ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬರುವಂತೆ ಶಾಲಾ ಶಿಕ್ಷಣ ಇಲಾಖೆ ಶ್ರಮಿಸಬೇಕು. ವಿಫಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರಿಕೆ ಮಾಡಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಶಿಕ್ಷಣ ಇಲಾಖೆಗೆ ತಾಕೀತು ಮಾಡಿದರು.ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ದ್ವಿತೀಯ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಂಠಿತಗೊಂಡಿದೆ. ಮಕ್ಕಳ ಮುಂದಿನ ಭವಿಷ್ಯ ರೂಪಿಸಲು ಶೇಕಡಾ 100ರಷ್ಟು ಫಲಿತಾಂಶ ಸಾಧಿಸುವತ್ತ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ಗಮನಿಸಿ, ಅವರಿಗೆ ವಿಶೇಷ ತರಗತಿಗಳನ್ನು ನಡೆಸಬೇಕು. ಶಾಲಾ ಶಿಕ್ಷಕರಿಗೆ ಕಾರ್ಯಾಗಾರಗಳು ಹಾಗೂ ಮಾರ್ಗದರ್ಶನ ಶಿಬಿರಗಳನ್ನು ಆಯೋಜಿಸಿ, ಮುಂದಿನ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸಲು ಪ್ರಯತ್ನಿಸಬೇಕು ಎಂದು ತುಮಕೂರು ಹಾಗೂ ಮಧುಗಿರಿ ಡಿಡಿಪಿಐಗಳಿಗೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆ ಬೆಳೆಯುವ ಕುರಿತು ಉತ್ತಮ ಪ್ರಶಂಸೆ ದೊರೆತಿದ್ದರೂ, ಈ ಸಾಲಿನಲ್ಲಿ ನಿಗದಿಪಡಿಸಿದ್ದ ಗುರಿ 4,560 ಹೆಕ್ಟೇರ್ ಪ್ರದೇಶದ ಪೈಕಿ ಕೇವಲ 659 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಸಿರಿಧಾನ್ಯ ಬೆಳೆ ವಿಸ್ತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕರ್ನಾಟಕ ರೈತ ಸುರಕ್ಷಾ–ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ 1,57,169 ರೈತರು ನೋಂದಣಿಯಾಗಿದ್ದಾರೆ. ಈವರೆಗೆ ಅರ್ಹ ರೈತರಿಗೆ 123 ಲಕ್ಷ ರೂ.ಗಳ ವಿಮಾ ಪರಿಹಾರ ವಿತರಣೆ ಮಾಡಲಾಗಿದೆ. ಬಾಕಿ ಉಳಿದ ರೈತರಿಗೆ ಶೀಘ್ರವೇ ಬೆಳೆ ವಿಮೆ ಪರಿಹಾರ ವಿತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳನ್ನು ಸಮರ್ಪಕವಾಗಿ ವಿತರಣೆ ಮಾಡುವಂತೆ ಮತ್ತು ಸರ್ಕಾರದಿಂದ ನೀಡುವ ಗೃಹ ಆರೋಗ್ಯ ಕಿಟ್‌ಗಳನ್ನು ಸಮರ್ಪಕವಾಗಿ ಮನೆ-ಮನೆಗೆ ತಲುಪಿಸುವಂತೆ ತಿಳಿಸಿದರಲ್ಲದೆ, ಹೆಚ್ಚಿನ ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಮೂಲಕವೇ ನಡೆಯುತ್ತಿರುವುದು ಆತಂಕಕಾರಿ ವಿಷಯ. ಬಡವರಿಂದ ಹಣ ಕೀಳುವ ಉದ್ದೇಶದಿಂದಲೇ ಇದು ನಡೆಯುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದಾಗ, ಹೆಚ್ಚಿನ ಸಂಖ್ಯೆಯಲ್ಲಿ ಸಿಜೇರಿಯನ್ ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ಖಾಸಗಿ ನರ್ಸಿಂಗ್ ಹೋಂಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಸಭೆಗೆ ಮಾಹಿತಿ ನೀಡಿದರು.ರಾಜ್ಯದಲ್ಲಿಯೇ ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚು ಸಿಜೇರಿಯನ್ ಪ್ರಕರಣಗಳ ಸಂಖ್ಯೆ ದಾಖಲಾಗುತ್ತಿರುವುದು ಅತ್ಯಂತ ವಿಷಾದನೀಯ. ನೋಟಿಸ್ ನೀಡುವುದರಿಂದ ಪ್ರಯೋಜನವಿಲ್ಲ, ಇದರ ಹಿಂದೆ ಇರುವ ದುರುದ್ದೇಶಿತ ವ್ಯವಹಾರಗಳನ್ನು ಪರಿಶೀಲಿಸಿ, ಹೆಚ್ಚು ಸಿಜೇರಿಯನ್ ಮಾಡುವ ನರ್ಸಿಂಗ್ ಹೋಂಗಳಿಗೆ ಬೀಗ ಹಾಕುವ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಖಡಕ್ ಸೂಚನೆ ನೀಡಿದರು.ಸಭೆಯಲ್ಲಿ ಶಾಸಕ ಟಿ.ಬಿ.ಜಯಚಂದ್ರ, ಶಾಸಕರಾದ ಬಿ. ಸುರೇಶಗೌಡ, ಜಿ.ಬಿ. ಜ್ಯೋತಿಗಣೇಶ್, ಸಿ.ಬಿ. ಸುರೇಶಬಾಬು, ಎಂ.ಟಿ. ಕೃಷ್ಣಪ್ಪ, ಎಚ್.ವಿ. ವೆಂಕಟೇಶ್, ಕೆ. ಷಡಕ್ಷರಿ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ. ಗೌಡ ಹಾಗೂ ಡಿ.ಟಿ. ಶ್ರೀನಿವಾಸ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ., ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))