ಸಾರಾಂಶ
ತುಮಕೂರು: ಸಂತ ಸೇವಾಲಾಲರು ಸಮಾಜದ ಏಳಿಗೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. ಸಮ ಸಮಾಜ ನಿರ್ಮಾಣದ ಆಶಯವನ್ನು ಹೊತ್ತು ಅದಕ್ಕಾಗಿ ಶ್ರಮಿಸಿದ ಸಮಾಜ ಸುಧಾರಕರಾಗಿದ್ದರು ಎಂದು ತುಮಕೂರು ತಹಶೀಲ್ದಾರ್ ಸಿದ್ದೇಶ್ ಅಭಿಪ್ರಾಯಪಟ್ಟರು.
ತುಮಕೂರು: ಸಂತ ಸೇವಾಲಾಲರು ಸಮಾಜದ ಏಳಿಗೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. ಸಮ ಸಮಾಜ ನಿರ್ಮಾಣದ ಆಶಯವನ್ನು ಹೊತ್ತು ಅದಕ್ಕಾಗಿ ಶ್ರಮಿಸಿದ ಸಮಾಜ ಸುಧಾರಕರಾಗಿದ್ದರು ಎಂದು ತುಮಕೂರು ತಹಶೀಲ್ದಾರ್ ಸಿದ್ದೇಶ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ಜಿಲ್ಲಾ ಬಂಜಾರ ಸೇವಾಲಾಲ್ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಬಂಜಾರ ಸಮುದಾಯವು ಒಂದು ವಿಶಿಷ್ಟ ಸಂಸ್ಕೃತಿಯುಳ್ಳ ಸಮುದಾಯವಾಗಿದ್ದು, ಸಮುದಾಯವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಎಸ್.ಎಸ್.ಐ.ಟಿ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಡಿ. ರಾಜಾನಾಯಕ್, ಕಾಲಕಾಲಕ್ಕೆ ವಿವಿಧ ಸಂತರು, ದಾರ್ಶನಿಕರು, ಸಮಾಜ ಸುಧಾರಕರು ಈ ನೆಲದಲ್ಲಿ ಜನಿಸಿ, ಜೀವನಮಾರ್ಗ ಬೋಧಿಸಿದ್ದಾರೆ. ಅದೇ ರೀತಿಯಲ್ಲಿ, ಹಿಂದುಳಿದಿದ್ದ ಬಂಜಾರ ಸಮುದಾಯವನ್ನು ಸಂತ ಸೇವಾಲಾಲರು ಜ್ಞಾನದ ಬೆಳಕಿನೆಡೆಗೆ ತಂದರು ಎಂದು ತಿಳಿಸಿದರು.ಜಿಲ್ಲಾ ಬಂಜಾರ ಸೇವಾಲಾಲ್ ಸೇವಾ ಸಂಘದ ಉಪಾಧ್ಯಕ್ಷ ಕುಬೇಂದ್ರ ನಾಯಕ್ ಎಲ್. ಮಾತನಾಡಿ, ಬಂಜಾರ ಸಮುದಾಯದ ಜನರು ವಿಶ್ವದ ಅನೇಕ ಭಾಗಗಳಲ್ಲಿ ವಾಸಿಸುತ್ತಿದ್ದು, ತಮ್ಮ ವಿಶಿಷ್ಟ, ವಿಭಿನ್ನ, ಉಡುಗೆ-ತೊಡುಗೆ, ಸಂಸ್ಕೃತಿಯಿಂದ ಗುರುತಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಬಂಜಾರ ಗುರು ಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಜಿಲ್ಲಾ ಬಂಜಾರ ಸೇವಾಲಾಲ್ ಸೇವಾ ಸಂಘದ ಗೌರವ ಅಧ್ಯಕ್ಷ ದೇನಾನಾಯಕ್, ಅಧ್ಯಕ್ಷ ಡಿ. ನಾರಾಯಣ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರು ಇಂದಿರಾ ದೇನಾನಾಯಕ್, ಕಾರ್ಯದರ್ಶಿ ಬಿ. ಶಂಕರ್, ಕೃಷ್ಣಾ ನಾಯಕ್, ಎಸ್ ಕುಮಾರ್ ನಾಯಕ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.