ಕನ್ನಡಪ್ರಭ ವಾರ್ತೆ ಬೇಲೂರುಸೋಮವಾರ ನಡೆದ ದ್ವಿತೀಯ ಪಿಯುಸಿ ಕಂಪ್ಯೂಟರ್ ಸೈನ್ಸ್ ಅಂತಿಮ ಪರೀಕ್ಷೆ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ನಡೆದ ತಪ್ಪಿನಿಂದ ಆರು ಮಂದಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವ ಘಟನೆ ಬೆಳಕಿಗೆ ಬಂದಿದೆ.ಪಟ್ಟಣದ ಬಿಕ್ಕೋಡು ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೂಂ ನಂಬರ್ ೬ರಲ್ಲಿ ೬ ವಿದ್ಯಾರ್ಥಿನಿಯರಿಗೆ ಪ್ರಶ್ನೆ ಪತ್ರಿಕೆ ವಿತರಿಸುವ ಸಂದ್ಯಾ ಎಂಬುವವರು ರಿಪೀಟರ್ ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆಪತ್ರಿಕೆಯನ್ನು ಈ ವರ್ಷದ ವಿದ್ಯಾರ್ಥಿನಿಯರಿಗೆ ನೀಡಿ ಗೊಂದಲ ಸೃಷ್ಟಿಸಿರುವುದಲ್ಲದೆ ನಂತರ ಪರೀಕ್ಷೆ ಸಮಯ ಮುಗಿದ ನಂತರ ಪ್ರಶ್ನೆ ಪತ್ರಿಕೆ ಅದಲು ಬದಲಾಗಿರುವ ಘಟನೆ ಮಾಹಿತಿ ಸಿಕ್ಕಿದ ತಕ್ಷಣ ಪ್ರಾಂಶುಪಾಲರಿಗೆ ಮತ್ತು ಮೇಲ್ವಿಚಾರಕರಿಗೆ ವಿಷಯವನ್ನು ತಿಳಿಸಿದ್ದಾರೆ. ಪರೀಕ್ಷೆ ಸಮಯ ಮುಗಿದ ನಂತರ ಹೊಸ ಪ್ರಶ್ನೆಪತ್ರಿಕೆ ನೀಡಿ ಕೇವಲ ಅರ್ಧ ಗಂಟೆ ಸಮಯದಲ್ಲಿ ಬರೆಯುವಂತೆ ಸೂಚಿಸಿ ವಿದ್ಯಾರ್ಥಿಗಳಿಗೆ ಆತಂಕ ಉಂಟು ಮಾಡಿದ್ದಾರೆ.ಈ ಸಂದರ್ಭದಲ್ಲಿ ಕಣ್ಣೀರು ಹಾಕಿ ಮಾತನಾಡಿದ ವಿದ್ಯಾರ್ಥಿಗಳು ನಾವು ಬಡ ಕುಟುಂಬದ ಮಕ್ಕಳಾಗಿದ್ದರೂ ನಮ್ಮ ಪೋಷಕರು ಕಷ್ಟಪಟ್ಟು ದುಡಿದು ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಆದರೆ ಪ್ರಶ್ನೆ ಪತ್ರಿಕೆ ವಿತರಿಸುವಾಗ ಪುನರಾವರ್ತಿತ ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆ ಪತ್ರಿಕೆಯನ್ನು ಹೊಸದಾಗಿ ಬರೆಯುತ್ತಿದ್ದ ನಮಗೂ ನೀಡಿದ್ದಾರೆ. ಪ್ರಶ್ನೆ ಪತ್ರಿಕೆಯನ್ನು ಅದಲು ಬದಲು ಮಾಡಿ ನಮ್ಮ ಭವಿಷ್ಯಕ್ಕೆ ಮೊದಲ ಪೆಟ್ಟು ನೀಡಿದ್ದಾರೆ. ನಾವು ಕೇಳಲು ಹೋದ ಸಂದರ್ಭದಲ್ಲಿ ಇಲ್ಲಿಯ ಪ್ರಾಂಶುಪಾಲರು ಮುಂದೆ ೨೦ ದಿನಗಳ ಬಳಿಕ ಮತ್ತೆ ಪರೀಕ್ಷೆ ಬರೆಯಲು ಅವಕಾಶವಿದ್ದು ಆವಾಗ ನೀವು ಮತ್ತೆ ಬರೆಯಬಹುದು ಎಂದು ಉಡಾಫೆ ಉತ್ತರ ನೀಡಿದ್ದಾರೆ. ನಾವು ಪತ್ರಕರ್ತರ ಬಳಿ ಹೋಗುತ್ತೇವೆ ಎಂದಾಗ ಅರ್ಧ ಗಂಟೆ ಕಾಲಾವಲಾಶ ನೀಡಿ ಹೆಚ್ಚುವರಿ ಸಮಯ ನೀಡಿದರು. ಆದರೆ ಮೂರು ಗಂಟೆ ಅವಧಿಯ ಪರೀಕ್ಷೆ ಕೇವಲ ಅರ್ಧ ಗಂಟೆಗೆ ಹೇಗೆ ಬರೆಯಲು ಸಾಧ್ಯ ಎಂದು ಕಣ್ಣೀರು ಹಾಕಿದರು.