ಅಮಿತ್‌ ಶಾ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

| Published : Jan 09 2025, 12:47 AM IST

ಸಾರಾಂಶ

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ ಹಾಸನದ ಬೂವನಹಳ್ಳಿ ಬೈಪಾಸ್ ಬಳಿ ಬುಧವಾರ ವಿವಿಧ ದಲಿತ ಪರ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿದ ಘಟನೆ ನಡೆಯಿತು. ಸಂವಿಧಾನದ ಆಧಾರದ ಮೇಲೆ ಸಚಿವರಾಗಿರುವ ಅಮಿತ್‌ ಶಾ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ ಹಾಸನದ ಬೂವನಹಳ್ಳಿ ಬೈಪಾಸ್ ಬಳಿ ಬುಧವಾರ ವಿವಿಧ ದಲಿತ ಪರ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿದ ಘಟನೆ ನಡೆಯಿತು. ಪ್ರತಿಭಟನೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸಬೇಕು ಎಂದು ಆಗ್ರಹಿಸಿ ಕೇಂದ್ರ ಬಿಜೆಪಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗುವ ಮೂಲಕ ಅಮಿತ್ ಶಾ ರಾಜೀನಾಮೆಗೆ ಪ್ರತಿಭಟನಾಕಾರರು ಆಗ್ರಹಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ನಕ್ಸಲರ ಬಂಧಿಸಿ ಇದೇ ಹೆದ್ದಾರಿಯಲ್ಲಿ ಪೊಲೀಸ್ ವಾಹನ ಹೋಗಬೇಕಿದ್ದ ಕಾರಣ ಹತ್ತು ನಿಮಿಷ ಮೊದಲೇ ಪ್ರತಿಭಟನಾಕಾರರನ್ನು ಬಂಧಿಸಿ, ಪ್ರತಿಭಟನೆ ತೆರವು ಮಾಡಿಸಿದರು. ರಸ್ತೆ ತಡೆಗೂ ಮುನ್ನ ಬಹಿರಂಗ ಸಭೆ ನಡೆಸಿ ಮಾತನಾಡಿದ ಸಿಐಟಿಯು ಮುಖಂಡ ಧರ್ಮೇಶ್ ಹಾಗೂ ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರ ಬಗೆ ಸಂಸತ್‌ನಲ್ಲಿ ವ್ಯಂಗ್ಯವಾಗಿ ಮಾತನಾಡುವ ಜೊತೆಗೆ "ಅಂಬೇಡ್ಕರ್ ಬಗ್ಗೆ ಮಾತನಾಡುವ ಬದಲು ದೇವರ ನಾಮ ಜಪ ಮಾಡಿದ್ದರೆ ಮೋಕ್ಷ ಸಿಗುತ್ತಿತ್ತು " ಎಂಬ ಮಾತನ್ನು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಶಾ ಅಪಮಾನ ಮಾಡಿದ್ದಾರೆ. ಅವರ ಸಂವಿಧಾನದ ಆಧಾರದ ಮೇಲೆ ಸಚಿವರಾಗಿರುವ ಅಮಿತ್‌ ಶಾ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್ ಎಂಬುದು ಒಂದು ವಿಚಾರ, ಅವರ ಬಗ್ಗೆ ನಾಲಿಗೆ ಹರಿಬಿಡುವ ಮುನ್ನ ಎಚ್ಚರಿಕೆ ಇರಬೇಕು. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಹಾಸನ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು. ಕನಿಷ್ಠ ತಾವು ಹೇಳಿದ ಮಾತಿಗೆ ಅಮಿತ್ ಶಾ ಅವರು ಕ್ಷಮೆ ಕೇಳುವ ಸೌಜನ್ಯವನ್ನು ತೋರಿಸಿಲ್ಲ. ಅವರ ಉದ್ಧಟತನಕ್ಕೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ತಮ್ಮ ಹೋರಾಟದ ಮೂಲಕವೇ ಉತ್ತರ ನೀಡಲಿವೆ. ಅವರು ತಮ್ಮ ಸ್ಥಾನದಲ್ಲಿ ಮುಂದುವರಿದರೆ ಸಂವಿಧಾನಕ್ಕೆ ವಿರುದ್ಧವಾದ ನಡವಳಿಕೆಗಳನ್ನು ಮುಂದುವರಿಸುತ್ತಲೇ ಇರುತ್ತಾರೆ. ಆದುದರಿಂದ ಅವರಿಗೆ ತಕ್ಕ ಪಾಠ ಕಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶಾ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ ಅವರ ಪರವಾಗಿಯೇ ಮಾತನಾಡುವ ಮೂಲಕ ಸಂವಿಧಾನದ ಆಶಯಗಳಿಗೆ ಅಪಚಾರ ಮಾಡುವ ಕೆಲಸ ಮಾಡಿದ್ದಾರೆ. ಇದು ಸಂವಿಧಾನದ ಬಗ್ಗೆ ಬಿಜೆಪಿ ಸರ್ಕಾರದ ನಿಲುವನ್ನು ಸೂಚಿಸುತ್ತದೆ. ಈ ಬಗ್ಗೆ ಈಗಾಗಲೇ ದೇಶದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೂ ಈವರೆಗೆ ಶಾ ವಿರುದ್ಧ ಕ್ರಮ ಜರುಗಿಸದೆ ಇರುವುದು ಬಿಜೆಪಿಯ ಸಂವಿಧಾನ ವಿರೋಧಿ ನೀತಿಯನ್ನು ಸೂಚಿಸುತ್ತದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡದ ಎಚ್.ಕೆ ಸಂದೇಶ್, ಸಿಐಟಿಯು ಧರ್ಮೇಶ್, ಜಗದೀಶ್, ಎಂ.ಸೋಮಶೇಖರ್, ದಂಡೋರ ವಿಜಯ್ ಕುಮಾರ್, ಅಂಬುಗ ಮಲ್ಲೇಶ್, ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಮಲ್ಲಿಗೆವಾಳು ದೇವಪ್ಪ, ಅಬ್ದುಲ್ ಸಮದ್, ದೇವರಾಜ್, ಈರೇಶ್ ಈರೆಹಳ್ಳಿ, ಕೃಷ್ಣದಾಸ್, ವಿಠಲ್, ರಾಜೇಶ್, ಪೃಥ್ವಿ, ನವೀನ್, ಅರವಿಂದ್, ಇರ್ಷಾದ್, ಕುಮಾರಸ್ವಾಮಿ, ಇತರರು ಇದ್ದರು.