ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈಶಪ್ರಭು ಸಂಸ್ಥೆ ಕಾರ್ಯ ಶ್ಲಾಘನೀಯ

| Published : Feb 05 2024, 01:48 AM IST

ಸಾರಾಂಶ

ಪಿ.ಬಿ.ಪಾಟೀಲ ಮತ್ತು ಹಿರಿಯರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಬೇಕೆಂಬ ಮಹಾದಾಸೆಯಿಂದ ಹುಟ್ಟು ಹಾಕಿದ ಸಂಸ್ಥೆ ಇಂದು ಡಾ.ವಿಶ್ವನಾಥ ಪಾಟೀಲ ಅವರ ನೇತೃತ್ವದಲ್ಲಿ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಉಕ ಭಾಗದಲ್ಲಿ ಮಠಾಧೀಶರು ಶೈಕ್ಷಣಿಕ ಕ್ರಾಂತಿಯನ್ನೆ ಮಾಡಿದ ರೀತಿಯಲ್ಲಿ ಮಲ್ಲಮ್ಮನ ಬೆಳವಡಿ ಭಾಗದ ಗ್ರಾಮೀಣ ಭಾಗದಲ್ಲಿ ಶ್ರೀ ಈಶಪ್ರಭು ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಅವರು ತಾಲೂಕಿನ ವೀರವನಿತೆ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಭಾನುವಾರ ಜರುಗಿದ ಶ್ರೀ ಈಶಪ್ರಭು ಶಿಕ್ಷಣ ಸಂಸ್ಥೆಯ ೫೦ನೇ ವರ್ಷದ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಬೆಳವಡಿ ಪುಟ್ಟ ಗ್ರಾಮದಲ್ಲಿ ಈರಣಗೌಡ ಪಾಟೀಲ, ಪಿ.ಬಿ.ಪಾಟೀಲ ಮತ್ತು ಹಿರಿಯರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಬೇಕೆಂಬ ಮಹಾದಾಸೆಯಿಂದ ಹುಟ್ಟು ಹಾಕಿದ ಸಂಸ್ಥೆ ಇಂದು ಡಾ.ವಿಶ್ವನಾಥ ಪಾಟೀಲ ಅವರ ನೇತೃತ್ವದಲ್ಲಿ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಸಂಸ್ಥೆ ನಡೆಸಬೇಕಾದರೆ ಸಂಕಷ್ಠ ಎದುರಿಸಬೇಕಾಗುತ್ತದೆ. ಕೆಎಲ್‌ಇ ಸಂಸ್ಥೆ ಕೋರೆ ಅವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು ಹೆಮ್ಮೆಯ ವಿಷಯ. ಈಶಪ್ರಭು ಸಂಸ್ಥೆ ಕೂಡಾ ಇನ್ನಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಇರುವ ಇಂದಿನ ದಿನಗಳಲ್ಲಿ 50 ವರ್ಷಗಳಿಂದ ಬೆಳವಡಿ ಭಾಗದಲ್ಲಿ ಉತ್ತಮ ಶಿಕ್ಷಣ ಪ್ರಸಾರ ಮಾಡುತ್ತಿರುವ ಈಶಪ್ರಭು ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯ. ಸಂಸ್ಕಾರವಂತ ನಾಗರಿಕ ಸಮಾಜ ನಿರ್ಮಾಣ ಉತ್ತಮ ಶಿಕ್ಷಣ ಸಂಸ್ಥೆಗಳಿಂದ ಮಾತ್ರ ಸಾಧ್ಯ. ಜನರಿಗೆ ಅನ್ನ, ಅಕ್ಷರ, ಆಶ್ರಯ, ಆರೋಗ್ಯವನ್ನು ನೀಡುವುದು ಸರ್ಕಾರಗಳಿಂದಷ್ಟೇ ಸಾಧ್ಯವಿಲ್ಲ. ನಾಡಿನ ಅನೇಕ ಮಠ ಮಾನ್ಯಗಳು ಈಶಪ್ರಭು ಶಿಕ್ಷಣ ಸಂಸ್ಥೆಗಳಂತ ಅನೇಕ ಸಂಸ್ಥೆಗಳ ಪಾತ್ರ ದೊಡ್ಡದು ಎಂದು ಹೇಳಿದರು.