ಈ ಬಗ್ಗೆ ತಾವು ವ್ಯಾಸಂಗ ಮಾಡುತ್ತಿರುವ ವಿದ್ಯಾಸಂಸ್ಥೆಯ ಪ್ರಾಂಶುಪಾಲರಿಗೆ ಮಾಹಿತಿ ತಿಳಿಸಿದೆವು. ಆದರೆ ಅಲ್ಲಿಯ ಪ್ರಾಂಶುಪಾಲರಾದ ವೀಣಾ ಹಾಗು ಸಿಬ್ಬಂದಿ ನಮ್ಮ ಸಮಸ್ಯೆ ಆಲಿಸದೆ ಉಡಾಫೆಯಿಂದ ವರ್ತಿಸಿ ಹೋಗಿದ್ದಾರೆ ಮುಂದೆ ನಮ್ಮ ಭವಿಷ್ಯದ ಕಥೆ ಏನು ಎಂದು ತಮ್ಮ ಅಳಲು ತೋಡಿಕೊಂಡರು. ಸರ್ವೋದಯ ಕಾಲೇಜಿನ ಪ್ರಾಂಶುಪಾಲ ಮಲ್ಲೇಶಗೌಡ ಅವರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮೇಲಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದಲ್ಲದೆ ಖಾಸಗಿ ವಿದ್ಯಾಸಂಸ್ಥೆ ಎಂದರೆ ಇವರಿಗೆ ಅಸಡ್ಡೆ, ಪರೀಕ್ಷೆಗೆ ಮೊದಲು ಪ್ರತಿ ಕಾಲೇಜಿನಿಂದ ಎಷ್ಟು ವಿದ್ಯಾರ್ಥಿಗಳು ಹಳೆಯ ಪಠ್ಯಕ್ರಮ ಹಾಗೂ ಹೊಸ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಲಾಗುತ್ತದೆ. ಆದರೆ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆ ಹಂಚುವ ವೇಳೆ ಜವಾಬ್ದಾರಿಯಿಲ್ಲದೆ ಈ ರೀತಿ ಗೊಂದಲ ಸೃಷ್ಟಿಸಿ, ಎಲ್ಲರೂ ಹಳೆಯ ಪಠ್ಯಕ್ರಮದ ವಿದ್ಯಾರ್ಥಿಗಳೇ ಎಂದು ಊಹಿಸಿ ಹೊಸ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಹಳೆಯ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದೆ ಎಂದು ಆರೋಪಿಸಿದರು.ಒಂದೇ ಪರೀಕ್ಷಾ ಕೊಠಡಿಯಲ್ಲಿ ಜೂನಿಯರ್ ಕಾಲೇಜಿನ ನಾಲ್ವರು ಹಾಗೂ ಸರ್ವೋದಯ ಕಾಲೇಜಿನ ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಇವರಲ್ಲಿ ಕೆಲವರಿಗೆ ಹಳೆಯ ಪಠ್ಯಕ್ರಮದ ಪ್ರಶ್ನೆಪತ್ರಿಕೆ ನೀಡಲಾಗಿದೆ. ಹಳೆಯ ಮತ್ತು ಹೊಸ ಪಠ್ಯಕ್ರಮಗಳಲ್ಲಿ ಕೆಲವು ಅಧ್ಯಾಯಗಳು ಒಂದೇ ರೀತಿಯಾಗಿದ್ದರಿಂದ ವಿದ್ಯಾರ್ಥಿಗಳು ಆರಂಭದಲ್ಲಿ ಇದು ಕಷ್ಟವಾದ ಪ್ರಶ್ನೆಪತ್ರಿಕೆ ಇರಬಹುದು ಎಂದುಕೊಂಡು ಮೂರು ಗಂಟೆಗಳ ಕಾಲ ಪರೀಕ್ಷೆ ಬರೆದಿದ್ದಾರೆ.ಪರೀಕ್ಷೆ ಮುಗಿದು ಹೊರಬಂದ ಬಳಿಕ ಇತರ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಯನ್ನು ಹೋಲಿಸಿ ನೋಡಿದಾಗ ಮಾತ್ರ ಅವರು ಬರೆದಿದ್ದು ತಪ್ಪಾದ ಪ್ರಶ್ನೆಪತ್ರಿಕೆ ಎಂದು ತಿಳಿದುಬಂದಿದೆ. ಇದರಿಂದ ವಿದ್ಯಾರ್ಥಿಗಳು ತೀವ್ರ ನಿರಾಶೆಗೊಂಡಿದ್ದಾರೆ. ಈ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ನಿರೀಕ್ಷಿಸಿದ್ದ ಮೆಚ್ಚಿನ ವಿದ್ಯಾರ್ಥಿಗಳಾಗಿದ್ದು, ಈ ಘಟನೆ ಅವರ ಭವಿಷ್ಯಕ್ಕೆ ದೊಡ್ಡ ಹೊಡೆತ ನೀಡಿದೆ.