು ಇದು ಬಿಜೆಪಿ ಮಾತ್ರವಲ್ಲ ದಲಿತರ ಸಂಘಟನೆಗಳ ಎಚ್ಚರಿಕೆಯ ಪ್ರತಿಭಟನೆಯಾಗಿದೆ ಎಂದರು. ದಲಿತರ ಹಣ ದುರ್ಬಳಕೆ
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ದಲಿತರ ಅಭಿವೃದ್ದಿಯ ೩೯ ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ದುರ್ಬಳಿಸಿಕೊಂಡಿದ್ದು ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿಲ್ಲ. ಕನಿಷ್ಟ ಪಕ್ಷ ರಸ್ತೆಗಳಿಗೆ ಡಾಂಬರೀಕರಣ ಮಾಡಲಿಲ್ಲ, ಶಾಸಕರ ಕ್ಷೇತ್ರದ ಅಭಿವೃದ್ದಿಗಳಿಗೆ ಅನುದಾನ ಬಿಡುಗಡೆ ಮಾಡೆಲಿಲ್ಲ. ದಲಿತ ಸಮುದಾಯದ ಹಿರಿಯ ಸಚಿವರಾದ ಮಹಾದೇವಪ್ಪ ಹಾಗೂ ಡಾ.ಜಿ.ಪರಮೇಶ್ ಅವರುಗಳು ಸಹ ದಲಿತರ ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ದಲಿತರ ಅಭಿವೃದ್ದಿಯ ಅನುದಾನಗಳನ್ನು ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿರುವುದು ಜನಜನಿತವಾಗಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ದಿ ಕಡೆಗಣಿಸಿ ವಂಚಿಸಲಾಗಿದೆ. ದಲಿತರನ್ನು ಮುಂದಿಟ್ಟು ಆಡಳಿತ ಚುಕ್ಕಾಣಿ ಹಿಡಿದು ದಲಿತರ ಬೆನ್ನಿಗೆ ಚೂರಿ ಹಾಕುವಂತೆ ಅಭಿವೃದ್ದಿಯ ಹಣವನ್ನು ಪಕ್ಷದ ಗ್ಯಾರಂಟಿಗಳ ಆಶ್ವಾಸನೆಗೆ ದುರ್‍ಬಳಿಸಿಕೊಳ್ಳುವ ಮೂಲಕ ಬಹಿರಂಗವಾಗಿ ವಂಚಿಸಿದೆ ಎಂದು ಕಿಡಿ ಕಾರಿದರು.ವಿವಿಧ ಸಂಘಟನೆಗಳ ಮೆರವಣಿಗೆ
ನಗರದ ನಚೆಕೇತನ ನಿಲಯದ ಅವರಣದಲ್ಲಿ ಬಿಜೆಪಿ ವಿವಿಧ ಘಟಕಗಳು ಸಂಘಟಿತರಾದರು. ಇವರೊಂದಿಗೆ ಜೈ.ಭೀಮ್ ಸಂಘಟನೆ ಹಾಗೂ ಇತರೆ ದಲಿತ ಸಂಭಟನೆಗಳು ಸೇರ್ಪಡೆಗೊಂಡು ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ಮಾಲೆ ಅರ್ಪಿಸುವ ಮೂಲಕ ಮೆರವಣಿಗೆ ಚಾಲನೆ ನೀಡಿದರು.ಪ್ರತಿಭಟನಾಕಾರರು ಕಾಂಗ್ರೆಸ್ ಪಕ್ಷದ ವಿರುದ್ದ ಘೋಷಣೆಗಳು ಕೂಗುತ್ತಾ ಮೆಕ್ಕೆ ವೃತ್ತ, ಅಮ್ಮವಾರಿಪೇಟೆ ವೃತ್ತ, ಎಂ.ಬಿ.ರಸ್ತೆ ಮೂಲಕ ಕೆ.ಎಸ್.ಆರ್.ಟಿ.ಸಿ. ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ವಿವಿಧ ಬೇಡಿಕೆ ಹಕ್ಕೋತ್ತಾಯದ ಮನವಿಪತ್ರ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿಪತ್ರ ಸಲ್ಲಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಶಾಸಕರಾದ ವೆಂಕಟಮುನಿಯಪ್ಪ, ನಂದೀಶ್ ರೆಡ್ಡಿ, ಮಾಜಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಪಂ ಮಾಜಿ ಸದಸ್ಯ ಮಹೇಶ್, ಮುಖಂಡರಾದ ವೆಂಕಟಾಚಲಪತಿ, ಹೂವಳ್ಳಿ ಪ್ರಕಾಶ್, ಎಸ್.ಬಿ.ಮುನಿವೆಂಕಟಪ್ಪ, ತಲಗುಂದ ನರಸಿಂಹರಾಜು, ಸಿ.ಡಿ.ರಾಮಚಂದ್ರ, ತಿಮ್ಮರಾಯಪ್ಪ, ಶಿಳ್ಳೆಂಗೇರಿ ಮಹೇಶ್, ಕೆಂಬೋಡಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.