ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳಸಿಕೊಳ್ಳಬೇಕು

| Published : Feb 09 2024, 01:47 AM IST

ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳಸಿಕೊಳ್ಳಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ತಂದೆ - ತಾಯಿ ತಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು ಎಂಬು ಬಯಸಿ ಕಷ್ಟಪಡುತ್ತಾರೆ. ಅವರು ಕಂಡ ಕನಸು ಸಾಕಾರಗೊಳಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಂಸ್ಕಾರಯುತ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಬೇಕೆಂದು ಬೆಲ್ಲದ ಬಾಗೇವಾಡಿಯ ಮಹಾಂತೇಶ್ವರ ವಿರಕ್ತಮಠದ ಶ್ರೀ ಶಿವಾನಂದ ಸ್ವಾಮಿಗಳು ಹೇಳಿದರು.

ಅವರು ಹಿಡಕಲ್ ಡ್ಯಾಮಿನ ಶ್ರೀ ಬಸವೇಶ್ವರ ಸ್ವತಂತ್ರ ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತಂದೆ - ತಾಯಿ ತಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು ಎಂಬು ಬಯಸಿ ಕಷ್ಟಪಡುತ್ತಾರೆ. ಅವರು ಕಂಡ ಕನಸು ಸಾಕಾರಗೊಳಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಸತತ ಅಧ್ಯಯನಶೀಲರಾಗಿ ಜೀವನದಲ್ಲಿ ಯಶಸ್ವಿನ ಗುರಿಯನ್ನು ತಲುಪಬೇಕು ಎಂದು ಹೇಳಿದರು.

ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗುರಪ್ಪ ತಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕೋರ್ಸುಗಳನ್ನು ಆರಂಭಿಸಲು ನಾವು ಪ್ರಯತ್ನ ಮಾಡಿ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಕಲಿಯುವಂತೆ ಪ್ರೋತ್ಸಾಹ ಮಾಡುತ್ತೇವೆ ಮತ್ತು ಸಂಸ್ಥೆಯ ನಡೆದು ಬಂದ ದಾರಿ ಕುರಿತು ಮಾತನಾಡಿದರು. ಪ್ರಾಚಾರ್ಯ ಎಂ.ಎಲ್. ಮಗದುಮ್ಮ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಬೇಕಾದರೆ ಶಿಕ್ಷಣವು ಅವಶ್ಯವಾಗಿದ್ದು, ಜ್ಞಾನಾರ್ಜನೆ ಅರಗಿಸಿಕೊಂಡು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸತತ ಪರಿಶ್ರಮದಿಂದ ನಿಷ್ಠೆಯಿಂದ ಅಧ್ಯಯನ ಮಾಡಬೇಕೆಂದು ಹೇಳಿದರು.

ವಿಚಾರವಾದಿ ಡಿ. ಸಂತೋಷ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಎ.ಎಲ್ ದಳವಾಯಿ, ಎಸ್.ಸಿ. ಪಾಟೀಲ, ಎ.ಬಿ.ಗುರಕನವರ, ಆರ್‌.ಜಿ. ಹವಾಲ್ದಾರ, ಆರ್‌.ಪಿ. ನಾಯಿಕ, ಆರ್.ಆರ್. ಹಿರೇಮನಿ, ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.