ನಂತರ ಮಾತನಾಡಿದ ಜೂನಿಯರ್ ಕಾಲೇಜು ಉಪನ್ಯಾಸಕಿ ಸುಹಾನ, ಅಧಿಕಾರಿಗಳು ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳನ್ನು ಮತ್ತೆ ಒಳಗೆ ಕರೆದು ಸರಿಯಾದ ಪ್ರಶ್ನೆಪತ್ರಿಕೆ ನೀಡಿ ಬರೆಯಲು ಅವಕಾಶ ನೀಡಿದರೂ ಕೇವಲ 45 ನಿಮಿಷಗಳ ಕಾಲಾವಕಾಶವನ್ನಷ್ಟೇ ನೀಡಿದ್ದಾರೆ. ಮೂರು ಗಂಟೆಗಳಲ್ಲಿ ಬರೆಯಬೇಕಾದ ಪರೀಕ್ಷೆಯನ್ನು ಅಷ್ಟು ಕಡಿಮೆ ಸಮಯದಲ್ಲಿ ಬರೆಯುವುದು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಖಾಸಗಿ ಕಾಲೇಜುಗಳಲ್ಲಿ ಕೆಲವೇ ವಿದ್ಯಾರ್ಥಿಗಳನ್ನು ಓದಿಸಿ ಉತ್ತಮ ಫಲಿತಾಂಶ ತರುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಈ ರೀತಿಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು 30 ಅಥವಾ 40 ಅಂಕಗಳಿಗೆ ಮಾತ್ರ ಸೀಮಿತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಈ ವಿಷಯದ ಬಗ್ಗೆ ಮೇಲ್ಮಟ್ಟದ ಅಧಿಕಾರಿಗಳಿಗೆ ದೂರು ನೀಡಲಾಗುವುದು. ತಪ್ಪು ಮಾಡುವುದು ಮಾನವ ಸಹಜವಾದರೂ, ಅದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾನಿಯಾಗಬಾರದು. ಅಗತ್ಯವಿದ್ದರೆ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಅಥವಾ ಬೇರೆ ನ್ಯಾಯಸಮ್ಮತ ಪರಿಹಾರ ನೀಡುವ ಬಗ್ಗೆ ಸರ್ಕಾರ ಹಾಗೂ ಶಿಕ್ಷಣ ಮಂಡಳಿ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಅವರು ಮನವಿ ಮಾಡಿದರು.ಈ ಘಟನೆ ಕುರಿತು ಮೇಲಧಿಕಾರಿಗಳು ತಕ್ಷಣ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಶಿಕ್ಷಕರು ಒತ್ತಾಯಿಸಿದರು.
ಪ್ರಶ್ನೆಪತ್ರಿಕೆ ಅದಲು ಬದಲಾಗಿ ವಿದ್ಯಾರ್ಥಿಗಳಿಗೆ ಅನ್ಯಾಯ
ಬಿಕ್ಕೋಡು ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೂಂ ನಂಬರ್ ೬ರಲ್ಲಿ ೬ ವಿದ್ಯಾರ್ಥಿನಿಯರಿಗೆ ಪ್ರಶ್ನೆ ಪತ್ರಿಕೆ ವಿತರಿಸುವ ಸಂದ್ಯಾ ಎಂಬುವವರು ರಿಪೀಟರ್ ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆಪತ್ರಿಕೆಯನ್ನು ಈ ವರ್ಷದ ವಿದ್ಯಾರ್ಥಿನಿಯರಿಗೆ ನೀಡಿ ಗೊಂದಲ ಸೃಷ್ಟಿಸಿರುವುದಲ್ಲದೆ ನಂತರ ಪರೀಕ್ಷೆ ಸಮಯ ಮುಗಿದ ನಂತರ ಪ್ರಶ್ನೆ ಪತ್ರಿಕೆ ಅದಲು ಬದಲಾಗಿರುವ ಘಟನೆ ಮಾಹಿತಿ ಸಿಕ್ಕಿದ ತಕ್ಷಣ ಪ್ರಾಂಶುಪಾಲರಿಗೆ ಮತ್ತು ಮೇಲ್ವಿಚಾರಕರಿಗೆ ವಿಷಯವನ್ನು ತಿಳಿಸಿದ್ದಾರೆ. ಪರೀಕ್ಷೆ ಸಮಯ ಮುಗಿದ ನಂತರ ಹೊಸ ಪ್ರಶ್ನೆಪತ್ರಿಕೆ ನೀಡಿ ಕೇವಲ ಅರ್ಧ ಗಂಟೆ ಸಮಯದಲ್ಲಿ ಬರೆಯುವಂತೆ ಸೂಚಿಸಿ ವಿದ್ಯಾರ್ಥಿಗಳಿಗೆ ಆತಂಕ ಉಂಟು ಮಾಡಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.