ಸಮೀಕ್ಷೆಗೆ ಹೋದ ಶಿಕ್ಷಕರಿಗೆ ಸಾಲು ಸಾಲು ಸಮಸ್ಯೆ!

| Published : Oct 06 2025, 01:01 AM IST

ಸಮೀಕ್ಷೆಗೆ ಹೋದ ಶಿಕ್ಷಕರಿಗೆ ಸಾಲು ಸಾಲು ಸಮಸ್ಯೆ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಸಮಸ್ಯೆ ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸಮಸ್ಯೆ ಇನ್ನೂ ಬಗೆ ಹರಿದಂತೆ ಕಾಣುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯದಲ್ಲಿ ಮತ್ತೆ ಸಾಕಷ್ಟು ತೊಡಕು ಉಂಟಾಗಿದೆ. ನೆಟ್ವರ್ಕ್, ತಾಂತ್ರಿಕ ದೋಷ, ಆ್ಯಪ್ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಯಿಂದಾಗಿ ಸಮೀಕ್ಷಾ ಕಾರ್ಯ ವಿಳಂಬವಾಗುವ ಸಾಧ್ಯತೆಯಿದೆ.

ಇಲ್ಲದಿರುವ ಮನೆಗೆ ಹೇಗೆ ಹೋಗಿ ಸರ್ವೆ ಮಾಡುವುದು ಎಂದು ಬಹುತೇಕ ಶಿಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದಾಗಿ ದಿನಕ್ಕೆ ಒಂದು ಮನೆಯನ್ನೂ ಪೂರ್ಣಗೊಳಿಸದಂತಹ ಪರಿಸ್ಥಿತಿ ಎದುರಾಗಿದೆ. ಎಲ್ಲ ಕಡೆ ಯುಎಚ್ಐಡಿ ನಂಬರ್ ಹುಡುಕಿಕೊಂಡು ಹೋದರೂ ಅಲ್ಲಿ ಮನೆ ಕೂಡ ಇಲ್ಲ ಎಂದು ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಓರ್ವ ಗಣತಿದಾರರಿಗೆ ಕೆಲವು ಕಡೆ (ಒಂದೇ ಕಡೆ ಮನೆ ಇರುವುದು) ಮನೆ ಒಂದು ಕಡೆ ಸಿಕ್ಕಿದರೆ, ಕೆಲವು ಗಣತಿದಾರರಿಗೆ 3-4 ಕಡೆ ಮತ್ತೆ ಕೆಲವರಿಗೆ ದೂರ ದೂರದ ಸ್ಥಳಗಳಲ್ಲಿ 5-6 ಕಡೆ ಮನೆ ಸಿಗುತ್ತವೆ.

ಅಂದರೆ ಮನೆಯ ಲೋಕೇಶನ್ ಅನ್ನು ಜಿಯೋ ಟ್ಯಾಗ್ ಮಾಡಿದ್ದು, ಗಣತಿದಾರರಿಗೆ 140-150 ಮನೆಗಳ ನಿಗದಿ (ದೂರದ ಕಾಡು, ಗುಡ್ಡಗಾಡು ಪ್ರದೇಶದಲ್ಲಿ 80-100 ಮನೆಗಳ ಹಂಚಿಕೆ ಮಾಡಲಾಗಿದೆ) ಇದ್ದರೆ, ಈಗ ಕೆಲವರಿಗೆ 170-175 ಮನೆಗಳನ್ನು ಸಮೀಕ್ಷೆ ಮಾಡಲು ಸೂಚಿಸಲಾಗಿದೆ.

ಇಲ್ಲಿ ಗಣತಿ ಮಾಡುವುದು ಸಮಸ್ಯೆಯಲ್ಲ. ಗಣತಿದಾರರಿಗೆ ನಿಗದಿಪಡಿಸಿರುವ ಮನೆಗಳು‌ ತಮ್ಮ ಗ್ಯೂಗಲ್ ಮ್ಯಾಪ್‌ನಲ್ಲಿ ಸಿಗುತ್ತಿಲ್ಲ. ಕೆಲವು ಕಡೆ ಖಾಲಿ ಮನೆ ಇವೆ. ಬಿಸಿಎಂ, ಕಂದಾಯ ಮತ್ತು ‌ಕೆಇಬಿ ಇಲಾಖೆಗಳ ನಡುವೆ ತಾಂತ್ರಿಕ ಸಮನ್ವಯದ ಕೊರತೆಯು ಮನೆಗಳ ಸಮೀಕ್ಷೆಯ ಕಾರ್ಯದಲ್ಲಿ ‌ತೊಡಕು ಉಂಟಾಗಿದ್ದು, ಸಮೀಕ್ಷಾ ಕಾರ್ಯ ವಿಳಂಬವಾಗಿದೆ.

