ಪೊಲೀಸ್ ಇಲಾಖೆ ವತಿಯಿಂದ ನಡೆಸಲಾಗುವ ಕುಂದುಕೊರತೆ ಸಭೆಗಳಿಗೆ ಆಯಾ ವ್ಯಾಪ್ತಿಯ ಎಸ್ಸಿ, ಎಸ್ಟಿ ಮುಂಖಡರನ್ನು ಆಹ್ವಾನಿಸಿದರೆ,

ಕನ್ನಡಪ್ರಭ ವಾರ್ತೆ ಮೈಸೂರು

ಶಾಲಾ ಕಾಲೇಜು ದಾಖಲಾತಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ದಾಖಲಾತಿಗೆ ತೊಂದರೆಯಾಗದಂತೆ ಪರಿಶಿಷ್ಟ ಜಾತಿ/ ಪಂಗಡ ಸೇರಿದಂತೆ ಇತರೆ ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಆದ್ಯತೆ ನೀಡಿ ವಿತರಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ತಹಸೀಲ್ದಾರ್ ಗಳಿಗೆ ಸೂಚಿಸಿದರು.

ನಗರದ ಡಾ. ಬಾಬು ಜಗಜೀವನ್ ರಾಂ ಸಭಾಂಗಣದಲ್ಲಿ ಬುಧವಾರ ನಡೆದ ಎಸ್ಸಿ, ಎಸ್ಟಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಲ್ಲಿಸಬೇಕಿರುವ ದಾಖಲಾತಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದರು.

ಸಮಿತಿ ಸದಸ್ಯ ಚಿಕ್ಕಜವರಯ್ಯ ಮಾತನಾಡಿ, ಪೊಲೀಸ್ ಇಲಾಖೆ ವತಿಯಿಂದ ನಡೆಸಲಾಗುವ ಕುಂದುಕೊರತೆ ಸಭೆಗಳಿಗೆ ಆಯಾ ವ್ಯಾಪ್ತಿಯ ಎಸ್ಸಿ, ಎಸ್ಟಿ ಮುಂಖಡರನ್ನು ಆಹ್ವಾನಿಸಿದರೆ, ಬಹಳಷ್ಟು ತೊಂದರೆಗಳ ಬಗ್ಗೆ ಚರ್ಚಿಸಬಹುದು. ತಾಲೂಕು ಮಟ್ಟದಲ್ಲಿ ನಿಗದಿತವಾಗಿ ಎಸ್ಸಿ, ಎಸ್ಟಿ ಜಾಗೃತ ಮತ್ತು ಉಸ್ತುವಾರಿ ಸಮಿತಿ ನಡೆಯುತ್ತಿಲ್ಲ. ಸಮಿತಿ ರಚಿಸಿಕೊಂಡು ನಿಗದಿತವಾಗಿ ಸಭೆ ನಡೆಸುವಂತೆ ಮನವಿ ಮಾಡಿದರು.

ನಗರದ ಕೆಲವು ಬಡಾವಣೆ, ವೃತ್ತಗಳಿಗೆ, ದ್ವಾರಗಳಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರು ನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವೃತ್ತ ಹಾಗೂ ದ್ವಾರಗಳಿಗೆ ಡಾ. ಅಂಬೇಡ್ಕರ್ ಹೆಸರು ನಾಮಕರಣ ಮಾಡಲು ಸಂಬಂಧಿಸಿದ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಎಸ್.ಟಿ. ರವಿಕುಮಾರ್, ಪಾರ್ವತಮ್ಮ, ವೇಣುಗೋಪಾಲ್, ಜಿಪಂ ಉಪ ಕಾರ್ಯದರ್ಶಿ ಸವಿತಾ, ನಗರ ಪಾಲಿಕೆ ಉಪ ಆಯುಕ್ತೆ ವೀಣಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ ಮೊದಲಾದವರು ಇದ್ದರು.

----

ಬಾಕ್ಸ್...

ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು- ಆಕ್ಷೇಪ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಗೆ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ, ಪಾಲಿಕೆ ಆಯುಕ್ತರು, ಎಂಡಿಎ ಆಯುಕ್ತರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರಾಗಿರುವುದಕ್ಕೆ ಸಮಿತಿ ಸದಸ್ಯ ಚಿಕ್ಕಜವರಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿಯ ಜನಗಳ ಕಷ್ಟಕಾರ್ಪಣ್ಯಗಳನ್ನು ಕೇಳಿ ಬಗೆಹರಿಸಬೇಕಾದ ಮಹತ್ವದ ಸಭೆಗಳಿಗೆ ಜಿಲ್ಲಾಧಿಕಾರಿ ಸಹಿತವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರಾಗಿದ್ದಾರೆ. 3 ತಿಂಗಳಿಗೊಮ್ಮೆ ಕರೆಯಬೇಕಿದ್ದ ಸಭೆಯನ್ನು 6 ತಿಂಗಳಿಗೆ ಕರೆಯುತ್ತಿದ್ದಾರೆ. ಅಹವಾಲು ಕೇಳಿಸಿಕೊಳ್ಳಬೇಕಾದ ಅಧಿಕಾರಿಗಳೇ ಗೈರಾಗಿದ್ದಾರೆ. ಮುಖ್ಯಮಂತ್ರಿಗಳ ಮೈಸೂರಿಗೆ ಆಗಮನ, ಇನ್ನಿತರ ತುರ್ತು ಕೆಲಸಗಳಿದ್ದರೆ ಸಭೆಯನ್ನು ಮತ್ತೊಂದು ದಿನ ನಿಗದಿ ಮಾಡಬಹುದಿತ್ತು ಎಂದರು.