ಕನ್ನಡಪ್ರಭ ವಾರ್ತೆ ಹಾಸನ

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ರಾಜ್ಯಾದ್ಯಂತ ಅಕ್ರಮ ಗೋ ಸಾಗಾಟ ಹಾಗೂ ಗೋಹತ್ಯೆ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವುದನ್ನ ರದ್ದು ಪಡಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದ ಸಂಘಟನೆಗಳು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ನಗರದ ಉತ್ತರ ಬಡಾವಣೆಯ ಹಿಂದೂ ಭವನದಲ್ಲಿ ನಡೆದ ಸಭೆಯ ಬಳಿಕ ಸಂಘಟನೆ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ರವಾನಿಸಿದರು. ಇದೇ ವೇಳೆ ಜಿಲ್ಲಾ ಗೋ ರಕ್ಷಕ್ ಪ್ರಮುಖ್ ಶಶಿಧರ್ ಮಾಧ್ಯಮದೊಂದಿಗೆ ಮಾತನಾಡಿ, ಬಕ್ರೀದ್ ಸಂದರ್ಭದಲ್ಲಿ ಕಾನೂನುಬಾಹಿರವಾಗಿ ಜಾನುವಾರು ಸಾಗಾಣಿಕೆ ಹಾಗೂ ಗೋಹತ್ಯೆ ನಡೆಯುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಇಲಾಖೆಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮನವಿಯಲ್ಲಿ, ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಬೀಟ್ ಪೊಲೀಸರ ಮೂಲಕ ಅಕ್ರಮ ಕಸಾಯಿಖಾನೆಗಳನ್ನು ಗುರುತಿಸಿ ದಾಳಿ ನಡೆಸಬೇಕು. ಜಾನುವಾರು ಹತ್ಯೆ ನಡೆದ ಮನೆ, ಕಟ್ಟಡ ಹಾಗೂ ಖಾಲಿ ಜಾಗಗಳನ್ನು ವಶಪಡಿಸಿಕೊಂಡು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಲಾಗಿದೆ. ಅಕ್ರಮ ಗೋಹತ್ಯೆ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವಂತೆ ಕೂಡ ಮನವಿ ಮಾಡಲಾಗಿದೆ. ಜಾನುವಾರು ಸಾಗಾಣಿಕೆ ನಡೆಯುವ ಪ್ರದೇಶಗಳು, ಜಾನುವಾರು ಸಂತೆಯ ಸುತ್ತಮುತ್ತ ಹಾಗೂ ರಾಜ್ಯ ಗಡಿಭಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ಖಾಸಗಿ ವಾಹನಗಳು, ಕಂಟೈನರ್‌ಗಳು, ಹಾಲಿನ ಟ್ಯಾಂಕರ್‌ಗಳಲ್ಲೂ ಅಕ್ರಮ ಸಾಗಾಟ ನಡೆಯುತ್ತಿರುವ ಕಾರಣ ಎಲ್ಲ ವಾಹನಗಳ ತಪಾಸಣೆ ಕಡ್ಡಾಯಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಅಕ್ರಮ ಗೋಸಾಗಾಟ ಹಾಗೂ ಗೋಹತ್ಯೆ ಪ್ರಕರಣಗಳಲ್ಲಿ ಈಗಾಗಲೇ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರೋಪಿಗಳ ಮೇಲೆ ನಿಗಾ ಇರಿಸಬೇಕು. ವಶಪಡಿಸಿಕೊಳ್ಳುವ ಜಾನುವಾರುಗಳನ್ನು ಸರ್ಕಾರಿ ಗೋಶಾಲೆಗಳಲ್ಲಿ ಸಂರಕ್ಷಿಸಲು ವ್ಯವಸ್ಥೆ ಮಾಡಬೇಕು ಎಂದು ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020, ಜಾನುವಾರು ಸಾಗಾಣಿಕೆ ನಿಯಮಾವಳಿ -2021, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಿಂದೂಗಳಿಗೆ ಪೂಜನೀಯವಾಗಿರುವ ಗೋವಂಶದ ರಕ್ಷಣೆಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬದ್ಧವಾಗಿದ್ದು, ಯಾವುದೇ ಅಕ್ರಮ ಗೋಸಾಗಾಟ ಹಾಗೂ ಗೋಹತ್ಯೆ ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಭಜರಂಗದಳ ಹಾಸನ ಜಿಲ್ಲಾ ವಿದ್ಯಾರ್ಥಿ ಪ್ರಮುಖರಾದ ಜೀವನ್ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕದ ಶಾಲಾಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ಆದೇಶವನ್ನು ಹಿಂಪಡೆಯುವಂತೆ ರಾಜ್ಯಪಾಲರಿಗೆ ಮತ್ತೊಂದು ಮನವಿ ಸಲ್ಲಿಸಲಾಗಿದ್ದು, ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ವಿರೋಧಿಸಿದ ಸಂಘಟನೆ ಮುಖಂಡರು, ಶಾಲೆಗಳಲ್ಲಿ ಸಮವಸ್ತ್ರ ಸಂಹಿತೆ ಮುಂದುವರಿಯಬೇಕು ಎಂದು ಆಗ್ರಹಿಸಿದರು.