ಆದರೆ ಮೇಲಾಧಿಕಾರಿಗಳು ಗಣತಿದಾರರ ಶಿಕ್ಷಕರ ಮೇಲೆ‌ ಕಠಿಣ ಮತ್ತು ಶಿಸ್ತಿನ ಕ್ರಮ ಎಂದು ಹೇಳುತ್ತಾರೆಯೇ ಹೊರತು, ಅವರು ಸ್ಥಳಕ್ಕೆ ಬರುತ್ತಿಲ್ಲ. ಇದರಿಂದ ಮೇಲಿನ ಅಧಿಕಾರಿಗಳಿಗೆ ಈ ಸಮಸ್ಯೆಗಳು ಅರ್ಥವಾಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಕೆಲವು ಕಡೆ ಮನೆ ಮಾಲೀಕರು ಗಣತಿದಾರರಿಗೆ ಸಹಕರಿಸುತ್ತಿಲ್ಲ. ಕೆಲವು ಕಡೆ ಶೇ.70-90 ಆಗಿದ್ದರೆ, ಕೆಲವು ಕಡೆ ಶೇ.50-60 ಸಮೀಕ್ಷೆ ಆಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ರಜಾ ದಿನಗಳು, ಹಬ್ಬ ಹರಿದಿನಗಳನ್ನು ಬಿಟ್ಟು ಶಿಕ್ಷಕರು ಈ ಗಣತಿ ಕಾರ್ಯದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಶೇ.70ರಷ್ಟು ಗುರಿ ಸಾಧನೆಯಾಗಿದೆ ಎಂದು ಹೇಳಲಾಗುತ್ತಿದೆ. ಶಿಕ್ಷಕರು ನಿಗದಿತ ಸಮಯದಲ್ಲಿ ಗಣತಿ ಕಾರ್ಯವನ್ನು ಮುಗಿಸಲು ಗಣತಿದಾರರಿಗೆ ಹಲವು ಸಮಸ್ಯೆಯಿದ್ದು, ಅದನ್ನು ಪರಿಹರಿಸಿದಲ್ಲಿ ಮಾತ್ರ ಗುರಿ ಸಾಧನೆ ಮಾಡಲು ಸಾಧ್ಯವಾಗುತ್ತದೆ.

ಗಣತಿ ಪ್ರದೇಶದಲ್ಲಿ ಹಲವು ಮನೆಗಳು ಖಾಲಿಯಾಗಿದ್ದು, ಅವುಗಳನ್ನು ತಕ್ಷಣ ಆ್ಯಪ್‌ನಿಂದ ತೆಗೆದು ಹಾಕಬೇಕು. ರೇಷನ್ ಕಾರ್ಡ್, ಆಧಾರ್ ಕಾರ್ಡ್‌ಗಳು ಇಲ್ಲದಿರುವ ಮನೆಗಳನ್ನು ಯುಎಚ್‌ಐಡಿ ಸಂಖ್ಯೆಯಿಂದ ತೆಗೆದು ಹಾಕಬೇಕು ಎಂಬ ಬೇಡಿಕೆ ಶಿಕ್ಷಕರದ್ದಾಗಿದೆ. ತಾಂತ್ರಿಕ ಸಿಬ್ಬಂದಿಯಿಂದ ಯಾವುದೇ ಸ್ಪಂದನೆಗಳು ದೊರಕುತ್ತಿಲ್ಲ. ಹಲವು ಮೇಲ್ವಿಚಾರಕರು ಸೂಕ್ತವಾದ ಮಾರ್ಗದರ್ಶನ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.ಅಧಿಕಾರಿಗಳು ಫೀಲ್ಡ್ ಇಳಿದು ಕೆಲಸ ಮಾಡಲಿ!

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಬಹುತೇಕರು ಶಿಕ್ಷಕರೇ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ. ಸಮೀಕ್ಷೆಗೆ ತೆರಳಿದ ಸಂದರ್ಭ ಅಲ್ಲಿ ತಾಂತ್ರಿಕ ದೋಷ, ನೆಟ್ವರ್ಕ್ ಸಮಸ್ಯೆ, ಆ್ಯಪ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಶಿಕ್ಷಕರನ್ನು ಕಾಡುತ್ತಿದೆ. ಆದರೆ ಸಮೀಕ್ಷೆ ಕಾರ್ಯ ಬೇಗ ಪೂರ್ಣಗೊಳಿಸುವಂತೆ ಮೇಲಿನ ಅಧಿಕಾರಿಗಳು ಶಿಕ್ಷಕರಿಗೆ ಸೂಚಿಸುತ್ತಿದ್ದಾರೆ. ಸಮೀಕ್ಷಾ ಸ್ಥಳದಲ್ಲಿನ ಸಾಕಷ್ಟು ಸಮಸ್ಯೆಗಳ ಬಗ್ಗೆ ಈ ಅಧಿಕಾರಿಗಳಿಗೆ ಯಾವುದೇ ಅರಿವಿಲ್ಲದಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಫೀಲ್ಡ್ ಗೆ ಇಳಿದು ಸಮೀಕ್ಷಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿಯನ್ನು ಅರಿತು ಶಿಕ್ಷಕರ ಸಮಸ್ಯೆ ಗೆ ಸ್ಪಂದಿಸಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ.ಸಮೀಕ್ಷೆಗೆ ಹೋದವರಿಗೆ ಹೀಗಾಯ್ತು ನೋಡಿ!

