ಸಾರಾಂಶ
ಹೊರರಾಜ್ಯಗಳಿಂದ ಕೂಲಿ ಕೆಲಸಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಲಸಿಗರ ಮೇಲೆ ಸೂಕ್ತ ನಿಗಾವಹಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೇಲೂರು ತಾಲೂಕು ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ವಿ ಎಸ್ ಭೋಜೇಗೌಡ ಅವರ ನೇತೃತ್ವದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಅವರಿಗೆ ಮನವಿ ಸಲ್ಲಿಸಲಾಯಿತು. ತಮ್ಮ ಕುಲಕಸುಬನ್ನೇ ನಂಬಿಕೊಂಡು ಬಂದಿದ್ದ ಸ್ಥಳೀಯ ಕಾರ್ಮಿಕರು ಇಂದು ಕೆಲಸವಿಲ್ಲದೆ ಪರದಾಡುವಂತಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ಹೊರರಾಜ್ಯಗಳಿಂದ ಕೂಲಿ ಕೆಲಸಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಲಸಿಗರ ಮೇಲೆ ಸೂಕ್ತ ನಿಗಾವಹಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೇಲೂರು ತಾಲೂಕು ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ವಿ ಎಸ್ ಭೋಜೇಗೌಡ ಅವರ ನೇತೃತ್ವದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಅವರಿಗೆ ಮನವಿ ಸಲ್ಲಿಸಲಾಯಿತು.ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷರಾದ ವಿಎಸ್ ಭೋಜೇಗೌಡ ಹಾಗೂ ಕಾರ್ಯಕರ್ತರು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿ, ತಾಲೂಕಿನಲ್ಲಿ ಕಾಫಿ ತೋಟಗಳ ಕೆಲಸಕ್ಕಾಗಿ ಅಸ್ಸಾಂ ಹಾಗೂ ಬಾಂಗ್ಲಾ ವಲಸಿಗರು ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಕಾಫಿ ತೋಟ, ಕಟ್ಟಡ, ಗಾರೆ ಇನ್ನಿತರ ಕೆಲಸಗಳಿಗೆ ತಾಲೂಕಿನ ಬಿಕ್ಕೋಡು, ಅರೇಹಳ್ಳಿ, ಗೆಂಡೇಹಳ್ಳಿ, ಚೀಕನಹಳ್ಳಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಬೀಡು ಬಿಟ್ಟಿದ್ದಾರೆ. ಆದರೆ ಅವರ ಚಲನವಲನಗಳ ಬಗ್ಗೆ ತೋಟದ ಮಾಲೀಕರಾಗಲಿ ಅಥವಾ ಗುತ್ತಿಗೆದಾರರು ಗಮನ ಹರಿಸುತ್ತಿಲ್ಲ. ಅಸ್ಸಾಂ, ಬಾಂಗ್ಲಾ ವಲಸೆ ಕೆಲಸಗಾರರಿಂದ ಸ್ಥಳೀಯ ಕಾರ್ಮಿಕರಿಗೆ ಪೆಟ್ಟು ಬಿದ್ದಂತಾಗಿದೆ. ತಮ್ಮ ಕುಲಕಸುಬನ್ನೇ ನಂಬಿಕೊಂಡು ಬಂದಿದ್ದ ಸ್ಥಳೀಯ ಕಾರ್ಮಿಕರು ಇಂದು ಕೆಲಸವಿಲ್ಲದೆ ಪರದಾಡುವಂತಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೆಲವು ಒಂಟಿ ಮನೆಗಳಲ್ಲಿ ಕಳ್ಳತನ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹಲವಾರು ರೀತಿಯ ಪ್ರಕರಣಗಳು ಹೆಚ್ಚಿದ್ದು ಇದರಿಂದ ಪೊಲೀಸ್ ಇಲಾಖೆಯವರಿಗೂ ತಲೆಬಿಸಿ ತಂದಿದೆ. ಶುಂಠಿ ವಾಷಿಂಗ್ ಪಾಯಿಂಟ್ ಹಾಗೂ ತೋಟದ ಮಾಲೀಕರನ್ನು ಕರೆಸಿ ಮಾಹಿತಿ ಕಲೆಹಾಕಿ ವಲಸಿಗರನ್ನು ಕೂಡಲೇ ಅವರ ರಾಜ್ಯಗಳಿಗೆ ಕಳಿಸಬೇಕು. ಮುಂದೆ ಇವರಿಂದ ಯಾವುದೇ ರೀತಿಯ ತೊಂದರೆಯಾದರೆ ಮಾಲೀಕರನ್ನೆ ನೇರ ಹೊಣೆಗಾರರನ್ನಾಗಿ ಮಾಡಬೇಕು. ಹೊರ ರಾಜ್ಯದಿಂದ ಗುಂಪು ಗುಂಪಾಗಿ ಬರುವ ವಲಸಿಗರು ಒಂದೇ ರೂಮಿನಲ್ಲಿ ಹತ್ತಕ್ಕೂ ಹೆಚ್ಚು ಮಂದಿ ವಾಸ ಮಾಡುತ್ತಿದ್ದಾರೆ. ಮುಂದಿನ ಅನಾಹುತವನ್ನು ಲೆಕ್ಕಿಸದೆ ಬಾಡಿಗೆ ಆಸೆಗೆ ಗ್ರಾಮಸ್ಥರು ತಮ್ಮ ಮನೆಗಳನ್ನೇ ಬಿಟ್ಟುಕೊಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಲಸೆ ಕಾರ್ಮಿಕರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಕರವೇ ವತಿಯಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಉಪಾಧ್ಯಕ್ಷ ಮಂಜು ಆಚಾರ್, ಯುವ ಘಟಕದ ತಾಲೂಕು ಅಧ್ಯಕ್ಷ ಸತೀಶ್, ಕಾರ್ಯದರ್ಶಿ ರಾಕೇಶ್, ಕುಮಾರ್, ತೀರ್ಥಕುಮಾರ್, ಲೋಕೇಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಸಿಪಿಐ ರೇವಣ್ಣ, ಜಗದೀಶ್ ಇದ್ದರು.