ಸುಳ್ಳು ಹೇಳಿ ಅಧಿಕಾರ ಹಿಡಿದ ಬಿಜೆಪಿ

| Published : Apr 22 2024, 02:17 AM IST

ಸಾರಾಂಶ

ಈ ಬಾರಿ ಜನರೆ ಅವರನ್ನು ಮನೆಗೆ ಕಳಿಸುತ್ತಾರೆ. ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹಲವು ಭಾಷೆಗಳ ಜ್ಞಾನ ಹೊಂದಿದ್ದಾರೆ.

ಕನ್ನಡಪ್ರಭ ವಾರ್ತೆ ಕೆರೂರ

ಪ್ರಧಾನಿ ಮೋದಿ ನೀಡಿದ ಭರವಸೆಗಳು ಸುಳ್ಳಿನ ಕಂತೆ. ಸ್ವಿಸ್ ಬ್ಯಾಂಕಿನಲ್ಲಿರುವ ಹಣ ತಂದು ಎಲ್ಲರ ಖಾತೆಗೆ ಹಾಕುವುದು, ರೈತರ ಆದಾಯ ದ್ವಿಗುಣ ಮಾಡುವುದು ಸೇರಿದಂತೆ ಅನೇಕ ಸುಳ್ಳುಗಳನ್ನು ಹೇಳಿ ಕೇಂದ್ರದಲ್ಲಿ ಎರಡು ಬಾರಿ ಅಧಿಕಾರ ಗದ್ದುಗೆ ಏರಿದ ಬಿಜೆಪಿಗೆ ಈ ಬಾರಿ ದೇಶದ ಮತದಾರ ಸೋಲಿನ ರುಚಿ ತೋರಿಸುತ್ತಾರೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಭಾನುವಾರ ತಮ್ಮ ಕ್ಷೇತ್ರ ವ್ಯಾಪ್ತಿಯ ಬಾದಾಮಿ ತಾಲೂಕಿನ ಚಲಕಟ್ಟಿ, ತಾಂಡಾ, ಸಾಗನೂರ, ಫಕೀರ ಬೂದಿಹಾಳ, ಹೊಸಕೋಟಿ, ಕೈನಕಟ್ಟಿ ಗ್ರಾಮಗಳಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬರಗಾಲದಿಂದ ತತ್ತರಿಸಿದ ರಾಜ್ಯದ ರೈತರಿಗೆ ಪರಿಹಾರ ಕೊಡದೆ ಕೇಂದ್ರ ಸರ್ಕಾರ ಭಾರಿ ಮೋಸ ಮಾಡಿದೆ. ಇಂಥ ಸರ್ಕಾರ ನಮಗೆ ಬೇಕಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ನುಡಿದಂತೆ ನಡೆದಿದೆ. ಚುನಾವಣೆಯಲ್ಲಿ ಭರವಸೆ ಕೊಟ್ಟಂತೆ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದೆ. ಮಹಾ ಜನತೆ ನಮ್ಮನ್ನು ನಂಬಿದ್ದಾರೆ. ಲೋಕಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿವಿಧತೆಯಲ್ಲಿ ಏಕತೆ ಸಾಧಿಸಿದೆ ಭಾರತ. ಅದಕ್ಕೆ ಪುಷ್ಠಿ ನೀಡುವಂತೆ ಎಲ್ಲ ಸಮುದಾಯದವರನ್ನು ಒಂದು ಗೂಡಿಸಿಕೊಂಡು ಪ್ರಗತಿಯತ್ತ ಸಾಗುತ್ತಾ ಬಂದಿರುವುದು ಕಾಂಗ್ರೆಸ್‌. ಬಿಜೆಪಿಯವರು ಕೋಮುವಾದ ಸೃಷ್ಠಿಸಿ, ಜನರ ಮನಸ್ಸಿನಲ್ಲಿ ಗೊಂದಲದ ವಾತಾವರಣ ನಿರ್ಮಿಸಿ ಸಾಮರಸ್ಯ ಹಾಳುಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ರೈತರು, ನೇಕಾರರು, ಕೂಲಿ ಕಾರ್ಮಿಕರು ತತ್ತರಿಸುತ್ತಿದ್ದಾರೆ. ಇಂಥ ಜನ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕೆಂದು ಕರೆ ನೀಡಿದರು.

