ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಕರಾವಳಿಗೆ ಮಾತ್ರ ಸೀಮಿತಗೊಂಡಿದ್ದ ಕಂಬಳವು ಬೆಂಗಳೂರಿನಲ್ಲಿ ನಡೆಯುವ ಮೂಲಕ ವಿಶ್ವ ಮಟ್ಟದ ಮಾನ್ಯತೆ ಪಡೆದುಕೊಂಡಿದೆ. ಅತೀ ಹೆಚ್ಚು ಜನ ಸೇರುವ ಕ್ರೀಡೆಯಾಗಿರುವ ಕಂಬಳವು ಕೋಣಗಳ ಉತ್ಸವವಾಗಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.ಅವರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇರ್ಶವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯುವ ೩೧ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುರಕೆ ಕಂಬಳಕ್ಕೆ ಶನಿವಾರ ಬೆಳಗ್ಗೆ ಚಾಲನೆ ನೀಡಿ ಮಾತನಾಡಿದರು.
ಪುತ್ತೂರು ಕಂಬಳಕ್ಕೆ ಆರಂಭದಿಂದಲೂ ವಿಜೇತ ಕೋಣಗಳ ಒಂದು ಚಿನ್ನದ ಬಹುಮಾನವನ್ನು ಮುಳಿಯ ಕುಟುಂಬ ಪ್ರಾಯೋಜಿಸುತ್ತಾ ಬಂದಿದೆ. ಬೆಂಗಳೂರು ಕಂಬಳದಲ್ಲೂ ಇದೇ ಪದ್ಧತಿ ಪಾಲಿಸಿದ್ದೇವೆ ಎಂದರು.ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಆ್ಯಂಟನಿ ಪ್ರಕಾಶ್ ಮೊಂತೇರೋ, ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ, ಹಿರಿಯ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ, ಪರ್ಪುಂಜ ಗರಡಿ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ., ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಎಲ್.ಟಿ. ರಝಾಕ್ ಹಾಜಿ, ಶಿವರಾಮ ಆಳ್ವ, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ., ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಸಂಚಾಲಕ ವಸಂತ ಕುಮಾರ ರೈ ದುಗ್ಗಳ, ಮಾರಪ್ಪ ಶೆಟ್ಟಿ, ಸಂಜೀವ ಪೂಜಾರಿ ಕೂರೇಲು, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಅಜಿತ್ ಕುಮಾರ್ ಜೈನ್, ವಿದ್ಯಾಮಾತಾ ಅಕಾಡಮಿ ಅಧ್ಯಕ್ಷ ಭಾಗ್ಯೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ನಿರೂಪಿಸಿದರು.ಕಂಬಳ ಆರಂಭಕ್ಕೆ ಮುನ್ನ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ದೇವಸ್ಥಾನದ ಮೂಲ ನಾಗ ಸಾನಿಧ್ಯದಲ್ಲಿ ಕಂಬಳದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಕಂಬಳವನ್ನು ಪೂರ್ವಾಹ್ನ ೧೦.೩೨ರ ಮುಹೂರ್ತದಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭ ಪುಣ್ಯ ಕ್ಷೇತ್ರಗಳಿಂದ ತಂದ ದೇವತಾ ಪ್ರಸಾದಗಳನ್ನು ಕೆರೆಗೆ ಅರ್ಪಿಸಲಾಯಿತು. ನೇಗಿಲು ಕಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ, ಹಗ್ಗ ಹಿರಿಯ, ಕನೆಹಲಗೆ, ಅಡ್ಡ ಹಲಗೆ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಕಂಬಳ ಫಲಿತಾಂಶಕ್ಕಾಗಿ ಲೇಸರ್ ಫಿನಿಶಿಂಗ್ ಯಂತ್ರ ಅಳವಡಿಸಲಾಗಿತ್ತು.