ಸಾರಾಂಶ
ಒಂದೇ ಹಂತದಲ್ಲಿ ಸತತ 29 ದಿನಗಳ ಕಾಲ ಪುರುಷೋತ್ತಮನ ಪ್ರಸಂಗ ಸಿನೆಮಾ ಚಿತ್ರೀಕರಣ ನಡೆದಿದೆ. ದುಬೈನಲ್ಲಿ 10 ದಿನ ಸೇರಿದಂತೆ ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ ಎಂದು ಚಿತ್ರದ ನಿರ್ದೇಶಕ ದೇವದಾಸ್ ಕಾಪಿಕಾಡು ಮಾಹಿತಿ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಷ್ಟ್ರಕೂಟ ಪಿಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ನಿರ್ಮಾಣದಲ್ಲಿ ಡಾ. ದೇವದಾಸ್ ಕಾಪಿಕಾಡ್ ನಿರ್ದೇಶನದ ನೂತನ ಕನ್ನಡ ಚಲನಚಿತ್ರ ‘ಪುರುಷೋತ್ತಮನ ಪ್ರಸಂಗ’ ಸಿನೆಮಾ ಮಾ.1ರಂದು ರಾಜ್ಯಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ತುಳು ಚಿತ್ರಗಳನ್ನೇ ಮಾಡುತ್ತ ಬಂದಿರುವ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದ ಮೊದಲ ಕನ್ನಡ ಚಿತ್ರ ಇದು.ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ದೇವದಾಸ್ ಕಾಪಿಕಾಡ್, ಒಂದೇ ಹಂತದಲ್ಲಿ ಸತತ 29 ದಿನಗಳ ಕಾಲ ಪುರುಷೋತ್ತಮನ ಪ್ರಸಂಗ ಸಿನೆಮಾ ಚಿತ್ರೀಕರಣ ನಡೆದಿದೆ. ದುಬೈನಲ್ಲಿ 10 ದಿನ ಸೇರಿದಂತೆ ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ನನ್ನ ಎಲ್ಲ ತುಳು ಚಿತ್ರಗಳಿಗಿಂತ ಈ ಚಿತ್ರ ವಿಭಿನ್ನವಾಗಿದೆ ಎಂದು ಹೇಳಿದರು.ನಿರ್ಮಾಪಕ ರವಿ ಕುಮಾರ್ ಮಾತನಾಡಿ, ಉತ್ತಮ ಕಥಾ ಹಂದರವನ್ನು ಒಳಗೊಂಡಿರುವ ಈ ಸಿನೆಮಾದ ಟ್ರೈಲರ್ ವೀಕ್ಷಕರ ಮೆಚ್ಚುಗೆ ಗಳಿಸಿದೆ. ಹಾಡುಗಳನ್ನು ಜಯಂತ ಕಾಯ್ಕಿಣಿ, ದೊಡ್ಡರಂಗೇಗೌಡ, ದೇವದಾಸ್ ಕಾಪಿಕಾಡ್ ರಚಿಸಿದ್ದಾರೆ ಎಂದು ತಿಳಿಸಿದರು.ಈ ಸಿನೆಮಾದ ಮೂಲಕ ಅಜಯ್ ಎಂಬ ನಟ ಹಾಗೂ ರಿಷಿಕಾ ನಾಯ್ಕ್ ಮತ್ತು ದೀಪಿಕಾ ಎಂಬರನ್ನು ಈ ಚಿತ್ರದ ಮೂಲಕ ಪರಿಚಯಿಸಲಾಗಿದೆ. ತುಳು ಹಾಸ್ಯ ದಿಗ್ಗಜರನ್ನೊಳಗೊಂಡ ತಾರಾಗಣದಲ್ಲಿ ಹೊಸಬರಿಗೂ ಅವಕಾಶ ನೀಡಲಾಗಿದೆ ಎಂದರು.ನಾಯಕ ನಟ ಅಜಯ್ ಮಾತನಾಡಿ, ನಾನು ಟೊರೆಂಟೊ ಫಿಲ್ಮ್ ಸ್ಕೂಲ್‌ನಲ್ಲಿ ಅಧ್ಯಯನ ನಡೆಸಿ ವಾಪಸಾಗಿದ್ದು, ಇದು ನನ್ನ ಮೊದಲ ಚಿತ್ರ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪುರುಷೋತ್ತಮ ಇರುತ್ತಾನೆ. ಅವರ ಸಾಧನೆಯ ಹಾದಿಯಲ್ಲಿ ಎದುರಾಗುವ ಪ್ರಸಂಗಗಳನ್ನು ಸೇರಿಸಿ ಚಿತ್ರ ರೂಪಿಸಲಾಗಿದೆ ಎಂದರು.ನಿರ್ದೇಶನದೊಂದಿಗೆ ಕಾಪಿಕಾಡ್ ಅವರು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ. ನಾಯಕಿ ದೀಪಿಕಾ, ಅರ್ಜುನ್ ಕಾಪಿಕಾಡ್, ಸಹ ನಿರ್ಮಾಪಕ ಸಂಶುದ್ದೀನ್ ಇದ್ದರು.