ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಮಾನವ ಹಕ್ಕುಗಳಿಂದ ವಂಚಿತರಾಗಿ ವಿಶ್ವದಾದ್ಯಂತ ಕಷ್ಟಕರ ಜೀವನ ನಡೆಸುತ್ತಿದ್ದ ಸಮಯದಲ್ಲಿ ಕೋಟ್ಯಂತರ ನಾಗರಿಕರಿಗೆ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ವರ್ಣಭೇದ ನೀತಿ, ಮೂಲಭೂತ ಸೌಲಭ್ಯಗಳ ವಂಚನೆ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸುವಂತೆ ವಿಶ್ವಸಂಸ್ಥೆಯಿಂದ ಮಾನವ ಹಕ್ಕು ನಿಯಮಾವಳಿಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಯಿತು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ ವಡಿಗೇರಿ ಹೇಳಿದರು.ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯ ಶ್ರೀ ಬಸವರಾಜೇಂದ್ರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಮತ್ತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾತಿ, ಮತ, ಧರ್ಮಗಳ ಭೇದವಿಲ್ಲದೇ ಎಲ್ಲರಿಗೂ ಶಿಕ್ಷಣ ನೀಡುವ ಕಾನೂನು ಕೂಡ ಮಾನವ ಹಕ್ಕುಗಳಲ್ಲಿ ಒಂದಾಗಿದೆ. ಯಾವುದೇ ವರ್ಗಗಳಿದ್ದರೂ ಶಿಕ್ಷಣದಲ್ಲಿ ವಂಚಿತರಾಗಬಾರದು ಎಂಬ ಉದ್ದೇಶದಿಂದ ಎಲ್ಲರಿಗೂ ಸಮಾನ ನ್ಯಾಯವನ್ನು ಶಿಕ್ಷಣ ನೀಡಲಾಗಿದೆ ಮತ್ತು ಎಲ್ಲರಿಗೂ ಶಿಕ್ಷಣ ಕಡ್ಡಾಯ ಮಾಡಲಾಗಿದೆ. ಜೀತದಾಳು ಮತ್ತು ವರ್ಣಬೇಧ ನೀತಿಗಳು ಇಡೀ ವಿಶ್ವದಲ್ಲಿ ಶೇ. 90ರಷ್ಟು ಜಾರಿಯಲ್ಲಿತ್ತು. ವರ್ಣಬೇಧ ಪ್ರಭಾವವನ್ನು ಬಳಸಿ ಜೀತದಾಳುವಿನಂತಹ ಕಠಿಣ ಕೆಲಸ ಕಾರ್ಯಗಳಿಗೆ ಅಮೆರಿಕ, ಫ್ರಾನ್ಸ್ ದೇಶಗಳು ಸೇರಿದಂತೆ ವಿಶ್ವದೆಲ್ಲೆಡೆ ದಕ್ಷಿಣ ಆಫ್ರಿಕಾದ ಖಂಡದ ಜನರನ್ನು ಬಳಸಲಾಗುತ್ತಿತ್ತು ಎಂದರು.
ವಿಶ್ವದಾದ್ಯಂತ ಇದರ ವಿರುದ್ಧ ಚಳವಳಿ, ಪ್ರತಿಭಟನೆಗಳು ಹೆಚ್ಚಾದಂತೆ ವಿಶ್ವಸಂಸ್ಥೆಯು ಎಚ್ಚೆತ್ತು 1948ರ ಡಿಸೆಂಬರ್ 10ರಂದು ಪ್ಯಾರಿಸ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಕಾನೂನು ಜಾರಿಗೆ ನಿರ್ಣಯ ಕೈಗೊಂಡಿತು. ಈ ನಿರ್ಧಾರದಿಂದ ವಿಶ್ವದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮ ಆರೋಗ್ಯ, ಶಿಕ್ಷಣ ಮತ್ತು ವಸತಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳು ಸಿಗಲು ಸಾಧ್ಯವಾಯಿತು. ಭಾರತದಲ್ಲಿ ಜೀತ ಪದ್ಧತಿಗೆ ಕಡಿವಾಣ ಹಾಕುವುದರೊಂದಿಗೆ, ಮಾನವೀಯತೆಗೆ ಸವಾಲಾಗಿದ್ದ ಎಲ್ಲ ಕ್ಷೇತ್ರಗಳಲ್ಲಿರುವ ಕಾರ್ಮಿಕರಿಗೆ ನ್ಯಾಯ, ಶಿಕ್ಷಣ ವಂಚಿತರಿಗೆ ಶಿಕ್ಷಣ, ವಯೋವೃದ್ಧರಿಗೆ ಜೀವನದ ಹಕ್ಕುಗಳು ಸಿಗಲು ಅವಕಾಶವಾಯಿತು. ಇದರಿಂದ ನಾಗರಿಕ ಸಮಾಜದ ಸ್ವಾತಂತ್ರ್ಯ ಎತ್ತಿ ಹಿಡಿಯಲು, ಸರ್ವರ ಏಳಿಗೆ ಮತ್ತು ಅಭಿವೃದ್ಧಿಯಾಗಲು ಸಾಧ್ಯವಾಗಿದೆ. ಮತ್ತೊಂದೆಡೆ ಮಾನವ ಹಕ್ಕುಗಳ ಉಲ್ಲಂಘನೆಗೆ ಕಡಿವಾಣ ಹಾಕಲು ಪ್ರಮುಖ ಅಸ್ತ್ರವಾಗಿದೆ. ಶಿಕ್ಷಣವು ಎಲ್ಲರ ಹಕ್ಕು ಆಗಿದ್ದು, ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಸಾಧನೆ ಮಾಡುವುದರ ಮೂಲಕ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು. ವಿದ್ಯಾಭ್ಯಾಸ ಮಾಡುವ ವಯಸ್ಸಿನಲ್ಲಿ ಕಾರ್ಮಿಕ ಕೆಲಸಗಳನ್ನು ಮಾಡುವುದು ಮತ್ತು ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಆಗುವುದು ಕೂಡ ಕಾನೂನು ಅಪರಾಧಗಳಾಗಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಕೆ.ಆರ್ ದಯಾನಂದ ಮಾತನಾಡಿ, ಮಾನವ ಹಕ್ಕುಗಳ ಮೂಲಕ ಶಿಕ್ಷಣಕ್ಕೆ ಪ್ರತ್ಯೇಕ ಸ್ಥಾನವನ್ನು ನೀಡಿದ್ದು, ನ್ಯಾಯಾಧೀಶರು ಮತ್ತು ಕಾನೂನು ತಜ್ಞರು ನೀಡಿರುವ ಮಾಹಿತಿಯನ್ನು ಅರಿತು ಎಲ್ಲರೂ ವಿದ್ಯಾಭ್ಯಾಸವನ್ನು ಪಡೆಯಲು ಮುಂದಾಗಬೇಕು. ಮನೆಗಳಲ್ಲಿ ಪೋಷಕರು ನೀಡುವ ಮಾಡುವ ಆಸ್ತಿಗಿಂತ ಅವರು ಕೊಡಿಸುವ ಶಿಕ್ಷಣವೇ ಆಸ್ತಿಯಾಗಿದೆ. ಮನೆಗಳಲ್ಲಿರುವ ಹಿರಿಯರನ್ನು ನೋಡಿಕೊಳ್ಳುವುದು ಮತ್ತು ಅವರಿಗೆ ಎಲ್ಲ ರೀತಿಯ ರಕ್ಷಣೆ ಸೌಲಭ್ಯಗಳನ್ನು ನೀಡುವುದು ಮತ್ತು ಪಡೆಯುವುದು ಮಾನವ ಹಕ್ಕುಗಳಲ್ಲಿ ಪ್ರಮುಖ ಅಂಶಗಳಾಗಿದೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಜೊತೆಯಲ್ಲಿ ನಮ್ಮ ದೇಶದ ಸಂವಿಧಾನ ಮತ್ತು ಕಾನೂನುಗಳ ಅರಿವನ್ನು ಪಡೆದು ನಾಗರಿಕ ಸಮಾಜಕ್ಕೂ ಸಂದೇಶಗಳನ್ನು ನೀಡಬೇಕು ಎಂದರು.
ವಕೀಲರಾದ ಟಿ.ಟಿ ವಿರೂಪಾಕ್ಷ, ಸಿದ್ದಮಲ್ಲಪ್ಪ ಮತ್ತು ಜಮೀಲ್ ಪಾಷಾ ಇವರು ಮಾನವ ಹಕ್ಕುಗಳು ಮತ್ತು ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು. ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ವೈ.ಸಿ ಮಲ್ಲೇಶ್, ಕಾರ್ಯಕ್ರಮ ಸಂಯೋಜಕ ಮುದ್ದುರಾಜ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.ಫೋಟೋ:ಅರಸೀಕೆರೆಯ ಶ್ರೀ ಬಸವರಾಜೇಂದ್ರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಮತ್ತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ ವಡಿಗೇರಿ, ಇತರರು ಉದ್ಘಾಟಿಸಿದರು.