ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಏಕೈಕ ವೆಂಕಟೇಶ (ಮಹಾರಾಣಿ) ಕೆರೆಯನ್ನು ತುಂಬಿಸಲಾಗಿದೆ. ತುಂಬಿರುವ ಈ ಕೆರೆಯನ್ನು ಜಮಖಂಡಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಭೇಟಿ ನೀಡಿ ವೀಕ್ಷಿಸಿದರು.ಸುಮಾರು 10 ದಿನಗಳಿಂದ ಹಿಡಕಲ್ ಜಲಾಶಯದಿಂದ ಬಂದ ನೀರನ್ನು ಮುಧೋಳ ಕೆರೆಗೆ ಹರಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಜಿಎಲ್‌ಬಿಸಿ ಅಧಿಕಾರಿಗಳು, ನಗರಸಭೆಯ ಸಿಬ್ಬಂದಿ ಸೇರಿದಂತೆ ಅನೇಕ ಅಧಿಕಾರಿಗಳು ಪೊಲೀಸರ ಸಹಾಯದೊಂದಿಗೆ ಈ ಕೆರೆ ತುಂಬಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಶತಮಾನಗಳ ಹಿಂದೆಯೇ ಆಗ ಮುಧೋಳದಲ್ಲಿರುವ ಸುಮಾರು ನಾಲ್ಕೈದು ಸಾವಿರ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿ ಘೋರ್ಪಡೆ ಮಹಾರಾಜರು ಈ ವೆಂಕಟೇಶ ಕೆರೆ ನಿರ್ಮಿಸಿದ್ದರು. ಆದರೆ, ಇಂದು ಮುಧೋಳ ಜನಸಂಖ್ಯೆ ಲಕ್ಷದವರೆಗೆ ಏರಿದ್ದರೂ ಅದೊಂದೇ ಕೆರೆಯಿಂದ ಕುಡಿಯುವ ನೀರು ಪೂರೈಸಬೇಕಿದೆ.ಭೀಕರ ಬರಗಾಲದಿಂದಾಗಿ ಕೆರೆಯಲ್ಲಿ ನೀರು ಸಂಗ್ರಹಣೆ ಕಡಿಮೆಯಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಕೆರೆ ವೀಕ್ಷಿಸಿ ನಗರದ ಜನತೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಡಳಿತ ಹಾಗೂ ನಗರಸಭೆಗೆ ಸೂಚಿಸಿದ್ದರು. ಅಲ್ಲದೆ ನಗರದ ಜನತೆಗೆ ಕುಡಿಯುವ ನೀರು ಪೂರೈಕೆಗಾಗಿ ಎಲ್ಲೆಲ್ಲಿ ಸಮಸ್ಯೆ ಇದೆಯೋ ಅಲ್ಲಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಲು ತಿಳಿಸಿದ್ದರು. ದಾನಿಗಳಿಂದಲೂ ನೀರು ಪಡೆದು ಕುಡಿಯುವ ನೀರನ್ನು ಪೂರೈಕೆ ಮಾಡಬೇಕೆಂದು ಹೇಳಿದ್ದರು. ಅದರ ಪರಿಣಾಮ ಕೆರೆಯಲ್ಲಿ ನೀರು ಸಂಗ್ರಹಣೆಗಾಗಿ ಯುದ್ಧೋಪಾದಿಯಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳ ಮತ್ತು ರೈತರ ಸಹಕಾರದೊಂದಿಗೆ ಹಗಲಿರುಳು ಕೆರೆಗೆ ನೀರು ತುಂಬಿಸಲಾಯಿತು.
ಈ ವೇಳೆ ತಹಸೀಲ್ದಾರ ವಿನೋದ ಹತ್ತಳ್ಳಿ, ನಗರಸಭೆ ಅಭಿಯಂತರ ಮಲ್ಲಪ್ಪ ಹೊಸೂರ, ರಾಜು ಚವ್ಹಾಣ ಹಾಗೂ ಇತರರು ಇದ್ದರು.