ಸಾರಾಂಶ
ಹಿರೇರೂಗಿ ಗ್ರಾಮದ ಕೆಜಿಎಸ್ ಶಾಲೆಯ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಸುದರ್ಶನ ಬೇನೂರ ಮತ್ತು ಉಪಾಧ್ಯಕ್ಷರಾಗಿ ಪರಶುರಾಮ ಹೊಸಮನಿ ಆಯ್ಕೆಯಾಗಿದ್ದಾರೆ
ಕನ್ನಡಪ್ರಭ ವಾರ್ತೆ ತಾಂಬಾ
ಹಿರೇರೂಗಿ ಗ್ರಾಮದ ಕೆಜಿಎಸ್ ಶಾಲೆಯ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಸುದರ್ಶನ ಬೇನೂರ ಮತ್ತು ಉಪಾಧ್ಯಕ್ಷರಾಗಿ ಪರಶುರಾಮ ಹೊಸಮನಿ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯಶಿಕ್ಷಕಿ ವಿ.ವೈ.ಪತ್ತಾರ ತಿಳಿಸಿದ್ದಾರೆ.ಶಾಲೆಯಲ್ಲಿ ಮಂಗಳವಾರ ಎಸ್‌ಡಿಎಂಸಿ ರಚನಾ ಸಭೆ ನಡೆಯಿತು. ಎಲ್ಲರ ಸಹಮತದೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಜೊತೆಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಸುದರ್ಶನ ಬೇನೂರ, ಎಲ್ಲರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಉಪಾಧ್ಯಕ್ಷ ಪರಶುರಾಮ ಹೊಸಮನಿ ಮಾತನಾಡಿದರು.
ಶಿಕ್ಷಕ ಸಂತೋಷ ಬಂಡೆ ಅವರು ಎಸ್‌ಡಿಎಂಸಿ ರಚನೆ, ಅಧಿಕಾರ ಮತ್ತು ಕರ್ತವ್ಯಗಳು, ಸರ್ಕಾರದ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು, ಶಿಕ್ಷಣದ ಸಾರ್ವತ್ರೀಕರಣದಲ್ಲಿ ಪ್ರಾಥಮಿಕ ಶಿಕ್ಷಣದ ಮಹತ್ವದ ಜೊತೆಗೆ ಅನೇಕ ಶೈಕ್ಷಣಿಕ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.ಶಿಕ್ಷಕ ಎಸ್.ಆರ್.ಚಾಳೇಕರ ಮಾತನಾಡಿ, ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರತಿಯೊಂದು ಶಾಲೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳನ್ನು ರಚಿಸಲಾಗುತ್ತಿದೆ. ಶಾಲೆಗಳ ವಾತಾವರಣವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವಲ್ಲಿ ಗ್ರಾಮಸ್ಥರ ಪಾತ್ರ ಬಹುಮುಖ್ಯ ಎಂದರು.
ಯುವ ಮುಖಂಡರಾದ ಪರಶುರಾಮ ಹೊಸಮನಿ, ಸಂತೋಷ ಕೋಟಗೊಂಡ, ಶಾಲಾ ಮುಖ್ಯ ಶಿಕ್ಷಕಿ ವಿ.ವೈ.ಪತ್ತಾರ, ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ, ಶಿಕ್ಷಕರಾದ ಎಸ್.ಎಂ.ಪಂಚಮುಖಿ, ಎಸ್.ಡಿ.ಬಿರಾದಾರ, ಎಸ್.ಬಿ.ಕುಲಕರ್ಣಿ, ಯಲ್ಲಮ್ಮ ಸಾಲೋಟಗಿ, ಸಂತೋಷ ಬಿರಾದಾರ ಸೇರಿದಂತೆ ಎಲ್ಲ ಪಾಲಕರು ಉಪಸ್ಥಿತರಿದ್ದರು.