ವಿವಿ ಉಳಿಸಲು ಆಗ್ರಹಿಸಿ ರಾಜ್ಯಾದ್ಯಂತ ಎಬಿವಿಪಿ ಹೋರಾಟ

| Published : Feb 23 2025, 12:32 AM IST

ಸಾರಾಂಶ

ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ, ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಶಿಕ್ಷಕ ತಜ್ಞರ ದುಂಡುಮೇಜಿನ ಸಭೆ ನಡೆಸಿ ವಿವಿಗೆ ಕಾಯಕಲ್ಪ ನೀಡುವ ದೃಷ್ಟಿಯಿಂದ ಈ ಸಾಲಿನ ವಾರ್ಷಿಕ ಬಜೆಟ್‌ನಲ್ಲಿಯೇ ಅನುದಾನವನ್ನು ಮೀಸಲಿಡಬೇಕೆಂದು ಆಗ್ರಹಿಸಲು ನಿರ್ಧರಿಸಲಾಯಿತು. ವಿವಿಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗುವುದಾಗಿ ಎಬಿವಿಪಿ ಜಿಲ್ಲಾ ಪ್ರಮುಖ್ ಕಾಂತರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ದುಂಡುಮೇಜಿನ ಸಭೆಯಲ್ಲಿ ರಾಜ್ಯದ ಮಾಜಿ ಉನ್ನತ ಶಿಕ್ಷಣ ಸಚಿವರು, ವಿಧಾನಪರಿಷತ್ ಸದಸ್ಯರು, ಶಿಕ್ಷಣ ತಜ್ಞರು, ವಿಶ್ರಾಂತ ಉಪಕುಲಪತಿಗಳು, ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರು, ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿ ಮುಖಂಡರು ಭಾಗವಹಿಸಿದ್ದರು. ಈ ದುಂಡುಮೇಜಿನ ಸಭೆಯಲ್ಲಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಅವೈಜ್ಞಾನಿಕ ಹಾಗೂ ಯಾವ ಶಿಕ್ಷಣ ತಜ್ಞರ ಶಿಫಾರಸ್ಸಿನ ಆಧಾರದ ಮೇಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಆತಂಕ ವ್ಯಕ್ತಪಡಿಸಲಾಯಿತು ಎಂದರು.

ಇದೇ ಸಂದರ್ಭದಲ್ಲಿ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಾಪನೆಗೊಂಡಿರುವ ವಿಶ್ವವಿದ್ಯಾಲಯಗಳು ಮುಚ್ಚುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಅಷ್ಟೇ ಅಲ್ಲದೆ ಪ್ರಾದೇಶಿಕವಾಗಿ ಆಯಾ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗಬಹುದು. ಈ ನಾಡಿನ ದೀನ ದಲಿತ, ಹಿಂದುಳಿದ, ಬಡ ಮತ್ತು ಮಾಧ್ಯಮ ರೈತಾಪಿ ವರ್ಗದ ಮಕ್ಕಳ ಉನ್ನತ ಶಿಕ್ಷಣದ ಕನಸು ನುಚ್ಚುನೂರಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಇಂದಿನ ದಿನಮಾನಗಳಲ್ಲಿ ರಾಜ್ಯ ಸರ್ಕಾರವು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದರ ಕುರಿತು ಗಮನಾರ್ಹ ಚಿಂತನೆಯನ್ನು ಮಾಡಬೇಕೇ ಹೊರತು ಕ್ಷುಲ್ಲಕ ಕುಂಟು ನೆಪ ಹೇಳುತ್ತಾ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಬಾರದು ಎನ್ನುವ ಕುರಿತು ಚರ್ಚೆ ಆಯಿತು ಎಂದು ಹೇಳಿದರು.

ಈ ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರ ಕೇವಲ ಆರ್ಥಿಕ ಸಂಪನ್ಮೂಲ ಒದಗಿಸಲು ಸಾಧ್ಯವಾಗುವುದಿಲ್ಲ ಎಂಬುದರ ಆಧಾರದ ಮೇಲೆ ಆದರೆ ಇದೊಂದು ಅತ್ಯಂತ ಅವಿವೇಕದ ತೀರ್ಮಾನವಾಗಿದ್ದು, ಈ ತೀರ್ಮಾನದಿಂದ ಸರ್ಕಾರ ಹಿಂದೆ ಸರಿಯಬೇಕು ಹಾಗೂ ಇವುಗಳಿಗೆ ಕಾಯಕಲ್ಪ ನೀಡುವ ದೃಷ್ಟಿಯಿಂದ ಈ ಸಾಲಿನ ವಾರ್ಷಿಕ ಬಜೆಟ್‌ನಲ್ಲಿಯೇ ಅನುದಾನವನ್ನು ಮೀಸಲಿಡಬೇಕೆಂದು ಆಗ್ರಹಿಸಲು ನಿರ್ಧರಿಸಲಾಯಿತು ಎಂದರು. ಈ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವು ರಾಜಕೀಯ ಪ್ರೇರಿತವಾಗಿರಬಹುದಲ್ಲದೆ ಖಾಸಗಿ ವಿಶ್ವವಿದ್ಯಾಲಯಗಳ ಲಾಭಿಯ ವ್ಯಾಪಕ ಪರಿಣಾಮವು ಇರಬಹುದೆಂಬ ಶಂಕೆ ವ್ಯಕ್ತವಾಯಿತು.

ಪತ್ರಿಕಾಗೋಷ್ಠಿಯಲ್ಲಿ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಜ್ಞಾನ ಆರ್‌. ಗೌಡ, ತಾಲೂಕು ಪ್ರಮುಖ್ ಮೋಹನ್, ಕಾರ್ಯಕರ್ತರಾದ ಶ್ರೇಯಾ, ಸ್ಮಿತಾ, ಇತರರು ಉಪಸ್ಥಿತರಿದ್ದರು.