ಹಿಂದಿನ ಬಿಜೆಪಿ ಸರಕಾರವು 2022ರಲ್ಲಿ ಜಾರಿಗೊಳಿಸಿದ್ದ ಹಿಜಾಬ್ ನಿಷೇಧವನ್ನು ರದ್ದುಪಡಿಸಿ ಈಗಿನ ಕಾಂಗ್ರೆಸ್ ಸರಕಾರ ಆದೇಶ ಹೊರಡಿಸಿದೆ. ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವ ಸಂದರ್ಭದಲ್ಲೇ ಸರ್ಕಾರ ಆದೇಶ ಹೊರಡಿಸಿರುವುದು ಸರಿಯಲ್ಲ ಕೋರ್ಟಿಗೆ ಅಗೌರವ ತೋರಲಾಗಿದೆ. ಒಂದು ಮತದ ಓಲೈಕೆಗಾಗಿ ತರಲಾಗಿರುವ ಈ ಆದೇಶವನ್ನು ಕೂಡಲೇ ತಡೆಯಬೇಕು ಹಾಗೂ ಶಾಲಾಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಮುಂದುವರೆಯಬೇಕು. ಇಲ್ಲವಾದರೇ ಯುವಕರು ಮುಂದೆ ಕೇಸರಿ ಬಣ್ಣದ ಶಾಲನ್ನು ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರಾದ ಪ್ರಾಂತ ಮಂದಿರ ಅರ್ಚಕ ಪುರೋಹಿತ ಪ್ರಮುಖ್ ರಕ್ಷಿತ್ ಭಾರದ್ವಾಜ್, ಬಜರಂಗದಳ ಪ್ರಾಂತ ಗೋ ರಕ್ಷಾ ಸಹ ಪ್ರಮುಖ್ ಶರತ್, ಪ್ರಾಂತ ಪ್ರಚಾರ ಪ್ರಸಾರ ಸಹ ಪ್ರಮುಖ್ ಪ್ರಣವ್, ಜಿಲ್ಲಾ ಕಾರ್ಯದರ್ಶಿ ವಿಕಾಸ್, ಜಿಲ್ಲಾ ಸಹ ಕಾರ್ಯದರ್ಶಿ ಮಂಜು, ಜಿಲ್ಲಾ ಗೋರಕ್ಷಾ ಪ್ರಮುಖ್ ಶಶಿ ಸೂರ್ಯ, ಜಿಲ್ಲಾ ಸೇವಾ ಪ್ರಮುಖ್ ವಿಕ್ಕಿ, ಜಿಲ್ಲಾ ಸಹ ಸಂಯೋಜಕ್ ಯಶವಂತ್, ತಾಲೂಕು ಸಂಯೋಜಕ್ ವಿನಯ್, ನಗರ ಕಾರ್ಯದರ್ಶಿ ವಿಶ್ವಂತ್, ನಗರ ಸಹ ಕಾರ್ಯದರ್ಶಿ ಹರ್ಷ, ನಗರ ಸಂಯೋಜಕ್ ಸಚಿನ್, ನಗರ ಸಹ ಸಂಯೋಜಕ್ ಚೇತನ್, ಗ್ರಾಮಾಂತರ ಸಂಯೋಜಕ್ಕೆ ಅಕ್ಷಯ್ ನಗರ ಮಾತೃ ಶಕ್ತಿ ಪ್ರಮುಖ್ ಲಾವಣ್ಯ ಪಡಿಯಾರ್‌, ನಗರ ಸಹ ಪ್ರಮುಖ್ ಶೋಭಾ ಇತರರು ಉಪಸ್ಥಿತರಿದ್ದರು.