ಬಂಗಾರಪೇಟೆ ತಾಲೂಕಿನ ಲಕ್ಕೇನಹಳ್ಳಿ- ಕೆಜಿಎಫ್ ರಸ್ತೆ ಅಭಿವೃದ್ಧಿಗೆ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಮತ್ತು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಜಂಟಿಯಾಗಿ ಅನುದಾನ ನೀಡಿದ್ದಾರೆ. ಆದರೆ ಗುತ್ತಿಗೆದಾರರು ಅಲ್ಪಸ್ವಲ್ಪ ಚೆನ್ನಾಗಿದ್ದ ರಸ್ತೆಯನ್ನೂ ಕಿತ್ತು ಜಲ್ಲಿ ಹಾಕಿ ಡಾಂಬರು ಹಾಕದೆ ಹಾಗೇ ಬಿಟ್ಟಿದ್ದಾರೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಡಾಂಬರು ಕಿತ್ತು ಹೋದ ರಸ್ತೆಗೆ ಅಭಿವೃದ್ಧಿ ಹೆಸರಲ್ಲಿ ಜಲ್ಲಿ ಹಾಕಿ ತಿಂಗಳುಗಳೇ ಕಳೆದಿದ್ದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ತಾಲೂಕಿನ ಹಲವು ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಹಲವು ವರ್ಷಗಳಿಂದ ಹದಗೆಟ್ಟಿದ್ದ ರಸ್ತೆಗಳಿಗೆ ಡಾಂಬರು ಭಾಗ್ಯ ಲಭಿಸಿದೆ. ಇವುಗಳಲ್ಲಿ ಕೆಜಿಎಫ್‌ನ ಕಾಮಸಮುದ್ರ ಮಾರ್ಗದ ರಸ್ತೆಯೂ ಸೇರಿದೆ. ಕೆಜಿಎಫ್‌ನ ಮಾರಿಕುಪ್ಪಂ, ಬೋಡಗುರ್ಕಿ ಲಕ್ಕೇನಹಳ್ಳಿ ಮಾರ್ಗದ ರಸ್ತೆಗೆ ಡಾಂಬರು ಹಾಕಿ ಹಲವು ದಶಕಗಳೇ ಕಳೆದಿದ್ದವು. ಡಾಂಬರು ಕಿತ್ತು ಹೊಂಡಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತುಂಬಾ ಪ್ರಯಾಸ ಪಡಬೇಕಾಗಿತ್ತು.

ಇಬ್ಬರು ಶಾಸಕರ ಜಂಟಿ ಅನುದಾನ

ಈ ಮಾರ್ಗದ ರಸ್ತೆ ಅರಣ್ಯ ಪ್ರದೇಶದಲ್ಲಿ ಬರುವುದರಿಂದ ಕಾಡುಪ್ರಾಣಿಗಳ ಭಯದಲ್ಲಿ ಸವಾರರು ಸಂಚರಿಸಲು ಹಿಂದೇಟು ಹಾಕು ವಂತಾಗಿತ್ತು. ಈ ಕಾರಣದಿಂದಾಗಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಮತ್ತು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಜಂಟಿಯಾಗಿ ಅನುದಾನ ತಂದು ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದ್ದಾರೆ. ಆದರೆ ಗುತ್ತಿಗೆದಾರರು ಅಲ್ಪಸ್ವಲ್ಪ ಚೆನ್ನಾಗಿದ್ದ ರಸ್ತೆಯನ್ನೂ ಕಿತ್ತು ಜಲ್ಲಿ ಹಾಕಿ ಡಾಂಬರು ಹಾಕದೆ ಹಾಗೇ ಬಿಟ್ಟಿದ್ದಾರೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಪ್ರಯಾಣಿಸುವ ಸ್ಥಿತಿ ಉಂಟಾಗಿದೆ. ಜಲ್ಲಿ ಕಲ್ಲುಗಳ ಜತೆ ಹೆಚ್ಚಿನ ಪ್ರಮಾಣದಲ್ಲಿ ದೂಳು ಏಳುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸಲು ಸರ್ಕಸ್‌ ಮಾಡುವಂತಾಗಿದೆ.

ಗುತ್ತಿಗೆದಾರನ ನಿರ್ಲಕ್ಷ್ಯ:

ಈ ಕಾಮಗಾರಿ ಜತೆಗೆ ಬೂದಿಕೋಟೆ ಕಾಮ ಸಮುದ್ರ ಮಾರ್ಗದ ಗುಟ್ಟೂರು ಗ್ರಾಮದ ಬಳಿಗೆ ಕೆರೆಯ ಕಟ್ಟೆ ಮೇಲೆ ಡಾಂಬರಿಗೆ ಜಲ್ಲಿ ಹಾಕಲಾಗಿದೆ. ಜಲ್ಲಿ ಹಾಕಿ ಮೂಾರ್ನಾಲ್ಕು ತಿಂಗಳುಗಳೇ ಕಳೆದಿದ್ದರೂ, ಗುತ್ತಿಗೆದಾರರು ಡಾಂಬರು ಹಾಕಲು ಮುಂದಾಗಿಲ್ಲ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಪಕ್ಕದಲ್ಲೇ ಇರುವ ಕೆರೆಗೆ ಬೀಳುವ ಸಾಧ್ಯತೆ ಇದೆ. ಕೋಟ್ಯಂತರ ರು.ಗಳ ಅನುದಾನ ಬಿಡುಗಡೆ ಆಗಿದ್ದರೂ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದು, ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.