ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಆಪರೇಷನ್ ಸಿಂದೂರ ಯಶಸ್ಸಿನ ಹಿನ್ನೆಲೆಯಲ್ಲಿ ಭಾರತದ ಸೇನೆಯೊಂದಿಗೆ ರಾಷ್ಟ್ರರಕ್ಷಣೆಗಾಗಿ ನಾಗರಿಕರು ಎಂಬ ವಿಷಯದೊಂದಿಗೆ ಬಿಜೆಪಿಯು ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಸಿ ವೀರಸೇನಾನಿಗಳಿಗೆ ಧನ್ಯವಾದ ಸಲ್ಲಿಸಿತು.ಗುರುವಾರ ನಗರದ ಮಂತ್ರಿಮಾಲ್‍ನ ಸಂಪಿಗೆ ರಸ್ತೆಯ ಶಿರೂರು ಆಟದ ಮೈದಾನದಿಂದ ಮಲ್ಲೇಶ್ವರ 18ನೇ ಅಡ್ಡರಸ್ತೆವರೆಗೆ 1.5 ಕಿ.ಮೀ. ತಿರಂಗಾ ಯಾತ್ರೆ 9 ಅಡಿ ಅಗಲ ಮತ್ತು 1,500 ಅಡಿ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ನಡೆಸಲಾಯಿತು. ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಆಟದ ಮೈದಾನ ತಲುಪಿದ 205 ಅಡಿ ಅಗಲ, 630 ಅಡಿ ಉದ್ದದ ಮತ್ತೊಂದು ಬೃಹತ್ ರಾಷ್ಟ್ರಧ್ವಜದ ಪ್ರದರ್ಶನ ನಡೆಯಿತು. ಈ ಧ್ವಜದ ಸುತ್ತಲೂ ಮೆರವಣಿಗೆ ನಡೆಸಿದ ಅತೀ ಉದ್ದದ ರಾಷ್ಟ್ರಧ್ವಜ ಹಿಡಿದು ನಿಂತ ವಿದ್ಯಾರ್ಥಿಗಳ ಪರೇಡ್ ಆಕರ್ಷಣೀಯವಾಗಿತ್ತು.
ಅಲ್ಲದೆ, ತಿರಂಗಾ ಯಾತ್ರೆ ಮೆರವಣಿಗೆಯಲ್ಲಿ ಪ್ರಚಾರ ವಾಹನಕ್ಕೆ ಅಳವಡಿಸಿದ್ದ ಸೈನಿಕ ವೇಷಧಾರಿಯಾಗಿ ಕೈಯಲ್ಲಿ ಬಂದೂಕು ಹಿಡಿದು ಯೋಧರಂತೆ ಕಾಣುವ ಪ್ರಧಾನಿ ಮೋದಿ ಕಟೌಟ್ ಪ್ರದರ್ಶನ ಗಮನಸೆಳೆಯಿತು. ಸೈನಿಕರಿಗೆ ಬೆಂಬಲ ಸೂಚಿಸಿ ಯಾತ್ರೆಯಲ್ಲಿ ಭಾಗವಹಿಸಿದ್ದ ನೂರಾರು ಮಂದಿ ರಾಷ್ಟ್ರಧ್ವಜ ಹಿಡಿದು ದೇಶಾಭಿಮಾನ ಮೆರೆದರು. ಆಪರೇಷನ್ ಸಿಂದೂರ ಎಂಬ ಟೋಪಿ ಧರಿಸಿ, ರಾಷ್ಟ್ರಧ್ವಜ ಹಿಡಿದು ಯಾತ್ರೆಯಲ್ಲಿ ಜನ ಹೆಜ್ಜೆ ಹಾಕಿದರು.ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್, ರಾಜ್ಯ ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸೇರಿ ಹಲವರು ಯಾತ್ರೆಯಲ್ಲಿ ಭಾಗವಹಿಸಿದ್ದರು.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ನಾಯಕರ ಅಪಕ್ವ ಹೇಳಿಕೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಕೆಲವರ ಪ್ರಶ್ನೆಗಳು ಪಾಕಿಸ್ತಾನದ ಪರವಾಗಿವೆ. ದೇಶದ ವಿರುದ್ಧ ಮಾತನಾಡಿದರೆ ಜನ ಅವರ ನಾಲಿಗೆ ಇಲ್ಲದಂತೆ ಮಾಡಬಹುದು ಎಂದು ಟೀಕಾಪ್ರಹಾರ ನಡೆಸಿದರು.ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ ಮಾತನಾಡಿ, ಆಪರೇಷನ್ ಸಿಂದೂರದ ಮೂಲಕ ಭಾರತದ ವಾಯು ರಕ್ಷಣಾ ವ್ಯವಸ್ಥೆ ಅತ್ಯಂತ ಸಶಕ್ತವಾಗಿರುವುದಾಗಿ ಜಗತ್ತಿಗೆ ತಿಳಿಸಿದ್ದೇವೆ. ಭಾರತದ ಮಾನ, ಸಮ್ಮಾನದ ರಕ್ಷಣೆ ಮತ್ತು ಭಾರತೀಯರ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ ಕೈಗೊಂಡಿದೆ. ಇದನ್ನು ಪ್ರಶಂಸಿಸಿ ಮತ್ತು ಭಾರತದ ಸೇನೆಗೆ ಧನ್ಯವಾದ ಸಮರ್ಪಣೆಗಾಗಿ ದೇಶಾದ್ಯಂತ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಿವೃತ್ತ ಏರ್ ಮಾರ್ಷಲ್ ಎ.ವಿ.ಮುರುಳಿ, ಆಪರೇಷನ್ ಸಿಂದೂರ್ ಮುಗಿದಿಲ್ಲ. ಇನ್ನೊಮ್ಮೆ ದಾಳಿ ನಡೆದರೆ ಪಾಕಿಸ್ತಾನ ನಿರ್ನಾಮವಾಗಲಿದೆ. ಪಾಕ್ ಆಕ್ರಮಿತ ಕಾಶ್ಮೀರ ನಮ್ಮದಾಗಲಿದೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂಬುದು ದೇಶದ ನಿಲುವಾಗಿತ್ತು. ಪ್ರಧಾನಿಯವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರು. ಸೈನಿಕರ ಹಿಂದೆ ಇಡೀ ರಾಷ್ಟ್ರವೇ ನಿಂತಿದೆ ಎಂದು ಹೇಳಿದರು.