*ಗಣತಿ ಕಾರ್ಯ ಮಾಡಿಲ್ಲ ಎಂಬ ನೆಪದಿಂದ ಸೋಮವಾರಪೇಟೆ ತಾಲೂಕಿನಲ್ಲಿ ಸುಮಾರು 70 ಮಂದಿ ಶಿಕ್ಷಕರಿಗೆ ನೋಟಿಸ್ ನೀಡಿದ್ದಾರೆ.

* ಮಡಿಕೇರಿ ತಾಲೂಕಿನಲ್ಲಿ ಸಮೀಕ್ಷೆಗೆ ತೆರಳಿದ ಸಂದರ್ಭ ಜನಪ್ರದಾ ಎಂಬವರಿಗೆ ನಾಯಿ ಕಡಿದು ಚಿಕಿತ್ಸೆ ಪಡೆದುಕೊಂಡಿದ್ದಾರೆ.

*ಸುಂಟಿಕೊಪ ವ್ಯಾಪ್ತಿಯಲ್ಲಿ ಸಮೀಕ್ಷೆ ತೆರಳಿದ ಸಂದರ್ಭ ಮನೆಯಲ್ಲಿ ಸೌಭಾಗ್ಯ ಎಂಬ ಶಿಕ್ಷಕರಿಗೆ ಮನೆಯವರು ಯಾಕೆ ಸಮೀಕ್ಷೆಗೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.ಇಂದು ಶಿಕ್ಷಕರಿಂದ ಧರಣಿ

ಗಣತಿ ಕಾರ್ಯದಲ್ಲಿ ಲಾಗ್ ಇನ್ ಆಗಿಲ್ಲ ಎಂಬ ಕಾರಣಕ್ಕೆ ಸುಮಾರು 70 ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಮೀಕ್ಷೆಯಲ್ಲಿ ಸಾಕಷ್ಟು ಗಂಭೀರ ಸಮಸ್ಯೆ ಬಗ್ಗೆ ಸುಮಾರು 250ಕ್ಕೂ ಅಧಿಕ ಶಿಕ್ಷಕರು ಸೋಮವಾರಪೇಟೆ ಬಿ.ಇ.ಒ ಕಚೇರಿಯಲ್ಲಿ ಸೋಮವಾರ ಧರಣಿ ನಡೆಸಲಿದ್ದಾರೆ.

ಕೊಡಗು ಗುಡ್ಡಗಾಡು ಪ್ರದೇಶವಾದರೂ ಶಿಕ್ಷಕರು ಈ ಸಮೀಕ್ಷಾ ಕಾರ್ಯದಲ್ಲಿ ಗುರಿ ಸಾಧಿಸಿದ್ದಾರೆ. ಆದರೂ ಕೂಡ ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ಶಿಕ್ಷಕರಿಗೆ ನೋಟಿಸ್ ನೀಡುವುದಾಗಿ ಒತ್ತಡ ಹೇರುತ್ತಿದ್ದು, ಶಿಕ್ಷಕರು ಮಾನಸಿಕವಾಗಿ ತೀವ್ರ ನೋವು ಅನುಭವಿಸುವಂತಾಗಿದೆ. ಹೆಚ್ಚುವರಿ ಯು.ಎಚ್.ಐ.ಡಿ ಸಂಖ್ಯೆಯಿಂದ ಗಣತಿದಾರರಿಗೆ ಸಮಸ್ಯೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲೂ ಕೂಡ ಯು.ಎಚ್.ಐ.ಡಿ ಸಂಖ್ಯೆಯನ್ನು ಹಾಕಿದ್ದಾರೆ. ಇದರಿಂದ ನಮಗೆ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹಬ್ಬ ಹರಿದಿನ, ರಜೆ ದಿನವೂ ನಾವು ಕೆಲಸ ಮಾಡಿದ್ದೇವೆ. ಇಲ್ಲದಿರುವ ಮನೆ ಹೇಗೆ ಸರ್ವೆ ಮಾಡುವುದು? ಗಣತಿ ಕಾರ್ಯದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮನವರಿಕೆ ಮಾಡಿಕೊಂಡು ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕು.

। ಕೆ.ಎಸ್. ಪ್ರಸನ್ನ, ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೊಡಗು ಜಿಲ್ಲಾ ಘಟಕ