ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು

| Published : Jun 03 2024, 12:31 AM IST

ಸಾರಾಂಶ

ಕಷ್ಟಪಟ್ಟು ಓದಿ ಇಂದು ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳು‌ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ಸಮಾಜ ಸೇವೆ ಮಾಡಲು ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್. ಜಗದೀಶ್ ನೇತೃತ್ವದಲ್ಲಿ ನಿವೇದಿತ ನಗರದ ಎಸ್.ಆರ್. ಸುಬ್ಬರಾವ್ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ‌ ಅವರು ಮಾತನಾಡಿದರು.

ಕಷ್ಟಪಟ್ಟು ಓದಿ ಇಂದು ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳು‌ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ಸಮಾಜ ಸೇವೆ ಮಾಡಲು ಮುಂದಾಗಬೇಕು. ತಮ್ಮ ಅಭಿವೃದ್ಧಿಯ ಜತೆಗೆ ಸಮಾಜದ ಅಭಿವೃದ್ಧಿಗೆ ಮತ್ತು ದೇಶದ ಬೆಳವಣಿಗೆಗೂ ಸಹಕಾರ ನೀಡಬೇಕು ಎಂದರು.

ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್ ಗೌಡ ಮಾತನಾಡಿ, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ವೈದ್ಯ, ಕಲಾವಿದ, ವಕೀಲ, ಉತ್ತಮ ಅಧಿಕಾರಿ, ಎಂಜಿನಿಯರ್ ಆಗಬಹುದು. ಪಿಯುಸಿ ನಂತರ ಅನೇಕ ಅವಕಾಶ ಇದೆ. ಒಂದೇ ಕ್ಷೇತ್ರದಲ್ಲೇ ಸಾಧನೆ ಮಾಡಬೇಕು ಅಂತ ಇಲ್ಲ. ನಿಮ್ಮ ಮುಂದೆ ಅಪಾರ ಅವಕಾಶ ಇದ್ದು, ನಿಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ದೊಡ್ಡ ಮಟ್ಟದ ಸಾಧನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಸಿಇಟಿ ಬರೆದಿರುವ ವಿದ್ಯಾರ್ಥಿಗಳು ಎಂಜಿನಿಯರಿಂಗ್, ಮೆಡಿಕಲ್ ಸೀಟ್ ಸಿಗುತ್ತಾ, ಇಲ್ಲವಾ ಎಂದು ಆತಂಕಕ್ಕೆ ಒಳಗಾಗಬಾರದು. ಕಷ್ಟಪಟ್ಟು ಓದಿದ್ದರೆ ಕಂಡಿತಾ ಸೀಟು ಸಿಗುತ್ತದೆ. ಎಲ್ಲರಿಗೂ ಉಜ್ವಲ ಭವಿಷ್ಯ ಇದೆ ಎಂದರು.

ಯುವ ಜನತೆಯೇ ಭಾರತದ ದೊಡ್ಡ ಶಕ್ತಿ. ಮಾನವ ಸಂಪನ್ಮೂಲದಲ್ಲಿ ಶಕ್ತಿ ತುಂಬುವುದು ಯುವಜಬರೆ ಆಗಿದ್ದಾರೆ. ಭಾರತ ಅಭಿವೃದ್ಧಿ ಆಗುತ್ತಿರುವುದು ಶಿಕ್ಷಣದಿಂದ ಮಾತ್ರ ಅಲ್ಲ‌. ಇಲ್ಲಿ ಸಂಸ್ಕೃತಿಯಿಂದಲೂ. ನಮ್ಮ ಮಾನವ ಸಂಪನ್ಮೂಲದಿಂದಲೂ ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜಗದೀಶ್ ಅವರು ತಮ್ಮ ಬಡಾವಣೆಯಲ್ಲಿ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಮಕ್ಕಳಿಗೆ ಸನ್ಮಾನ ಮಾಡುತ್ತಿರುವುದು ಉತ್ತಮ‌ ಕೆಲಸವಾಗಿದೆ. ಇಂತಹ ಕೆಲಸವನ್ನು ಎಲ್ಲಾ ಜನ ಪ್ರತಿನಿಧಿಗಳು ಮಾಡಬೇಕು ಎಂದರು.

ಮಂಗಳವಾರದಿಂದ ಮೈಸೂರಿನ ನಾಗರಿಕನಾಗಿ ನಿಮಗೆ ಸ್ಪಂದಿಸುವ ಕೆಲಸ‌ ಮಾಡುತ್ತೇನೆ. ಹತ್ತು ವರ್ಷ ಅವಕಾಶ ನೀಡಿದ್ದಾರೆ. ನಾನು ಅನೇಕ ಅಭಿವೃದ್ಧಿ ಕೆಲಸ ಮಾಡಿಸಿದ್ದು, ಈ ಸಂಬಂಧ ನನ್ನ ನೆನಪು ಮಾಡಿಕೊಳ್ಳಬೇಕು ಎಂದರು.

2023-24ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದಿರುವ 300ಕ್ಕೂ ಹೆಚ್ಚು ಮಕ್ಕಳನ್ನು ಪುರಸ್ಕರಿಸಲಾಯಿತು.

ಇದೇ ವೇಳೆ ಭಾರತೀಯ ಅರಣ್ಯ ಸೇವೆಗೆ 33ನೇ ರ್ಯಾಂಕ್‌ (ಐಎಫ್‌ಎಸ್) ಪಡೆದಿರುವ ಸೌಮ್ಯಾ ರಾಂಪುರೆ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ನೈಪುಣ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಘು ಆರ್. ಕೌಟಿಲ್ಯ ವಿದ್ಯಾರ್ಥಿಗಳನ್ನು ಕುರಿತು ಶುಭನುಡಿಗಳನ್ನಾಡಿದರು.

ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್. ಜಗದೀಶ್ ಇದ್ದರು.