ವಿವೇಕಾನಂದ ಶಿಶುಮಂದಿರದಲ್ಲಿ ‘ಶ್ರೀಕೃಷ್ಣ ಲೋಕ’

| Published : Aug 27 2024, 01:30 AM IST

ಸಾರಾಂಶ

ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ದೇವಾಲಯದ ಎದುರು ಭಾಗದಲ್ಲಿ ಸೋಮವಾರ ೨೬ನೇ ವರ್ಷದ ‘ಶ್ರೀಕೃಷ್ಣ ಲೋಕ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಶ್ರೀ ಕೃಷ್ಣನೆಂದರೆ ಆಪ್ತತೆ ಮತ್ತು ಬದುಕಿನ ಸಾಕ್ಷಾತ್ಕಾರವಾಗಿದ್ದು, ಕೃಷ್ಣನ ಬದುಕಿನ ಸಂದೇಶವನ್ನು ಯಾವುದೇ ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಸಂಪೂರ್ಣ ಶರಣಾಗತಿಗೆ ಮತ್ತು ಮುಗ್ಧತೆಗೆ ಶ್ರೀಕೃಷ್ಣ ದೇವರು ಒಳಿಯುತ್ತಾನೆ ಎಂದು ಉಡುಪಿ ಮಣಿಪಾಲ ಸಮೂಹ ಶಿಕ್ಷಣ ಸಂಸ್ಥೆಗಳ ಸಹ ಪ್ರಾಧ್ಯಾಪಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಹೇಳಿದರು.ಅವರು ನಗರದ ಪರ್ಲಡ್ಕ ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶುಮಂದಿರದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಆಶ್ರಯದಲ್ಲಿ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ದೇವಾಲಯದ ಎದುರು ಭಾಗದಲ್ಲಿ ಸೋಮವಾರ ನಡೆದ ೨೬ನೇ ವರ್ಷದ ‘ಶ್ರೀಕೃಷ್ಣ ಲೋಕ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ದೇವಳದ ಆಡಳಿತಾಧಿಕಾರಿ ನವೀನ್ ಕುಮಾರ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚಾಲ್ ಮಾತನಾಡಿದರು.ಈ ಸಂದರ್ಭ ೨೬ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮದ ಅಂಗವಾಗಿ ಏರ್ಪಡಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಲ್ಲಾ ಕೃಷ್ಣ, ರಾಧೆ ವೇಷಧಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಬೆಳ್ಳಾರೆಯ ಉದ್ಯಮಿ ಬಿ. ಮಿಥುನ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಗೌರವಾಧ್ಯಕ್ಷೆ ರಾಜೀ ಬಲರಾಮ್, ಅಧ್ಯಕ್ಷ ಸಂತೋಷ್ ಕುಮಾರ್ ರೈ ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮೇಘನಾ ಪಾಣಾಜೆ, ಕೋಶಾಧಿಕಾರಿ ಕಿಶನ್ ಕುಮಾರ್, ವಿವೇಕಾನಂದ ಶಿಶು ಮಂದಿರದ ಅಧ್ಯಕ್ಷ ರಾಜಗೋಪಾಲ್ ಭಟ್, ಸಂಚಾಲಕ ಅಕ್ಷಯ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪರ್ಲಡ್ಕ ಶಿವಪೇಟೆಯ ಶಿಶು ಮಂದಿರದ ಆವರಣದಲ್ಲಿ ಬೆಳಗ್ಗೆ ಬಾಲಕೃಷ್ಣನನ್ನು ತೊಟ್ಟಿಲಿನಲ್ಲಿ ಹಾಕಿ, ಬೆಣ್ಣೆ ತಿನ್ನಿಸಿ, ಮಾತೆಯರು ಜೋಗುಳ ಹಾಡುವ ಮೂಲಕ ಶ್ರೀಕೃಷ್ಣ ಲೋಕಕ್ಕೆ ಚಾಲನೆ ನೀಡಲಾಯಿತು. ಬಳಿಕ ನಡೆದ ಶೋಭಾಯಾತ್ರೆಗೆ ಮಾಜಿ ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ನಗರ ಸಭಾ ಸದಸ್ಯೆ ವಿದ್ಯಾ ಗೌರಿ ಧ್ವಜ ಹಸ್ತಾಂತರಿಸಿದರು. ಶಿಶು ಮಂದಿರದ ಆವರಣದಿಂದ ಹೊರಟ ಮೆರವಣಿಗೆಯು ಎಂ.ಟಿ. ರಸ್ತೆಯಾಗಿ ಮುಖ್ಯ ರಸ್ತೆಯ ಮೂಲಕ ಸಾಗಿ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಮಾಪನಗೊಂಡಿತು. ಕೃಷ್ಣ ರಾಧೆಯ ವೇಷ ಧರಿಸಿದ ಸಾವಿರಾರು ಪುಟಾಣಿಗಳ ವೈಭವದ ಮೆರವಣಿಗೆಯಲ್ಲಿ ಮಕ್ಕಳ ಪೋಷಕರು ಜತೆಯಾಗಿ ಸಾಗಿದರು.ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ದಾಮೋದರ ಪಾಟಾಳಿ ಹಾಗೂ ಪ್ರಾಧ್ಯಾಪಕಿ ಡಾ. ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.