ವಿಜ್ಞಾನ ಮಾನವನ ಬದುಕಿನ ದಿಕ್ಸೂಚಿ

| Published : Mar 18 2024, 01:46 AM IST

ಸಾರಾಂಶ

ವಿಜ್ಞಾನವು ವ್ಯಕ್ತಿಯ ಜೀವನ ಮಟ್ಟವನ್ನು ಎತ್ತರಕ್ಕೆ ಏರಿಸಿದೆ, ಪ್ರಕೃತಿಯ ಗುಟ್ಟುಗಳನ್ನೆಲ್ಲ ರಟ್ಟು ಮಾಡುತ್ತ ದಿಟ್ಟ ಹೆಜ್ಜೆ ಇಡುತ್ತಿದೆ, ಪವಾಡ ರಹಸ್ಯಗಳನ್ನು ಬಯಲು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಉಂಟುಮಾಡುತ್ತಿದೆ,

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಆಧುನಿಕತೆ ಬೆಳೆದಂತೆಲ್ಲ ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ನಡೆದು ಮಾನವನ ಜೀವನ ಮಟ್ಟವನ್ನು ಎತ್ತರಕ್ಕೆ ಏರಿಸಿದೆ, ಈ ಮೂಲಕ ವಿಜ್ಞಾನ ಮಾನವನ ಬದುಕಿನ ದಿಕ್ಸೂಚಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ತಾಲೂಕಿನ ಹುಲಿಬೆಲೆ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ವಿಜ್ಞಾನ ಉತ್ಸವ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.

ಜೀವನ ಮಟ್ಟ ಸುಧಾರಣೆ

ವಿಜ್ಞಾನವು ವ್ಯಕ್ತಿಯ ಜೀವನ ಮಟ್ಟವನ್ನು ಎತ್ತರಕ್ಕೆ ಏರಿಸಿದೆ, ಪ್ರಕೃತಿಯ ಗುಟ್ಟುಗಳನ್ನೆಲ್ಲ ರಟ್ಟು ಮಾಡುತ್ತ ದಿಟ್ಟ ಹೆಜ್ಜೆ ಇಡುತ್ತಿದೆ, ರಮ್ಯ ಹಾಗೂ ರೋಚಕ ಸಂಖ್ಯಾತ ವಿಸ್ಮಯಗಳನ್ನು ತನ್ನೊಡಲಲ್ಲಿಟ್ಟುಕೊಂಡು, ಪವಾಡ ರಹಸ್ಯಗಳನ್ನು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಉಂಟುಮಾಡುತ್ತಿದೆ, ಈ ನಿಟ್ಟಿನಲ್ಲಿ ವಿಜ್ಞಾನ ರಸಪ್ರಶ್ನೆ ಮೂಲಕ ಅನೇಕ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರ ಹೊಮ್ಮಿದೆ ಎಂದು ಶ್ಲಾಘಿಸಿದರು.

ವಿಜ್ಞಾನ ಲೋಕದ ವಿಸ್ಮಯದ ಜೊತೆಗೆ ಪ್ರಶ್ನೆಗಳು, ರಸಪ್ರಶ್ನೆಗಳು ಮೂಲಕ ವಿದ್ಯಾರ್ಥಿಯಲ್ಲಿರುವ ಪ್ರತಿಭೆ ಹೊರತೆಗೆಯುವ ಪ್ರಾಮಾಣಿಕ ಪ್ರಯತ್ನಿಸಾಗಿದ್ದು ಇಲ್ಲಿ ಶಿಕ್ಷಕರ, ಪೋಷಕರ ಪ್ರಯತ್ನ ಶ್ಲಾಘನೀಯ ಎಂದರು.

ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ

ಶಿಕ್ಷಕರನ್ನು ಸನ್ಮಾನಿಸಿದ ಸಮಿತಿಯ ಉಪಾಧ್ಯಕ್ಷೆ ಕೆ.ಸಿ.ಪದ್ಮಾವತಿ ಮಾತನಾಡಿ, ವಿಜ್ಞಾನ ವಿಷಯದಲ್ಲಿ ಆಸಕ್ತಿ ಕುತೂಹಲ ಕೆರಳಿಸುವ ಪ್ರಯೋಗಗಳು ಇದ್ದು, ವಿದ್ಯಾರ್ಥಿ ಶಿಕ್ಷಕರ ಪಾತ್ರ ಅತಿ ಮಹತ್ವದ್ದಾಗಿದೆ. ಇಲ್ಲಿ ತಂದೆ ತಾಯಿ ಪೋಷಕರಾಗಿ ಶಿಕ್ಷಕರು ತಮ್ಮ ಸಾರ್ಥಕ ಸೇವೆ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ವಿಜ್ಞಾನಿ ಸಿ.ವಿ.ರಾಮನ್ ರಸಪ್ರಶ್ನೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡ ಹನುಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಹಾಲಕ್ಷ್ಮಿ ವಿದ್ಯಾರ್ಥಿಗೆ ಮೂರು ಸಾವಿರ ನಗದು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಬಹುಮಾನ, ಪಾರಿತೋಷಕ

ಉತ್ತಮ ಶಿಕ್ಷಕರಾದ ಯುವರಾಣಿ, ಕೆ.ವಿ.ಮಂಜುಳಾ, ವಿ.ಸಾವಿತ್ರಮ್ಮ, ವಿ.ಆರ್.ಪದ್ಮಾವತಿ, ಲೇಖ ರವರುಗಳನ್ನು ಮತ್ತು ರಸಪ್ರಶ್ನೆಯಲ್ಲಿ ಸಾಧನೆಗಾಗಿ ಬಲಮಂದೆಯ ಸ್ನೇಹ ಪ್ರಥಮ, ಕನಮನಹಳ್ಳಿಯ ಮಹಾಲಕ್ಷ್ಮಿ ದ್ವಿತೀಯ ಬಹುಮಾನ ಪರಿತೋಷಕ ಪಡೆದುಕೊಂಡರು.

ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಜಿ.ಮಂಜುಳಾ, ತಾಲೂಕು ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ನಂಜುಂಡಪ್ಪ, ಆಶಾ, ಈಶ್ವರ್ ಅಲ್ಲಾಪುರ, ಉಪಾಧ್ಯಕ್ಷರಾದ ಕಸ್ತೂರಿ, ಕಾರ್ಯದರ್ಶಿ ಮಂಜುನಾಥ್ ಕಾಮಸಮುದ್ರ ನಾಗರಾಜ್ ಇದ್ದರು.