ಚಂದ್ರಯಾನ, ಅಣೆಕಟ್ಟುಗಳು, ಸೌರ ಶಕ್ತಿಯ ಬಳಕೆ

| Published : Jan 28 2024, 01:16 AM IST

ಸಾರಾಂಶ

ಶನಿವಾರ ಬಿ.ಸಿ.ರೋಡು ತಲಪಾಡಿಯ ಡೈಮಂಡ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಪುಟಾಣಿ ಡೈಮಂಡ್‌ಗಳ ‘ಸ್ಕಿಲ್‌ ಸ್ಪೆಕ್ಟ್ರಾ’ ಕಾರ್ಯಕ್ರಮ ಅದ್ಭುತ ಲೋಕವನ್ನೇ ಸೃಷ್ಟಿಸಿತ್ತು.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

‘ಗುಡ್‌ ಮಾರ್ನಿಂಗ್‌ ಸರ್..‌ ದಿಸ್‌ ಈಸ್‌ ವಾಟರ್‌ ಹಾರ್ವೆಸ್ಟಿಂಗ್‌ ಪ್ಲ್ಯಾಂಟ್... ದಿಸ್‌ ಈಸ್‌ ಸೆನ್ಸಾರ್‌ ಗೇಟ್..‌ ದಿಸ್‌ ಈಸ್‌ ಡ್ಯಾಂ..’ ಹೀಗೆ ಪುಟ್ಟ ಪುಟ್ಟ ಪುಟಾಣಿಗಳು ನೀಡುತ್ತಿರುವ ವಿವರಣೆ, ಅವರ ಎದುರು ಅಂದವಾಗಿ ಜೋಡಿಸಿಟ್ಟಿದ್ದ ಪ್ರತಿಯೊಂದು ಮಾಡೆಲ್‌ಗಳು ಎಂಥವರನ್ನು ಬೆರಗುಗೊಳಿಸುವಂತಿತ್ತು.

ಶನಿವಾರ ಬಿ.ಸಿ.ರೋಡು ತಲಪಾಡಿಯ ಡೈಮಂಡ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಪುಟಾಣಿ ಡೈಮಂಡ್‌ಗಳ ‘ಸ್ಕಿಲ್‌ ಸ್ಪೆಕ್ಟ್ರಾ’ ಕಾರ್ಯಕ್ರಮ ಅದ್ಭುತ ಲೋಕವನ್ನೇ ಸೃಷ್ಟಿಸಿತ್ತು.

ಶಾಲೆಯ ನೂತನ ಕಟ್ಟಡದ ಉದ್ಘಾಟನೆಯ ಅಂಗವಾಗಿ ಈ ವಿಶೇಷ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಶಾಲೆಯ ಗ್ರೇಡ್‌ ೧ ರಿಂದ ತೊಡಗಿ ಗ್ರೇಡ್‌ ೭ರ ವರೆಗಿನ ಮಕ್ಕಳು ತಾವು ಹಾಗೂ ತಮ್ಮ ಪೋಷಕರ ನೆರವಿನಿಂದ ಸಿದ್ಧಪಡಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಿದ್ದು, ಪುಟಾಣಿಗಳ ಉತ್ಸಾಹದ ಭಾಗವಹಿಸುವಿಕೆ ಗಮನಸೆಳೆಯುತ್ತಿತ್ತು.ವಿದ್ಯಾರ್ಥಿಗಳು ವಿಜ್ಞಾನದ ಆವಿಷ್ಕಾರಗಳು ಹಾಗೂ ದೈನಂದಿನ ಚಟುವಟಿಕೆಯಲ್ಲಿ ವಿಜ್ಞಾನದ ಮಹತ್ವ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿವರಣೆ ನೀಡಿದರು. ಶಾಲೆಯ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ತಾವು ತಯಾರಿಸಿದ ವೈಜ್ಞಾನಿಕ ವಸ್ತುಗಳ ಮಾದರಿ ಕುರಿತು ಪ್ರದರ್ಶನದಲ್ಲಿ ನೋಡುಗರಿಗೆ ವಿವರಣೆ ಒದಗಿಸಿದರು.