ಕೆಎಲ್‌ಇ ಸಂಸ್ಥೆ ಚೇರಮನ್‌ ಪ್ರಭಾಕರ ಕೋರೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಈಶಪ್ರಭು ಶಿಕ್ಷಣ ಸಂಸ್ಥೆ ಇನ್ನೂ ಹೆಚ್ಚಿನ ಪ್ರಗತಿ ಕಂಡು ನಾಡಿನ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯಲಿ ಎಂದು ಆಶಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೆರಮನ್ನ ಡಾ .ವಿಶ್ವನಾಥ ಪಾಟೀಲ ಮಾತನಾಡಿ, 1971 ರಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ನರಳುತ್ತಿದ್ದ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನಮ್ಮ ತಂದೆ ಈರಣಗೌಡ ಪಾಟೀಲ ಹಿರಿಯರೊಂದಿಗೆ ಕೂಡಿಕೊಂಡು ತೆರೆದ ಶಿಕ್ಷಣ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದು ಗ್ರಾಮೀಣ ಪ್ರದೇಶದ ವಿದ್ಯಾರ್ಜನೆ ಕೇಂದ್ರವಾಗಿದೆ ಎಂದರು. ಚನ್ನಮ್ಮ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ವಿಪ ಸದಸ್ಯ ಹನಮಂತ ನಿರಾಣಿ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿದರು. ಖ್ಯಾತ ಸಾಹಿತಿ ಡಾ.ವೈ.ಎಮ್.ಯಾಕೊಳ್ಳಿ ಉಪನ್ಯಾಸ ನೀಡಿದರು. ಸಾನಿಧ್ಯ ಮುರಗೋಡ ನೀಲಕಂಠ ಸ್ವಾಮೀಜಿ, ಹೂಲಿ ಹಿರೇಮಠದ ಶಿವಮಹಾಂತೇಶ ಶಿವಾಚಾರ್ಯ ಸ್ವಾಮಿಜಿ ವಹಿಸಿದ್ದರು. ಸಂಸ್ಥೆಯ ಆವರಣದಲ್ಲಿ ಪ್ರತಿಷ್ಟಾಪಿಸಲಾಗಿರುವ ಬೆಳವಡಿ ಸಂಸ್ಥಾನದ ರಾಜಾ ಈಶಪ್ರಭು ಹಾಗೂ ರಾಣಿ ಮಲ್ಲಮ್ಮನ ಅಶ್ವಾರೂಢ ನೂತನ ಪ್ರತಿಮೆಗಳನ್ನು ಅನಾವರಣಗೊಳಿಸಲಾಯಿತು.ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಡಾ. ಗಿರೀಶ ಸೊನಾಲಕರ, ಶ್ರೀ ಸೋಮೇಶ್ವರ ಶುಗರ್ಸ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ, ಮಲ್ಲಮ್ಮ ಸಹಕಾರಿ ಅಧ್ಯಕ್ಷ ಡಾ.ಆರ್.ಬಿ.ಪಾಟೀಲ, ಎಂ.ಐ.ಪಾಟೀಲ, ನಿಂಗಪ್ಪ ಕರೀಕಟ್ಟಿ, ಜೈನೂಲಸಾಬ ಹುಜರತಿ ಹಾಗೂ ಈಶಪ್ರಭು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ವೇದಿಕೆ ಮೇಲಿದ್ದರು. ಸಂಸ್ಥೆಯಡಿ ನಡೆಯುವ ಎಲ್ಲ ಶಾಲೆ ಕಾಲೇಜುಗಳ ಶಿಕ್ಷಕ, ಶಿಕ್ಷಕಿಯರು, ಉಪನ್ಯಾಸಕರು ಸಿಬ್ಬಂದಿ ವರ್ಗ, ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮದ ಪ್ರಮುಖರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕ ಎಸ್.ಎಂ.ಪಾಟೀಲ ಸ್ವಾಗತಿಸಿದರು. ಉಪನ್ಯಾಸಕ ಎಂ.ಪಿ.ಉಪ್ಪಿನ, ವಿ.ಎಂ.ಕಾಡೇಶನವರ, ಜಿ.ಎಸ್. ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು. ಗಣ್ಯರನ್ನು, ದಾನಿಗಳನ್ನು ಸತ್ಕರಿಸಲಾಯಿತು.