ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ದರ್ಶನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು ಹಾಗೂ ಪ್ರವಾಸಿ ತಾಣಗಳ ಅಧ್ಯಯನ ಪ್ರವಾಸಕ್ಕೆ ಹೊರಟ ಶಾಲಾ ಮಕ್ಕಳಿಗೆ ಶುಭಕೋರಿ ಮಾತನಾಡಿದ ಅವರು, ಪಠ್ಯ ಪುಸ್ತಕಗಳಿಂದ ಲಭ್ಯವಾಗುವ ಜ್ಞಾನಕ್ಕಿಂತ ಹೊರತಾಗಿ ಪಠ್ಯೇತರ ವಿಷಯಗಳ ಅರಿವು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಶಿಕ್ಷಣ ಸುಧಾರಣಾ ಸಮಿತಿಯ ಸದಸ್ಯ ವೈ.ಕೆ. ದೇವರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಶಾಲೆಯ ನಾಲ್ಕು ಗೋಡೆಗಳೊಳಗಿನ ಶಿಕ್ಷಣಕ್ಕಷ್ಟೇ ಜ್ಞಾನ ಸೀಮಿತವಲ್ಲ; ಅನುಭವ ಮತ್ತು ವೀಕ್ಷಣೆಯ ಮೂಲಕವೇ ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಗೂ ದೃಷ್ಟಿಕೋನ ವಿಸ್ತಾರಗೊಳ್ಳುತ್ತದೆ ಎಂದು ಶಿಕ್ಷಣ ಸುಧಾರಣಾ ಸಮಿತಿಯ ಸದಸ್ಯ ವೈ.ಕೆ. ದೇವರಾಜ್ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ದರ್ಶನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು ಹಾಗೂ ಪ್ರವಾಸಿ ತಾಣಗಳ ಅಧ್ಯಯನ ಪ್ರವಾಸಕ್ಕೆ ಹೊರಟ ಶಾಲಾ ಮಕ್ಕಳಿಗೆ ಶುಭಕೋರಿ ಮಾತನಾಡಿದ ಅವರು, ಪಠ್ಯ ಪುಸ್ತಕಗಳಿಂದ ಲಭ್ಯವಾಗುವ ಜ್ಞಾನಕ್ಕಿಂತ ಹೊರತಾಗಿ ಪಠ್ಯೇತರ ವಿಷಯಗಳ ಅರಿವು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಐತಿಹಾಸಿಕ ಸ್ಮಾರಕಗಳು, ಸಾಂಸ್ಕೃತಿಕ ತಾಣಗಳು ಮತ್ತು ಪರಂಪರೆಯ ಮಹತ್ವವನ್ನು ಖುದ್ದಾಗಿ ವೀಕ್ಷಿಸಿ ತಿಳಿದುಕೊಳ್ಳುವುದರಿಂದ ಮಕ್ಕಳಲ್ಲಿ ದೇಶಭಕ್ತಿ, ಸಂಸ್ಕೃತಿ ಹಾಗೂ ಇತಿಹಾಸದ ಬಗ್ಗೆ ಗೌರವ ಹೆಚ್ಚಾಗುತ್ತದೆ. ಇಂತಹ ಅನುಭವಾಧಾರಿತ ಕಲಿಕೆ ಭವಿಷ್ಯದಲ್ಲಿ ವಿದ್ಯಾರ್ಥಿಗಳ ಬದುಕು ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಂಯೋಜಕ ವೈ.ಸಿ. ಮಲ್ಲೇಶ್, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಕರ್ನಾಟಕ ದರ್ಶನ ಯೋಜನೆಯಡಿ ನಾಲ್ಕು ದಿನಗಳ ಉಚಿತ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪ್ರವಾಸದ ಅವಧಿಯಲ್ಲಿ ಊಟ, ಉಪಹಾರ ಹಾಗೂ ವಸತಿ ವ್ಯವಸ್ಥೆಯನ್ನು ಸಹ ಸರ್ಕಾರವೇ ಒದಗಿಸುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪ್ರವಾಸಿ ತಾಣಗಳ ವೀಕ್ಷಣೆಯ ಜೊತೆಗೆ ಅಲ್ಲಿನ ಐತಿಹಾಸಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಬಿಆರ್‌ಸಿ ಶಂಕರ್, ಶಿಕ್ಷಣ ಸಂಯೋಜಕರಾದ ಹರೀಶ್ ಕುಮಾರ್, ಸತೀಶ್, ಗ್ರಾಮ ಪಂಚಾಯಿತಿ ಸದಸ್ಯ ಈಶ್ವರ್ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.