ಸಾರಾಂಶ
ಹೆಚ್.ಕೆ.ಅಶ್ವಥ್ ಹಳುವಾಡಿ
ಕನ್ನಡಪ್ರಭ ವಾರ್ತೆ ಮಂಡ್ಯನಗರದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ನಗರಸಭೆ ಚಾಲನೆ ನೀಡಿದೆ. ೩೫ ವಾರ್ಡ್‌ಗಳಲ್ಲಿರುವ ಒಟ್ಟು ಬೀದಿ ನಾಯಿಗಳಲ್ಲಿ ೧೭೦೦ ಬೀದಿ ನಾಯಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಹದಿನೈದು ದಿನಗಳಿಂದ ನಗರದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.
ಸಂತಾನ ಶಕ್ತಿ ಹರಣ ಚಿಕಿತ್ಸೆಯಿಂದ ನಾಯಿಗಳ ಉಪಟಳ ತಡೆಯಲು ಸಾಧ್ಯವಿಲ್ಲವೆಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದ್ದರೂ ಕಾನೂನಿನ ಚೌಕಟ್ಟಿನೊಳಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಬಿಟ್ಟರೆ ನಗರಸಭೆ ಅಧಿಕಾರಿಗಳಿಗೆ ಅನ್ಯಮಾರ್ಗವಿಲ್ಲದಂತಾಗಿದೆ.೨೮.೪೨ ಲಕ್ಷ ರು. ವೆಚ್ಚ:
ಬೆಂಗಳೂರಿನ ಕೇರ್ ಫಾರ್ ವಾಯ್ಸ್‌ಲೆಸ್ ಅನಿಮಲ್ಸ್ ತಂಡದಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಡಾ. ಅಭಿಲಾಷ್ ನೇತೃತ್ವದ ಎರಡು ತಂಡ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದೆ. ಒಂದು ನಾಯಿಗೆ ಸಂತಾನ ಶಕ್ತಿ ಹರಣ ಮಾಡಿ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ ನೀಡುವುದಕ್ಕೆ ೧೭೩೧ ರು. ವೆಚ್ಚ ಮಾಡಲಾಗುತ್ತಿದೆ. ಅಂದರೆ, ೧೭೦೦ ನಾಯಿಗಳಿಗೆ ೨೮,೪೨,೭೦೦ ರು.ಗಳನ್ನು ನಗರಸಭೆ ವೆಚ್ಚ ಮಾಡುತ್ತಿದೆ.ದಿನಕ್ಕೆ ೧೫ ರಿಂದ ೨೦ ನಾಯಿ ಸೆರೆ:
ಮೇ ೧ರಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು ದಿನಕ್ಕೆ ೧೫ ರಿಂದ ೨೦ ನಾಯಿಗಳಿಗೆ ಬಲೆ ಹಾಕಿ ಸೆರೆಹಿಡಿದು ತಾಲೂಕಿನ ಕಾಳೇನಹಳ್ಳಿಯಲ್ಲಿ ತೆರೆದಿರುವ ತಾತ್ಕಾಲಿಕ ಶೆಡ್‌ಗೆ ಕರೆದೊಯ್ಯಲಾಗುವುದು. ಅಲ್ಲಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ ನೀಡಲಾಗುವುದು. ಅಲ್ಲೇ ಬೋನ್‌ಗಳಲ್ಲಿ ಎರಡು-ಮೂರು ದಿನಗಳ ಕಾಲ ನಾಯಿಗಳನ್ನಿಟ್ಟು ಅವುಗಳಿಗೆ ಔಷಧ, ಚಿಕಿತ್ಸೆ ನೀಡಿ ಆರೈಕೆ ಮಾಡಿದ ಬಳಿಕ ಮತ್ತೆ ಆ ನಾಯಿಗಳನ್ನು ಯಾವ ಸ್ಥಳದಲ್ಲಿ ಸೆರೆ ಹಿಡಿಯಲಾಗಿತ್ತೋ ಅದೇ ಸ್ಥಳಕ್ಕೆ ತಂದು ಬಿಡಲಾಗುತ್ತಿದೆ. ಅದಕ್ಕಾಗಿ ನಾಯಿಗಳನ್ನು ಸೆರೆಹಿಡಿಯುವ ಸ್ಥಳ ಮತ್ತು ತಂದುಬಿಡುವ ಪ್ರಕ್ರಿಯೆಯನ್ನು ಜಿಪಿಎಸ್ ಮೂಲಕ ಗುರುತಿಸಲಾಗುತ್ತಿದೆ.೨೧೩ ನಾಯಿಗಳಿಗೆ ಸಂತಾನ ಶಕ್ತಿ ಹರಣ:
