ಸಾರಾಂಶ
ಮಸ್ಕಿ ಪಟ್ಟಣದ ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿ ಮಣಿಕಂಠ ಸ್ಕೌಟ್ಸ್ ಮತ್ತು ಗೈಡ್ಸ್ ಪರೀಕ್ಷೆ ತೇರ್ಗಡೆಯಾದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪುರಸ್ಕಾರದ ಪ್ರಮಾಣ ಪತ್ರವನ್ನು ಶಾಸಕ ಆರ್. ಬಸನಗೌಡ ತುರ್ವಿಹಾಳ ವಿತರಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಮಸ್ಕಿ
ಭಾರತ ದೇಶದಲ್ಲಿ ಎಲ್ಲ ಜಾತಿ ಜನಾಂಗದವರು ನೆಮ್ಮದಿಯಾಗಿ ಜೀವನ ನಡೆಸಲು ಮುಖ್ಯ ಕಾರಣವೇ ನಮ್ಮ ಸಂವಿಧಾನ. ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಎಲ್ಲಾ ಜಾತಿ ಜನಾಂಗದವರು ಶಾಂತಿ ಸುವ್ಯವಸ್ಥೆಯಿಂದ ಜೀವನ ನಡೆಸಲು ಸಂವಿಧಾನ ಮುಖ್ಯವಾಗಿದೆ ಎಂದರು.ಸಾಂಸ್ಕೃತಿಕ ಕಾರ್ಯಕ್ರಮ
ಗಣರಾಜ್ಯೋತ್ಸವ ನಿಮಿತ್ತ ವಿವಿಧ ಶಾಲಾ ಮಕ್ಕಳಿಂದ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ದೇಶಭಕ್ತಿ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿದರೆ ಕಂದಾಯ ಇಲಾಖೆ ಜ್ಯೋತಿ ನೇತೃತ್ವದ ತಂಡ ನೃತ್ಯ ಮಾಡಿದ್ದು ಈ ಭಾರಿಯ ವಿಶೇಷತೆ ಆಗಿತ್ತು.ಈ ಸಂದರ್ಭದಲ್ಲಿ ತಹಸೀಲ್ದಾರ್ ಅರಮನೆ ಸುಧಾ, ತಾಪಂ ಇಒ ಉಮೇಶ, ಸಿಪಿಐ ಬಾಲಚಂದ್ರ ಡಿ.ಲಕ್ಕಂ, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ನೀರಾವರಿ ಇಲಾಖೆ ಎಂಜಿನಿಯರ್ ದಾವುದ್ ಸೇರಿ ಅನೇಕರಿದ್ದರು.ಮಸ್ಕಿ ವಿವಿಧೆಡೆ ಗಣರಾಜ್ಯೋತ್ಸವ
ಮಸ್ಕಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಧ್ವಜಾರೋಹಣ ಮಾಡಿದರು. ಹಾಗೂ ಕಾಂಗ್ರೆಸ್ ಕಚೇರಿಯಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ ಧ್ವಜಾರೋಹಣ ನೆರವೇರಿಸಿದರು. ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ತಹಸೀಲ್ದಾರ್ ಕಚೇರಿ ಸೇರಿ ವಿವಿಧ ಸರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಮುಖ್ಯಸ್ಥರು ಧ್ವಜಾರೋಹಣ ನೆರವೇರಿಸಿದರು.