ವಸ್ತು ಪ್ರದರ್ಶನದಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಮಾನವ ಶರೀರದ ರಚನೆ, ಹೃದಯ, ಕಿಡ್ನಿಯ ಕಾರ್ಯ ನಿರ್ವಹಣೆ, ಆರೋಗ್ಯಕರ ಆಹಾರ ಜಂಕ್‌ ಫುಡ್‌ಗಳ ಜಾಗೃತಿ, ವಿಜ್ಞಾನಕ್ಕೆ ಸಂಬಂಧಿಸಿ ಚಂದ್ರಯಾನ, ಅಣೆಕಟ್ಟುಗಳು, ಸೌರ ಶಕ್ತಿಯ ಬಳಕೆ, ಬಗೆಬಗೆಯ ನೀರೆತ್ತುವ ಸಾಧನಗಳು, ಗಾಳಿಯಂತ್ರ, ಲೇಸರ್ ಉಪಯೋಗ, ಜತೆಗೆ ಪರಿಸರ ಸಂರಕ್ಷಣೆಯ ಅವಶ್ಯಕತೆ, ಕಾಡುಪ್ರಾಣಿಗಳು, ಮೃಗಾಲಯ ಅಕ್ವೇರಿಯಂ ನಂತೆ ರಚಿಸಲಾಗಿದ್ದ ಕಲಾಕೃತಿಗಳು ನೋಡುಗರ ಮೆಚ್ಚುಗೆಗೆ ಪಾತ್ರವಾದವು. ಜೊತೆಗೆ ಅಪರೂಪದ ಐತಿಹಾಸಿಕ ಕಟ್ಟಡಗಳು ಸೇರಿದಂತೆ ಆರೋಗ್ಯ, ಪರಿಸರ, ವಿಜ್ಞಾನ. ಆಹಾರಕ್ಕೆ ಸಂಬಂಧಿಸಿದ ನೂರಾರು ಕಲಾಕೃತಿಗಳು ವಸ್ತು ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ತಂದಿತ್ತು. ಪೋಷಕರು ಹಾಗೂ ಶಿಕ್ಷಣಾಸಕ್ತರು ಈ ಕಲಾಕೃತಿಗಳ ಪ್ರದರ್ಶನವನ್ನು ವೀಕ್ಷಿಸಿದ್ದು, ಒಂದು ದಿನದ ಕಾರ್ಯಕ್ರಮ ವಿದ್ಯಾರ್ಥಿಗಳಿಗೂ ಹೊಸಬಗೆಯ ಕಲಿಕೆಗೆ ದಾರಿಯಾಯಿತು.

ಶಾಲೆಯ ಆಡಳಿತ ಟ್ರಸ್ಟಿ ಅಲೀಂ ಅಲ್ತಾಫ್‌, ಟ್ರಸ್ಟಿ ಸನಾ ಅಲ್ತಾಪ್‌ ಮಾರ್ಗದರ್ಶನದಲ್ಲಿ ನಡೆದ ಈ ಅಪರೂಪದ ಕಾರ್ಯಕ್ರಮ ‘ಸ್ಕಿಲ್‌ ಸ್ಪೆಕ್ಟ್ರಾ’ದ ಆಯೋಜನೆಗೆ ಪ್ರಾಂಶುಪಾಲ ಗಿರೀಶ್‌ ಕಾಮತ್‌, ಉಪಪ್ರಾಂಶುಪಾಲ ಅನಿಲ್‌ ನಾಯಕ್ ಹಾಗೂ ಶಿಕ್ಷಕ ವೃಂದ ಅಪಾರ ಶ್ರಮ ವಹಿಸಿದೆ.

ಗಮನ ಸೆಳೆದ ಕನ್ನಡಪ್ರಭ ವರದಿಶನಿವಾರ ದಿನವಿಡೀ ನಡೆದ ವಸ್ತು ಪ್ರದರ್ಶನದಲ್ಲಿ ಗ್ರೇಡ್‌ ೧ ರ ವಿದ್ಯಾರ್ಥಿನಿ ಆಯಿಷಾ ಅನ್ಶಾ ತನ್ನ ಪೋಷಕರ ನೆರವಿನೊಂದಿಗೆ ಪ್ರದರ್ಶಿಸಿದ್ದ ಅಣೆಕಟ್ಟುವಿನ ಜೊತೆ ಕನ್ನಡಪ್ರಭ ಪತ್ರಿಕೆಯ ವರದಿಯೂ ಗಮನ ಸೆಳೆಯಿತು. ಕಳೆದ ಜ.೨೨ ರಂದು ಪುಟ ಸಂಖ್ಯೆ ೬ ರಲ್ಲಿ ಪ್ರಕಟವಾಗಿದ್ದ ‘ಭೀಕರ ಬರ: ರಾಜ್ಯದ ಡ್ಯಾಂಗಳು ಖಾಲಿ ಖಾಲಿ’ ಎಂಬ ವರದಿಯನ್ನೂ ಈ ಕಲಾಕೃತಿಯ ಪಕ್ಕದಲ್ಲಿ ಇಡಲಾಗಿತ್ತು. ವಾಟ್ಸಾಪ್‌ ಗ್ರೂಪ್‌ನಲ್ಲಿ ಬಂದಿದ್ದ ಈ ಮಹತ್ವದ ವರದಿಯ ಕಟ್ಟಿಂಗ್‌ ಅನ್ನು ಕಲಾಕೃತಿಯ ಜೊತೆ ಪ್ರದರ್ಶಿಸುವಂತೆ ತಾನು ಮಗಳಿಗೆ ಸಲಹೆ ನೀಡಿದೆ ಎಂದು ವಿದ್ಯಾರ್ಥಿನಿ ಆಯಿಶಾಳ ತಂದೆ ರಝಾಕ್‌ ಕಬಕಕಾರ್ಸ್ ‌‘ಕನ್ನಡಪ್ರಭʼಕ್ಕೆ ತಿಳಿಸಿದ್ದಾರೆ.