ಸಾರಾಂಶ
ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳು ಜಂಟಿಯಾಗಿ ಶುಕ್ರವಾರ ನಿಟ್ಟೆಯ ಬಿ.ಸಿ. ಆಳ್ವ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿದ್ದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕ್ಯಾ. ಗಣೇಶ್ ಕಾರ್ಣಿಕ್ ದ್ವಜಾರೋಹಣ ಮಾಡಿದರು. ಕಾಲೇಜಿನ ಎನ್‌ಸಿಸಿ ಘಟಕದಿಂದ ಆಕಷ್ಕ ಪಥಸಂಚಲನ ನಡೆಯಿತು.
ಕನ್ನಡಪ್ರಭ ವಾರ್ತೆ ನಿಟ್ಟೆ
ದೇಶದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಚಿಂತಿಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳು ಜಂಟಿಯಾಗಿ ಶುಕ್ರವಾರ ನಿಟ್ಟೆಯ ಬಿ.ಸಿ. ಆಳ್ವ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿದ್ದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.ದೇಶದ ಪ್ರಜ್ಞಾವಂತ ಪ್ರತಿಯೋರ್ವ ಪ್ರಜೆಯೂ ತಲೆಯೆತ್ತಿ ಗೌರವಿಸುವಂತಹ ಶ್ರೇಷ್ಠತೆ ರಾಷ್ಟ್ರ ಧ್ವಜಕ್ಕೆ ಇದೆ. ದೇಶದ ಏಳಿಗೆಯ ನಿಟ್ಟಿನಲ್ಲಿ ಇಂದಿನ ಸರ್ಕಾರದ ಹಲವಾರು ಯೋಜನೆಗಳು ಮಹತ್ವವಾಗಿದೆ ಎಂದರು.
ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ಡಿ.ಆರ್.ಡಿ.ಒ. ಬೆಂಗಳೂರಿನ ಸೂಪರ್‌ವೈಸಿಂಗ್ ವಿಭಾಗದ ಜಂಟಿ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿರುವ ಕಮಾಂಡರ್ ಅಶ್ವಿನ್ ಎಂ. ರಾವ್ ಕಾರ್ಯಕ್ರಮದ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಶಿಕ್ಷಕ ವೃಂದ, ಶಿಕ್ಷಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿಟ್ಟೆ ಎನ್.ಎಸ್.ಎ.ಎಂ. ಶಾಲೆಯ ಆರ್ಮಿ ಎನ್.ಸಿ.ಸಿ ಘಟಕ, ತಾಂತ್ರಿಕ ಕಾಲೇಜಿನ ಎನ್.ಸಿ.ಸಿ ನೇವಲ್ ಘಟಕ ಹಾಗೂ ಕಾಲೇಜು ಕ್ಯಾಂಪಸ್ ಭಗ್ರತಾ ಸಿಬ್ಬಂದಿ ವತಿಯಿಂದ ಆಕರ್ಷಕ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ನಿಟ್ಟೆಯ ಬಿ.ಸಿ. ಆಳ್ವ ಕ್ರೀಡಾ ಸಂಕೀರ್ಣದಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ ಹಾಗೂ ಕೆ.ಆರ್.ಎಸ್. ಕ್ರಿಕೆಟ್ ಅಕಾಡೆಮಿ ಕಟಪಾಡಿ ವತಿಯಿಂದ ಜ.೨೬, ೨೭, ೨೮ ರಂದು ಆಯೋಜಿಸಲಾಗಿರುವ ೫೦ ವರ್ಷದ ಮೇಲಿನವರ ಕ್ರಿಕೆಟ್ ಪಂದ್ಯಾವಳಿಯನ್ನು ಉಡುಪಿ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಅಶೋಕ್ ಅಡ್ಯಂತಾಯ ಉದ್ಘಾಟಿಸಿದರು.ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಎನ್.ಸಿ.ಸಿ. ನೇವಲ್ ಘಟಕ ಸಂಯೋಜಕ ಡಾ.ಶಿವಪ್ರಸಾದ್ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಣ ಸಲಹೆಗಾರ್ತಿ ಹಾಗೂ ಶಾಲಾ ಎನ್.ಸಿ.ಸಿ. ಘಟಕದ ಸಂಯೋಜಕಿ ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.