ಕಳೆದ ೧೫ ದಿನಗಳಿಂದ ಬೀದಿ ನಾಯಿಗಳಲ್ಲಿರುವ ಹೆಣ್ಣು-ಗಂಡು ಎರಡಕ್ಕೂ ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸಲಾಗುತ್ತಿದೆ. ಇದುವರೆಗೆ ೧೦೯ ಗಂಡು ಮತ್ತು ೧೦೪ ಹೆಣ್ಣು ಸೇರಿ ಒಟ್ಟು ೨೧೩ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲಾಗಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದ್ದಾರೆ. ಬೀದಿನಾಯಿಗಳ ಸಂಖ್ಯೆಯಲ್ಲಿ ನಿಖರತೆ ಇಲ್ಲ:ಮಂಡ್ಯ ನಗರದಲ್ಲಿರುವ ೩೫ ವಾರ್ಡ್‌ಗಳಲ್ಲಿ ೩೫೦೦ ಬೀದಿ ನಾಯಿಗಳಿರುವುದಾಗಿ ನಗರಸಭೆ ಅಧಿಕಾರಿಗಳು ನಡೆಸಿರುವ ಸಮೀಕ್ಷೆಯಿಂದ ತಿಳಿದು ಬಂದಿದೆಯಾದರೂ, ಅದಕ್ಕಿಂತಲೂ ಒಂದು ಪಟ್ಟು ಹೆಚ್ಚು ನಾಯಿಗಳಿರುವುದಾಗಿ ಸಾರ್ವಜನಿಕರು ಹೇಳುತ್ತಿದ್ದಾರೆ. ಕಳೆದ ವರ್ಷ ೬೫೦ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ವರ್ಷ ೧೭೦೦ ನಾಯಿಗಳಿಗೆ ನಡೆಸುವುದರಿಂದ ಬೀದಿ ನಾಯಿಗಳ ಉಪಟಳ ನಿಯಂತ್ರಣಕ್ಕೆ ತಂದಂತಾಗುತ್ತದೆ ಎಂಬುದು ನಗರಸಭೆ ಅಧಿಕಾರಿಗಳ ಅಭಿಮತವಾಗಿದೆ.
ಆದರೆ, ದಶಕದಿಂದಲೂ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದರೂ ಅವುಗಳ ಹಾವಳಿ ಮಾತ್ರ ಇದುವರೆಗೂ ಕಡಿಮೆಯಾಗಿಲ್ಲ. ರಾತ್ರಿ ವೇಳೆ ವಿವಿಧ ಬಡಾವಣೆಯ ರಸ್ತೆಗಳಲ್ಲಿ ಓಡಾಡುವುದಕ್ಕೆ ಭಯವಾಗುತ್ತದೆ. ರಕ್ಕಸ ನಾಯಿಗಳು ಅಟ್ಟಿಸಿಕೊಂಡು ಬರುವುದು ಸರ್ವೇ ಸಾಮಾನ್ಯವಾಗಿದೆ. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯಿಂದ ಪ್ರತಿ ವರ್ಷ ಹಣ ಪೋಲಾಗುತ್ತಿದೆಯೇ ವಿನಃ ಅದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವುದು ಜನಸಾಮಾನ್ಯರಿಂದ ಕೇಳಿಬರುತ್ತಿರುವ ಮಾತಾಗಿದೆ.ಕಾನೂನಿನಲ್ಲಿ ಬೇರೆ ದಾರಿ ಇಲ್ಲ:
ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವುದಕ್ಕೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಹೊರತುಪಡಿಸಿದರೆ ಕಾನೂನಿನಲ್ಲಿ ಬೇರೆ ಮಾರ್ಗಗಳೇ ಇಲ್ಲ. ಬೀದಿ ನಾಯಿಗಳ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸವಾಗಿ ನಡೆದುಕೊಂಡರೂ ಕಾನೂನಿನ ಕುಣಿಕೆಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆಂಬ ಭಯ ಅಧಿಕಾರಿಗಳನ್ನು ಕಾಡುತ್ತಿದೆ. ಪ್ರಾಣಿ ದಯಾ ಸಂಘದವರು ಬೀದಿ ನಾಯಿಗಳ ಸುರಕ್ಷತೆಗೆ ಹೆಚ್ಚಿನ ಮಹತ್ವ, ಕಾಳಜಿ ತೋರುತ್ತಾ ಅವುಗಳಿಗೆ ಸ್ವಲ್ಪ ತೊಂದರೆಯಾದರೂ ನೇರವಾಗಿ ನ್ಯಾಯಾಲಯದ ಮೆಟ್ಟಿಲೇರುವುದರಿಂದ ಬೀದಿ ನಾಯಿಗಳ ವಿಚಾರದಲ್ಲಿ ಅಧಿಕಾರಿ ವರ್ಗ ಕಾನೂನು ವ್ಯಾಪ್ತಿಯೊಳಗೆ ಏನು ಮಾಡುವುದಕ್ಕೆ ಸಾಧ್ಯವಿದೆಯೋ ಅದನ್ನಷ್ಟೇ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.ಮೇ ೧೩ರವರೆಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೊಳಪಡಿಸಿದ ಬೀದಿ ನಾಯಿಗಳುದಿನಾಂಕಗಂಡುಹೆಣ್ಣುಒಟ್ಟು
ಮೇ ೧೦೩೦೨೦೫
ಮೇ ೨೦೬೦೯ ೧೫
ಮೇ ೩೦೯೦೬೧೫
ಮೇ ೪೦೮೦೭೧೫
ಮೇ ೫೦೯೦೬೧೫
ಮೇ ೬೦೮೧೦೧೮
ಮೇ ೭೦೮೧೦೧೮
ಮೇ ೮೦೯೦೯೧೮
ಮೇ ೯೦೮೧೧೧೯
ಮೇ ೧೦೧೦೦೯೧೯
ಮೇ ೧೧೦೯೧೦೧೯
ಮೇ ೧೨೧೧೦೭೧೮
ಮೇ ೧೩೧೧೦೮೧೯
ಒಟ್ಟು೧೦೯೧೦೪೨೧೩ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವ ಸಲುವಾಗಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ನಾಯಿಗಳಿಗೆ ಸಂತಾನ ಶಕ್ತಿ ಹರಣದ ಜೊತೆಗೆ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ಒಂದು ನಾಯಿಗೆ ೧೭೩೧ ರು. ವೆಚ್ಚವಾಗುತ್ತಿದೆ. ಕಾನೂನಿನ ಪರಿಧಿಯೊಳಗೆ ಯಾವ ನಾಯಿಯನ್ನು ಎಲ್ಲಿ ಸೆರೆ ಹಿಡಿಯಲಾಗುವುದೋ ಅವುಗಳನ್ನು ಕಾಳೇನಹಳ್ಳಿಯಲ್ಲಿರುವ ಶೆಡ್‌ಗೆ ತಂದು ಚಿಕಿತ್ಸೆ ನಡೆಸಿದ ಬಳಿಕ ಎರಡು ದಿನಗಳ ಕಾಲ ಆರೈಕೆ ಮಾಡಿ ಮತ್ತೆ ಅಲ್ಲೇ ಬಿಡುವ ಕಾರ್ಯ ಮಾಡಲಾಗುತ್ತಿದೆ. ಕಳೆದ ವರ್ಷ ೬೫೦ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿದ್ದು, ಈ ಬಾರಿ ೧೭೫೦ ನಾಯಿಗಳಿಗೆ ನಡೆಸಲಾಗುತ್ತಿದೆ.
- ಆರ್.ಮಂಜುನಾಥ್, ಆಯುಕ್ತರು, ನಗರಸಭೆ