ನಾಡಿದ್ದು ಬೆಂಗಳೂರಿನಲ್ಲಿ ಗಾಣಿಗರ ಹಬ್ಬ ಆಚರಣೆ

| Published : Jan 09 2025, 12:47 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗಾಣಿಗರ ಸಂಘದ ಜಿಲ್ಲಾಧ್ಯಕ್ಷರು, ಟ್ರಸ್ಟಿ, ಜಿ.ಅಂಕಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿಶ್ವಗಾಣಿಗರ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ನಗರೂರು ಬಡಾವಣೆಯಲ್ಲಿ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಸಂಸ್ಥಾಪಕ ಗುರು ಪೂರ್ಣಾನಂದಪುರಿ ಮಹಾಸ್ವಾಮಿಗಳ ಪೀಠಾರೋಹಣದ ದ್ವಿತೀಯ ವಾರ್ಷಿಕೋತ್ಸವ ಮತ್ತು ಪ್ರವಚನಾಲಯ, ಶಾಲಾ ಕಟ್ಟಡ ಹಾಗೂ ಪ್ರಸಾದ ಮನೆಯ ಕಟ್ಟಡಗಳ ಉದ್ಘಾಟನೆ ಸಮಾರಂಭ-ಗಾಣಿಗರ ಹಬ್ಬವು ಜ.11 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಮುದಾಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಗಾಣಿಗರ ಸಂಘದ ಜಿಲ್ಲಾಧ್ಯಕ್ಷರು, ಟ್ರಸ್ಟಿ, ಜಿ.ಅಂಕಪ್ಪ ಮನವಿ ಮಾಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಮಠದ ಪೀಠಾಧಿಪತಿ ಪೂರ್ಣಾನಂದಪುರಿ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀಶೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಜಯೇಂದ್ರಪುರಿಸ್ವಾಮೀಜಿ ಮತ್ತು ಪೂರ್ಣಾನಂದಪುರಿ ಮಹಾಸ್ವಾಮೀಜಿ ದ್ವಿತೀಯ ಪೀಠಾರೋಹಣ ನೆರವೇರಲಿದೆ ಎಂದರು.

ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಸಾದ ಮನೆ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಗಾಣಿಗ ಸೂರ್ಯಗ್ರಂಥ ಬಿಡುಗಡೆ ಮಾಡಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎನ್‌.ವೇಣುಗೋಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್‌ ಗುಂಡೂರಾವ್ ಸಾಮಾಜಿಕ ಜಾಲತಾಣಗಳ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ಗ್ರಂಥಾಲಯ ಕಟ್ಟಡ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ಹಿಂದುಳಿದ ವರ್ಗ ಮತ್ತು ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಡಗಿ, ಸರ್ಕಾರದ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಚ್.ಎಂ.ರೇವಣ್ಣ, ಸಮುದಾಯದ ಪ್ರಥಮ ಐಎಎಸ್ ಅಧಿಕಾರಿ ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ ಡಾ.ಬಿ.ವಿ.ವಾಸಂತಿ ಅಮರ್ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.ಸಮಾರಂಭದಲ್ಲಿ ಗಾಣಿಗ ಸಮುದಾಯವನ್ನು 2ಎನಲ್ಲಿ ಮುಂದುವರಿಸಬೇಕು, ಮುಂದಿನ ಬಜೆಟ್ ನಲ್ಲಿ ಗಾಣಿಗ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರು. ಅನುದಾನ ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುತ್ತದೆ. ಸಮುದಾಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಠದಲ್ಲಿ ವಿದ್ಯಾರ್ಥಿ ನಿಲಯ, ಶಾಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಮಾರಂಭಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸಿ ಯಶ್ವಸಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗಾಣಿಗರ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಂಶೆಟ್ಟಿ, ಗೌರವಾಧ್ಯಕ್ಷ ಎಸ್.ಮಹದೇವಪ್ಪ, ಕಾರ್ಯಾಧ್ಯಕ್ಷ ಜಿ.ಶಿವಕುಮಾರ್, ಉಪಾಧ್ಯಕ್ಷ ರಾದ ಎಸ್ ಎಂಬಿಟಿ ಆರ್.ಸಿದ್ದರಾಜು, ವೆಂಕಟಚಲ ಯಳಂದೂರು, ಖಜಾಂಚಿ ಮಹದೇವು, ದೀಪಕ್ ಹಾಜರಿದ್ದರು.