ಬಾಗಲಕೋಟ ಕ್ಷೇತ್ರದ ಮತದಾರರು ಪಿ.ಸಿ.ಗದ್ದಿಗೌಡರಿಗೆ ನಾಲ್ಕು ಬಾರಿ ಅವಕಾಶ ಕೊಟ್ಟಿದ್ದಾರೆ. ಆದರೂ ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ. ಎಷ್ಟೋ ಗ್ರಾಮಗಳ ಜನರು ಅವರನ್ನು ನೋಡಿಯೆ ಇಲ್ಲವೆಂದು ಹೇಳುತ್ತಾರೆ. ಈ ಬಾರಿ ಜನರೆ ಅವರನ್ನು ಮನೆಗೆ ಕಳಿಸುತ್ತಾರೆ. ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹಲವು ಭಾಷೆಗಳ ಜ್ಞಾನ ಹೊಂದಿದ್ದಾರೆ. ಉತ್ಸಾಹದ ಬುಗ್ಗೆಯಂತಿರುವ ಅವರನ್ನು ಮೇ.7 ರಂದು ನಡೆಯುವ ಲೋಕ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅವರ ಹಸ್ತದ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಬರಗಾಲದಿಂದ ₹35 ಸಾವಿರ ಕೋಟಿ ಹಾನಿಯಾಗಿದೆ. ಮೊದಲ ಹಂತದಲ್ಲಿ ₹18 ಸಾವಿರ ಕೋಟಿ ನೆರವು ನೀಡುವಂತೆ ಮನವಿ ಮಾಡಿತ್ತು. ಆದರೆ, ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್‌ ಅವರು ಗ್ಯಾರಂಟಿ ಯೋಜನೆಗಳಿಗೆ ಬೊಕ್ಕಸ ಬರಿದು ಮಾಡಿ, ನಮ್ಮ ಬಳಿ ಕೈ ಒಡ್ಡುತ್ತಿದ್ದೀರಿ ಎಂದು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಅವರ ನೆರವು ಭಿಕ್ಷೆಯಲ್ಲ. ನಮ್ಮ ರಾಜ್ಯದಿಂದ ಸಂಗ್ರಹ ಮಾಡುವ ತೆರಿಗೆಯ ನಮ್ಮ ಪಾಲಿನ ಹಕ್ಕಿನ ಹಣ. ಅವರಿಗೆ ರೈತರ ಕಷ್ಟ ನಷ್ಟ ನೋವಿನ ಅರಿವಿಲ್ಲ ಎಂದು ಕಿಡಿ ಕಾರಿದರು.

ಅಭಿವೃದ್ಧಿ ಮಾಡದ ಬಿಜೆಪಿ ಸರ್ಕಾರಕ್ಕೆ ಹಾಗೂ ಬಾಗಲಕೋಟ ಕ್ಷೇತ್ರದ ಅಭಿವೃದ್ಧಿ ಮರೆತ ಪಿ.ಸಿ.ಗದ್ದಿಗೌಡರಿಗೆ ಸೋಲಿನ ರುಚಿ ತೋರಿಸಬೇಕಿದೆ. ಈ ಬಾರಿ ಬಾಗಲಕೋಟೆ ಮತ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪಕ್ಷ ನನ್ನನ್ನು ಆಯ್ಕೆ ಮಾಡಿದೆ. ಕ್ಷೇತ್ರದ ಅಭಿವೃದ್ಧಿಗೆ ನನ್ನನ್ನು ಅರ್ಪಿಸಿಕೊಂಡು ನಿಮ್ಮ ಮಗಳಾಗಿ ಸೇವೆ ಸಲ್ಲಿಸುವೆ ಎಂದರು.

ಪ್ರಚಾರ ಸಭೆಯಲ್ಲಿ ಬಸವಪ್ರಭು ಸರನಾಡಗೌಡ್ರ, ಕಸ್ತೂರಿ ಬಾಯಿ ನಾಡಗೌಡ್ರ, ಸುಭಾಸ ಮೆಳ್ಳಿ, ರಾಮಚಂದ್ರ ಯಡಹಳ್ಳಿ, ಎಂ.ಬಿ.ಸೌದಾಗರ, ಬಸವರಾಜ ಸಂಶಿ, ಅಶೋಕ ಕೊಪ್ಪದ, ಹನಮಂತ ನಾಗನೂರ, ಧರ್ಮಣ್ಣ ಭಗವತಿ, ಪ್ರವೀಣ ಚಿಕ್ಕೂರ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಭಾಗವಹಿಸಿದ್ದರು.

ಕೋಟ್...ಬರಗಾಲದಿಂದ ತತ್ತರಿಸಿದ ರಾಜ್ಯದ ರೈತರಿಗೆ ಪರಿಹಾರ ಕೊಡದೆ ಕೇಂದ್ರ ಸರ್ಕಾರ ಭಾರಿ ಮೋಸ ಮಾಡಿದೆ. ಇಂಥ ಸರ್ಕಾರ ನಮಗೆ ಬೇಕಾ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ನುಡಿದಂತೆ ನಡೆದಿದೆ. ಚುನಾವಣೆಯಲ್ಲಿ ಭರವಸೆ ಕೊಟ್ಟಂತೆ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದೆ. ಮಹಾ ಜನತೆ ನಮ್ಮನ್ನು ನಂಬಿದ್ದಾರೆ.

ಜೆ.ಟಿ.ಪಾಟೀಲ . ಶಾಸಕ